Home ವಿಶೇಷ ಬೆಂಕಿಗೆ ಬಿದ್ದವರನ್ನು ರಕ್ಷಿಸಿದ ಆದಿವಾಸಿಯ ಗೋಳು

ಬೆಂಕಿಗೆ ಬಿದ್ದವರನ್ನು ರಕ್ಷಿಸಿದ ಆದಿವಾಸಿಯ ಗೋಳು

0

ಈ ಹುಡುಗನ ಹೆಸರು ಮಂಜು, ಜೇನುಕುರುಬ ಎಂಬ ಅಪ್ಪಟ ಆದಿವಾಸಿ ಬುಡಕಟ್ಟು ಸಮುದಾಯದವನು. ನಮ್ಮ ರಾಜ್ಯದ ಆದಿವಾಸಿಗಳಲ್ಲಿ ಕೇವಲ ‘ಜೇನುಕುರುಬ’ ಮತ್ತು ‘ಕೊರಗ’ ಸಮುದಾಯದವರನ್ನು ಮಾತ್ರ most primitive tribe ಎಂದು ಗುರುತಿಸಲಾಗಿದೆ! ಇವರ ಬದುಕಂತೂ ಅತ್ಯಂತ ಹೀನಾಯವಾಗಿದೆ.

ಈತ ಸರಗೂರು ತಾಲ್ಲೂಕಿನ, ಕಂದಲಿಕೆ ಹೋಬಳಿ, ಮೊಳೆಯೂರು ಅಂಚೆಯ, ಕೆಬ್ಬೇಪುರ ಜೇನುಕುರುಬ ಹಾಡಿಯವನು.

ಈ ಹುಡುಗ ಬಂಡೀಪುರ ಅರಣ್ಯದಲ್ಲಿ ದಿನಕೂಲಿಗೆ ಸೇರಿಕೊಂಡಿದ್ದ. ಹೇಗೋ ಬದುಕು ಸಾಗುತಿತ್ತು, ಹೀಗೇ ಒಮ್ಮೆ ಬಂಡೀಪುರದ ಕಲ್ಕೆರೆ ವಲಯದಲ್ಲಿ  ಕಾಡ್ಗಿಚ್ಚು ಬಿತ್ತು! ಬೆಂಕಿಯ ನಡುವೆ ಅರಣ್ಯದಲ್ಲಿ ಸಿಕ್ಕಿಬಿದ್ದಿದ್ದ RFO ಗಂಗಾಧರ ಮತ್ತು ಗಾರ್ಡ್‌ ಮುರಿಗೆಪ್ಪ ಹೊರಬರಲಾಗದೆ ಸಾವು ಬದುಕಿನೊಂದಿಗೆ ಹೆಣಗಾಡುತಿದ್ದರು. ಆ ಸ್ಥಿತಿಯಲ್ಲಿ ಅವರನ್ನು ನೋಡಿದ ಈ ಆದಿವಾಸಿ ಹುಡುಗ ಮಂಜು ಪ್ರಾಣದ ಮೇಲೆ ಹಂಗು ತೊರೆದು ಬೆಂಕಿಗೆ ಧುಮುಕಿ ಅತ್ಯಂತ ಸಾಹಸದಿಂದ RFO ಗಂಗಾಧರರನ್ನು ಬೆಂಕಿಯಿಂದ ಹೊರತಂದು ಜೀವ ಉಳಿಸಿದ! ಕಾಡಲ್ಲಿ ಬೆಂಕಿ ಬಿದ್ದಾಗ ಅದರಿಂದ ಬಚಾವಾಗುವ ತಂತ್ರ ಕಾಡುಪ್ರಾಣಿಗಳಿಗೆ ಮತ್ತು ಕಾಡು ವಾಸಿಗಳಾದ ಆದಿವಾಸಿಗಳಿಗೆ ಮಾತ್ರ ಗೊತ್ತು! ಈ ಕಾರಣಕ್ಕೆ ಮಂಜು ಬೆಂಕಿಗೆ ಧುಮುಕಿ‌ RFOನನ್ನು ಉಳಿಸಲು ಸಾಧ್ಯವಾಯಿತು. ಅಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆಗಳು ಮುಗಿಲು ಮುಟ್ಟುತಿದ್ದವು. ಮಂಜು ಕೂಡ ಬೆಂಕಿಗೆ ತುತ್ತಾಗಿ ತನ್ನ ಮುಂಗೈ, ಕತ್ತು ಕಾಲುಗಳನ್ನು ತೀವ್ರ ವಾಗಿ ಸುಟ್ಟು ಕೊಂಡಿದ್ದ. ಈ ಕಾರಣಕ್ಕೆ ಮತ್ತೊಮ್ಮೆ ಬೆಂಕಿಗೆ ಧುಮುಕಿ ಗಾರ್ಡ್ ಮುರಿಗಪ್ಪನನ್ನು ಉಳಿಸಲಾಗಲಿಲ್ಲ. ಅಷ್ಟರಲ್ಲಿ ಮುರಿಗೆಪ್ಪ ಬೆಂಕಿಗೆ ಆಹುತಿಯಾಗಿ ಬೂದಿಯಾಗಿದ್ದ!

ಬೆಂಕಿಯೊಂದಿಗಿನ‌ ಈ ಹೋರಾಟದಲ್ಲಿ ಮಂಜು ತೀವ್ರವಾಗಿ ಸುಟ್ಟ ಪರಿಣಾಮ ಸುಮಾರು ನಲವತ್ತೆರಡು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಈ ಸಂಧರ್ಭದಲ್ಲಿ ಆಸ್ಪತ್ರೆಗೆ ಬಂದ ಅರಣ್ಯಾಧಿಕಾರಿಗಳು ಮಂಜು ಸಾಹಸವನ್ನು ಹೊಗಳುತ್ತಾ “RFO ಜೀವ ಉಳಿಸಿದ ಮಂಜುಗೆ ಖಾಯಂ ಕೆಲಸ ನೀಡುತ್ತೇವೆ.. ಪರಿಹಾರ ಕೊಡಿಸುತ್ತೇವೆ.. ಶೌರ್ಯ ಪ್ರಶಸ್ತಿ ಕೊಡಿಸುತ್ತೇವೆ..” ಎಂದು ಪತ್ರಿಕೆಗಳಿಗೆ ಪೋಸು ಕೊಟ್ಟವರು ಇಂದಿಗೂ ಪತ್ತೆಯಿಲ್ಲ! ಈ ಘಟನೆ ಸಂಭವಿಸಿ ನಾಲ್ಕು ವರ್ಷಗಳೇ ಆದವು, ಮಂಜು ಅರಣ್ಯ ಇಲಾಖೆಯ ಕಂಬಕಂಬ ಅಲೆಯುತಿದ್ದಾನೆ. ಕೆಲಸ ಮತ್ತು ಪರಿಹಾರಕ್ಕಾಗಿ ಸಿಕ್ಕಸಿಕ್ಕವರ ಕಾಲು, ಕೈ ಹಿಡಿಯುತಿದ್ದಾನೆ. ಈ ಹುಡುಗನ‌  ‘ಜೇನುಕುರುಬ’ ಜಾತಿ ಸರ್ಟಿಫಿಕೇಟ್ ಪಡೆದು IAS, IPS, IFS, KAS ಅಧಿಕಾರಿಗಳಾಗಿ ಶ್ರೀಮಂತ ಮತ್ತು ಸುಖೀ ಬದುಕನ್ನು ಅನುಭವಿಸುತ್ತಿರುವವರಿಗೂ ಇವನ‌ ಇರುವಿಕೆಯ ಅರಿವೇ ಇಲ್ಲ!

ಈ ಹುಡುಗನಿಗೆ ಖಾಯಂ ಕೆಲಸ ಕೊಡುವುದಿರಲಿ  ಈತ ಮಾಡುತಿದ್ದ ತಾತ್ಕಾಲಿಕ ದಿನಗೂಲಿ ಕೆಲಸದಿಂದಲೂ ಇವನನ್ನು ತೆಗೆದಿದ್ದಾರೆ “ನಿನಗೆ ಕೈ ಮೈ‌ ಸುಟ್ಟು ಹೋಗಿದೆ.. ನಿನ್ನ ಕೈಯಲ್ಲಿ ಕೆಲಸ ಮಾಡಲು ಆಗಲ್ಲ ಹೋಗು..” ಎಂದು ಅಟ್ಟುತಿದ್ದಾರೆ! ಈಗ ಮಂಜುವಿಗೆ ಕೆಲಸವಿಲ್ಲ, ಇರಲು ನೆಲೆಯಿಲ್ಲ! ಬೆಂಕಿಗೆ ಆಹುತಿಯಾಗುತ್ತಿದ್ದ ಅಧಿಕಾರಿಯನ್ನು ಉಳಿಸಿದ್ದಕ್ಕೆ ಈತನಿಗಾದ ಶಿಕ್ಷೆ ಇದು!

ಈತನನ್ನು ಮೊನ್ನೆ ವಿಧಾನಸೌದಕ್ಕೆ ಕರೆದೊಯ್ದು ಅರಣ್ಯ ಸಚಿವರನ್ನು ಬೆಟ್ಟಿಯಾಗಲು ಪ್ರಯತ್ನಿಸಿದೆವು. ಅರಣ್ಯ ಮಂತ್ರಿ ಸಿಗಲಿಲ್ಲ. ಅವರ ಆಪ್ತ ಕಾರ್ಯದರ್ಶಿಗೆ ಅರ್ಜಿ ಕೊಟ್ಟು ಸುದೀರ್ಘವಾಗಿ ವಿವರಿಸಿ ಬಂದಿದ್ದೇವೆ. ಕಾದು ನೋಡಬೇಕು. ಒಟ್ಟಿನಲ್ಲಿ ಮಂಜುವಿಗೆ ನ್ಯಾಯ ಸಿಗುವವರೆಗೂ ವಿರಮಿಸಲಾರೆವು…

ಸಿ.ಎಸ್.ದ್ವಾರಕಾನಾಥ್

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು

ಇದನ್ನೂ ಓದಿ- ಇರುಳಿಗ ಸಮುದಾಯದ ನೋವಿಗೆ  ಕೊನೆ ಯಾವಾಗ?

You cannot copy content of this page

Exit mobile version