ಶೃಂಗೇರಿ ಕ್ಷೇತ್ರ ಅಂಚೆ ಮತ ಮರು ಎಣಿಕೆ ಪ್ರಕರಣ: ಸುಪ್ರೀಂಕೋರ್ಟ್‌ನಲ್ಲಿ ಇಂದು ನಿರ್ಣಾಯಕ ವಿಚಾರಣೆ

ನವದೆಹಲಿ, ಮೇ 21: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಮರು ಎಣಿಕೆ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ನಿರ್ಣಾಯಕ ವಿಚಾರಣೆ ಗುರುವಾರ ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದ್ದು, ರಾಜ್ಯದ ರಾಜಕೀಯ ವಲಯದಲ್ಲಿ ಕುತೂಹಲ ಮನೆ ಮಾಡಿದೆ.

ನ್ಯಾಯಮೂರ್ತಿ ಸಂಜಯ್ ಕುಮಾರ್ ಮತ್ತು ನ್ಯಾಯಮೂರ್ತಿ ವಿನೋದ ಚಂದ್ರ ಅವರು ನೇತೃತ್ವದ ದ್ವಿಸದಸ್ಯ ಪೀಠ ಈ ಪ್ರಕರಣದ ವಿಚಾರಣೆ ನಡೆಸಲಿದೆ.

ಪ್ರಕರಣದ ಹಿನ್ನೆಲೆ
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ವಿರುದ್ಧ 201 ಮತಗಳ ಅಂತರದಿಂದ ಜಯ ಗಳಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಸೋಲು ಒಪ್ಪದ ಜೀವರಾಜ್ ಅವರು ಚುನಾವಣಾ ಅಕ್ರಮ ಆರೋಪ ಹೊರಿಸಿ ಅಂಚೆ ಮತಗಳ ಮರು ಎಣಿಕೆ ಕೋರಿ ಕರ್ನಾಟಕ ಹೈಕೋರ್ಟ್‌ನ ಮೊರೆ ಹೋಗಿದ್ದರು. ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ಅಂಚೆ ಮತಗಳ ಮರು ಎಣಿಕೆಗೆ ಆದೇಶಿಸಿತ್ತು.

ಮರು ಎಣಿಕೆ ಮತ್ತು ಹೊಸ ತಿರುವು
ಹೈಕೋರ್ಟ್ ಆದೇಶದಂತೆ ಮೇ 2ರಂದು ನಡೆದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಜೀವರಾಜ್ 52 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಅಲ್ಲದೆ ಶಾಸಕರಾಗಿ ಪ್ರಮಾಣವಚನವನ್ನೂ ಸ್ವೀಕರಿಸಿದ್ದರು. ಇದರಿಂದ ಕ್ಷೇತ್ರದಲ್ಲಿ ಭಾರಿ ರಾಜಕೀಯ ಕೋಲಾಹಲ ಸೃಷ್ಟಿಯಾಗಿತ್ತು.

ಮರು ಎಣಿಕೆ ವೇಳೆ ಅಂಚೆ ಮತಪತ್ರಗಳನ್ನು ತಿರುಚಲಾಗಿದೆ ಎಂದು ಆರೋಪಿಸಿದ ರಾಜೇಗೌಡ ಅವರು, ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಸುಪ್ರೀಂಕೋರ್ಟ್ ಮಧ್ಯಂತರ ತಡೆ
ಮೇ 11ರಂದು ಅರ್ಜಿಯ ಪ್ರಾಥಮಿಕ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಮರು ಎಣಿಕೆ ಪ್ರಕ್ರಿಯೆ ಹಾಗೂ ಅದರ ಫಲಿತಾಂಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹಾಗೂ ಮರು ಎಣಿಕೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತ್ತು. ಈ ಆದೇಶದಿಂದ ರಾಜೇಗೌಡರ ಶಾಸಕತ್ವ ಮತ್ತೆ ಜಾರಿಗೆ ಬಂದಿತ್ತು.

ಇಂದಿನ ವಿಚಾರಣೆಯಲ್ಲಿ ಶೃಂಗೇರಿ ಕ್ಷೇತ್ರದ ನಿಜವಾದ ಪ್ರತಿನಿಧಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆಯೇ ಎಂಬ ನಿರೀಕ್ಷೆಯಲ್ಲಿ ಕ್ಷೇತ್ರದ ಮತದಾರರು ಮತ್ತು ರಾಜ್ಯ ರಾಜಕೀಯ ವಲಯ ಎದುರು ನೋಡುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು