ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ಕ್ರಿಮಿನಲ್ ದೂರು ದಾಖಲಾಗಿದೆ. ಭಾರತದ ಪೌರತ್ವ ಪಡೆಯುವ ಮೊದಲೇ ಸೋನಿಯಾ ಗಾಂಧಿಯವರ ಹೆಸರು ದೆಹಲಿಯ ಮತದಾರರ ಪಟ್ಟಿಯಲ್ಲಿತ್ತು ಎಂದು ಈ ದೂರಿನಲ್ಲಿ ಆರೋಪಿಸಲಾಗಿದೆ.
ಸೋನಿಯಾ ಗಾಂಧಿ ಅವರು ಅಧಿಕೃತವಾಗಿ 1983ರ ಏಪ್ರಿಲ್ 30ರಂದು ಭಾರತದ ಪೌರತ್ವ ಪಡೆದಿದ್ದಾರೆ, ಆದರೆ ಅವರ ಹೆಸರು 1980ರ ಮತದಾರರ ಪಟ್ಟಿಯಲ್ಲಿ ದಾಖಲಾಗಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
1982ರಲ್ಲಿ ಅವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿ, ಮತ್ತೆ 1983ರಲ್ಲಿ ಭಾರತದ ಪೌರತ್ವ ಪಡೆದ ನಂತರ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ವಕೀಲ ವಿಕಾಸ್ ತ್ರಿಪಾಠಿ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ. ಇಂತಹ ಕ್ರಮಗಳು ಪ್ರಜಾಪ್ರತಿನಿಧಿ ಕಾಯಿದೆಗೆ ವಿರುದ್ಧವಾಗಿವೆ ಎಂದು ಅವರು ತಿಳಿಸಿದ್ದಾರೆ.
ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ದಾಖಲಾದ ಈ ಅರ್ಜಿಯನ್ನು ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ವೈಭವ್ ಚೌರಾಸಿಯಾ ಅವರು ವಿಚಾರಣೆ ನಡೆಸಿದರು. ಸೋನಿಯಾ ಗಾಂಧಿ ವಿರುದ್ಧದ ದೂರಿನ ಸ್ವೀಕಾರಕ್ಕೆ ಪ್ರಾಥಮಿಕ ಒಪ್ಪಿಗೆ ನೀಡಿ, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 10ಕ್ಕೆ ಮುಂದೂಡಿದ್ದಾರೆ.