ನವದೆಹಲಿ : ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ(Oil price) ದಿಢೀರ್ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಭಾರತ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ(Crude oil) ಸರಾಸರಿ ಬೆಲೆ ಪ್ರತಿ ಬ್ಯಾರೆಲ್ಗೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಶೀಘ್ರದಲ್ಲೇ $100 (Dollar) ಗಡಿ ದಾಟುವ ಆತಂಕ ಎದುರಾಗಿದೆ. ಜಾಗತಿಕ ಉದ್ವಿಗ್ನತೆಯ ನಡುವೆಯೂ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಗಣನೀಯವಾಗಿ ಹೆಚ್ಚಿರುವುದು ಸರ್ಕಾರಿ ತೈಲ ಕಂಪನಿಗಳ ಮೇಲೆ ಒತ್ತಡ ಹೆಚ್ಚಿಸಿದೆ.
ಬ್ಯಾರೆಲ್ಗೆ 100 ಡಾಲರ್ ತಲುಪಿದ ಕಚ್ಚಾ ತೈಲ
ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶದ (PPAC) ಅಧಿಕೃತ ದತ್ತಾಂಶದ ಪ್ರಕಾರ, ಭಾರತೀಯ ಕಚ್ಚಾ ತೈಲದ ಬುಟ್ಟಿಯ (Indian Crude Basket) ದರವು ಬುಧವಾರದ ವೇಳೆಗೆ $99.35ಕ್ಕೆ ತಲುಪಿದ್ದು, ಶುಕ್ರವಾರದ ವೇಳೆಗೆ $100ರ ಗಡಿ ದಾಟುವ ನಿರೀಕ್ಷೆಯಿದೆ. ಅಮೆರಿಕ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಯುದ್ಧ ಭೀತಿ, ಅಮೆರಿಕದಲ್ಲಿ ಇಂಧನ ದಾಸ್ತಾನು ಕುಸಿತ ಹಾಗೂ ರಷ್ಯಾದ ತೈಲ ಸಂಸ್ಕರಣಾಗಾರಗಳ ಮೇಲೆ ಉಕ್ರೇನ್ ನಡೆಸುತ್ತಿರುವ ದಾಳಿಗಳು ಜಾಗತಿಕವಾಗಿ ಕಚ್ಚಾ ತೈಲ ದರ ಭುಗಿಲೆದ್ದಿರುವುದಕ್ಕೆ ಮುಖ್ಯ ಕಾರಣಗಳಾಗಿವೆ.
ಪೆಟ್ರೋಲ್, ಡೀಸೆಲ್ ಜಾಗತಿಕ ಬೆಲೆ ಗರಿಷ್ಠ ಮಟ್ಟಕ್ಕೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಜೊತೆಗೆ ಸಂಸ್ಕರಿಸಿದ ಇಂಧನ ದರವೂ ಜಿಗಿತ ಕಂಡಿದೆ. 2026ರ ಸೆಪ್ಟೆಂಬರ್ ಮೊದಲ ವಾರದ ಅಂಕಿ-ಅಂಶಗಳ ಪ್ರಕಾರ, ಭಾರತದ ಪೆಟ್ರೋಲ್ ಬೆಂಚ್ಮಾರ್ಕ್ ದರವು 3 ತಿಂಗಳ ಗರಿಷ್ಠ ಮಟ್ಟವಾದ $120.65ಕ್ಕೆ ಹಾಗೂ ಡೀಸೆಲ್ ಬೆಂಚ್ಮಾರ್ಕ್ ದರವು 4 ತಿಂಗಳ ಗರಿಷ್ಠ ಮಟ್ಟವಾದ $156.44ಕ್ಕೆ ಏರಿಕೆಯಾಗಿದೆ.
ಆಗಸ್ಟ್ನಲ್ಲಿ ಹೆಚ್ಚಿದ ಇಂಧನ ಬಳಕೆ
ಒಂದೆಡೆ ಜಾಗತಿಕ ತೈಲ ಬೆಲೆ ಏರಿಕೆಯಾಗುತ್ತಿದ್ದರೆ, ಇನ್ನೊಂದೆಡೆ ದೇಶೀಯವಾಗಿ ಇಂಧನ ಬೇಡಿಕೆ ಹೆಚ್ಚಾಗುತ್ತಿದೆ. ಪಿಪಿಎಸಿ (PPAC) ನೀಡಿರುವ ತಾತ್ಕಾಲಿಕ ವರದಿಯ ಪ್ರಕಾರ, ದೇಶದಲ್ಲಿ ಆಗಸ್ಟ್ 2026ರಲ್ಲಿ ಪೆಟ್ರೋಲ್ ಬಳಕೆ ಶೇ. 7.9 ರಷ್ಟು ಏರಿಕೆಯಾಗಿದ್ದು, ಬೃಹತ್ ಪ್ರಮಾಣಕ್ಕೆ (3,824 ಸಾವಿರ ಮೆಟ್ರಿಕ್ ಟನ್) ತಲುಪಿದೆ.
