ತುಮಕೂರು: ತುಮಕೂರು ತಾಲೂಕಿನ ಕೋರಾ ಬಳಿ ಶುಕ್ರವಾರ ಮುಂಜಾನೆ ಭಕ್ತರು ಪ್ರಯಾಣಿಸುತ್ತಿದ್ದ ಎಂಯುಬಿ ವಾಹನವೊಂದು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಏಳು ವರ್ಷದ ಬಾಲಕಿ ಸೇರಿದಂತೆ ನಾಲ್ವರು ಅಯ್ಯಪ್ಪ ಸ್ವಾಮಿ ಭಕ್ತರು ಸಾವಿಗೀಡಾಗಿದ್ದಾರೆ ಮತ್ತು ಇತರ ಏಳು ಮಂದಿ ಗಾಯಗೊಂಡಿದ್ದಾರೆ.
ಮೃತರನ್ನು ಮಾರುತಪ್ಪ (45), ವೆಂಕಟೇಶ್ (30), ಗವಿಸಿದ್ಧಪ್ಪ (28) ಮತ್ತು ಸಾಕ್ಷಿ (7) ಎಂದು ಗುರುತಿಸಲಾಗಿದೆ. ಗಾಯಗೊಂಡವರು ಕೊಪ್ಪಳ ಜಿಲ್ಲೆಯ ಕುಕನೂರು, ಗದಿಗೆರಿ ತಾಂಡಾ ಮತ್ತು ಕಕ್ಕಿಹಳ್ಳಿ ತಾಂಡಾ ಮೂಲದ ಹುಲಿಗೆಪ್ಪ (32 – ಸಾಕ್ಷಿಯ ತಂದೆ), ಶ್ರೀನಿವಾಸ್ (32), ಪ್ರದೀಪ್ ಕುಮಾರ್ (28), ರಾಜಪ್ಪ (45), ರಾಕೇಶ್ (24), ತಿರುಪತಿ (33) ಮತ್ತು ಶ್ರೀನಿವಾಸ್ (32) ಎಂದು ತಿಳಿದುಬಂದಿದೆ.
ಗಾಯಾಳುಗಳ ಪೈಕಿ ಪ್ರದೀಪ್ ಕುಮಾರ್, ರಾಜಪ್ಪ ಮತ್ತು ತಿರುಪತಿ ಅವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಬರಿಮಲೆಗೆ ಭೇಟಿ ನೀಡಿ ಮನೆಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಭಕ್ತರು ಜನವರಿ 5 ರಂದು ಕ್ರೂಸರ್ ವಾಹನದಲ್ಲಿ ಶಬರಿಮಲೆಗೆ ತೆರಳಿದ್ದರು. ದರ್ಶನದ ನಂತರ ಜನವರಿ 7 ರ ರಾತ್ರಿ ಶಬರಿಮಲೆಯಿಂದ ಹೊರಟಿದ್ದರು. ವಾಹನ ಚಲಾಯಿಸುತ್ತಿದ್ದ ಪ್ರದೀಪ್ ಕುಮಾರ್ ನಿಯಂತ್ರಣ ತಪ್ಪಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ಸಂಬಂಧ ಕೋರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
