ನವದೆಹಲಿ: ಕರ್ನಾಟಕ ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಶಾಸಕರಿಂದ ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ಪಕ್ಷದ ದೆಹಲಿ ವರಿಷ್ಠರು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಲೆದಂಡಕ್ಕೆ ನಿರ್ಧರಿಸಿದ್ದಾರೆ.ಅಶೋಕ್ ಸ್ಥಾನಕ್ಕೆ ಆರ್‌ಎಸ್‌ಎಸ್ ಮೂಲದ ವಿ.ಸುನೀಲ್‌ಕುಮಾರ್ ಹಾಗೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರವಿಂದ ಬೆಲ್ಲದ್ ಇಲ್ಲವೇ ಕೇಂದ್ರ ಸಚಿವ ವಿ.ಸೋಮಣ್ಣ ಅವರನ್ನು ತರಲು ಚಿಂತನೆ ನಡೆಸಿದ್ದಾರೆ.ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ಪಕ್ಷದ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರ್ವಾಲ್ ನೀಡಿದ ವರದಿ ಆಧಾರದ ಮೇಲೆ ಕರ್ನಾಟಕ ಬಿಜೆಪಿಯಲ್ಲಿ ಭಾರೀ ಬದಲಾವಣೆಗೆ ಮುಂದಾಗಿದ್ದಾರೆ.ವರದಿ ಆಧಾರದ ಮೇಲೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಗೂ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಅವರು, ಕೇಂದ್ರದಲ್ಲಿ ರಾಜ್ಯ ಪ್ರತಿನಿಧಿಸುವ ಸಚಿವರು, ಕೆಲವು ಹಿರಿಯ ಸಂಸದರೊಂದಿಗೆ ಬದಲಾವಣೆ ಸಂಬಂಧ ಸಮಾಲೋಚನೆ ನಡೆಸಿದ್ದಾರೆ.
ಮೈತ್ರಿ ಪಕ್ಷ ಜೆಡಿಎಸ್‌ನ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಜೊತೆಯೂ ಚರ್ಚಿಸಿರುವ ಉಭಯ ನಾಯಕರು, ಅಶೋಕ್ ಹಾಗೂ ವಿಜಯೇಂದ್ರ ಅವರನ್ನು ದೆಹಲಿಗೆ ಕರೆಸಿಕೊಂಡು ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ಖುದ್ದು ವಿವರಣೆ ಪಡೆದಿದ್ದಾರೆ.
ಸಂಪುಟ ಪುನರ್ ರಚನೆ
ಪ್ರಧಾನಿ ನರೇಂದ್ರ ಮೋದಿ ತಮ್ಮ ನೇತೃತ್ವದ ಕೇಂದ್ರ ಸಂಪುಟವನ್ನು ಪುನರ್ ರಚನೆ ಮಾಡುತ್ತಿದ್ದು, ನಂತರ ಇಲ್ಲವೇ ಅದಕ್ಕೂ ಮೊದಲೇ ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ ಆಗಲಿದೆ.ಅಧಿಕಾರದಿಂದ ಕೆಳಗಿಳಿಯುವ ಅಶೋಕ್ ಮತ್ತು ವಿಜಯೇಂದ್ರ ಅವರನ್ನು ರಾಷ್ಟ್ರೀಯ ಸಂಘಟನೆಗೆ ಬಳಸಿಕೊಳ್ಳುವ ಬಗ್ಗೆ ಚಿಂತನೆ ಮಾಡಿರುವ ವರಿಷ್ಠರು, ಕೇಂದ್ರ ಸಂಪುಟ ಪುನರ್ ರಚನೆ ವೇಳೆ ಬಿ.ವೈ.ರಾಘವೇಂದ್ರ ಅವರಿಗೆ ಮಂತ್ರಿ ಸ್ಥಾನ ಕಲ್ಪಿಸುವ ಬಗ್ಗೆಯೂ ಚರ್ಚೆ ನಡೆದಿದೆ.
