ಅಪ್ರಾಪ್ತ ಗರ್ಭಿಣಿಯರ ಪ್ರಮಾಣ ಧಿಡೀರ್ ಏರಿಕೆ – ರಾಯಚೂರು ನಂ 1

ಬೆಂಗಳೂರು : ಕರ್ನಾಟಕದಲ್ಲಿ (Karnataka ) ಬಾಲಗರ್ಭಿಣಿಯರ (Child Pregnancy )ಸಂಖ್ಯೆ ಏರಿಕೆಯಾಗುತ್ತಿರುವುದು ಭಾರಿ ಆತಂಕ ಮೂಡಿಸಿದೆ. ಆರೋಗ್ಯ ಇಲಾಖೆಯ ಆರ್‌ಸಿಎಚ್‌ ಪೋರ್ಟಲ್‌ನಲ್ಲಿ ದಾಖಲಾದ ಇತ್ತೀಚಿನ ವರದಿ ಪ್ರಕಾರ, ಪ್ರಸಕ್ತ ಸಾಲಿನ ಏಪ್ರಿಲ್‌ನಿಂದ ಜುಲೈವರೆಗಿನ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಬರೋಬ್ಬರಿ 725 ಬಾಲಗರ್ಭಿಣಿಯರ ಪ್ರಕರಣಗಳು ಪತ್ತೆಯಾಗಿವೆ. ವರದಿಯ ಅಂಕಿಅಂಶಗಳ ಪ್ರಕಾರ, ಒಟ್ಟು ಪ್ರಕರಣಗಳಲ್ಲಿ 17 ವರ್ಷ ವಯಸ್ಸಿನ ಬಾಲಕಿಯರೇ ಹೆಚ್ಚಾಗಿದ್ದಾರೆ. 521 ಬಾಲಕಿಯರು 17 ವರ್ಷದವರಾಗಿದ್ದರೆ, 19 ವರ್ಷದ 127, 15 ವರ್ಷದ 57 ಹಾಗೂ 15 ವರ್ಷ ವಯಸ್ಸಿನ 21 ಬಾಲಕಿಯರು ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ.

ಜಿಲ್ಲಾವಾರು ಪಟ್ಟಿಯಲ್ಲಿ ರಾಯಚೂರು ಅತ್ಯಂತ ಮುಂಚೂಣಿಯಲ್ಲಿದ್ದು, ಇಲ್ಲಿ ಬರೋಬ್ಬರಿ 100 ಪ್ರಕರಣಗಳು ಪತ್ತೆಯಾಗಿವೆ. ಕರಾವಳಿ ಭಾಗಗಳಾದ ದಕ್ಷಿಣ ಕನ್ನಡದಲ್ಲಿ 4 ಹಾಗೂ ಉಡುಪಿಯಲ್ಲಿ 2 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಒಟ್ಟು ಸಂಖ್ಯೆಯಲ್ಲಿ ಕೊಂಚ ಇಳಿಮುಖ ಕಂಡಿದ್ದರೂ, ನಾಲ್ಕೇ ತಿಂಗಳಲ್ಲಿ ಈ ಪ್ರಮಾಣ ವರದಿಯಾಗಿರುವುದು ಕಳವಳಕಾರಿ.

ಹದಿಹರೆಯದ ಗರ್ಭಧಾರಣೆಗೆ ಕೇವಲ ಬಾಲ್ಯವಿವಾಹವೊಂದೇ ಕಾರಣವಲ್ಲದೆ ಲೈಂಗಿಕ ಕಿರುಕುಳ, ಬಡತನ, ಶಿಕ್ಷಣದ ಕೊರತೆ ಮತ್ತು ಕುಟುಂಬ ಕಲಹಗಳಂತಹ ಸಾಮಾಜಿಕ ಸಮಸ್ಯೆಗಳೇ ಮುಖ್ಯ ಕಾರಣ ಎಂದು ತಜ್ಞರು ಎಚ್ಚರಿಸಿದ್ದಾರೆ. ಇದು ಬಾಲಕಿಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ.

Related Articles

ಇತ್ತೀಚಿನ ಸುದ್ದಿಗಳು