“ಶ್ರೀನಿವಾಸನ ಹೃದಯದಿಂದ ರಕ್ತ ಚಿಮ್ಮುವುದನ್ನು ನೋಡಬೇಕೆನ್ನುವುದು ನನ್ನ ಆಸೆಯಾಗಿತ್ತು. ಏನಾಗುತ್ತಿದೆ ಎನ್ನುವುದು ಅವನ ಅರಿವೆಗೆ ಬರುವ ಮೊದಲೇ ನಾನು ಅವನಿಗೆ ಗುಂಡಿಕ್ಕಿ ನೆಲಕ್ಕೆ ಕೆಡವಿದ್ದೆ. ಅವನ ರುಂಡ ಮುಂಡವನ್ನು ಬೇರೆ ಬೇರೆ ಮಾಡಿದ್ದೆ. ಅವನ ಕೈಗಳನ್ನು ಕತ್ತರಿಸಿ ಹಾಕಿದ್ದೆ. ಏಕೆಂದರೇ ಅದೇ ಕೈಗಳು ನನ್ನತ್ತ ಮಷಿನ್ ಗನ್ ಬಳಸಿ ಗುಂಡು ಹಾರಿಸಲು ಬಯಸಿದ್ದವು.”
ಇದು ದಂತ ಚೋರ ಮತ್ತು ಶ್ರೀಗಂಧ ಕಳ್ಳ ಸಾಗಣೆದಾರ ವೀರಪ್ಪನ್ನನ ಮಾತುಗಳು, ಇದು ಅವನು ಇಂಡಿಯನ್ ಫಾರೆಸ್ಟ್ ಆಫೀಸರ್ ಆಗಿದ್ದ ಪಾಂಡಿಲ್ಲಪಲ್ಲಿ ಶ್ರೀನಿವಾಸ್ ಅವರ ಹತ್ಯೆಯ ಬಗ್ಗೆ ಹೇಳಿದ್ದ ಮಾತುಗಳು.
ವೀರಪ್ಪನ್ ಮತ್ತು ಶ್ರೀನಿವಾಸ್ ಅವರ ಕೊನೆಯ ಮುಖಾಮುಖಿಯಾಗಿದ್ದು 1991ರಲ್ಲಿ. ಅದಕ್ಕೂ ಐದು ವರ್ಷಗಳ ಹಿಂದೆ ಅವರು ಮೊದಲ ಬಾರಿಗೆ ಪರಸ್ಪರ ಭೇಟಿಯಾಗಿದ್ದರು. ತನ್ನ ತಂಗಿಯನ್ನು ಕೊಂದವನು ಎನ್ನುವ ಕಾರಣಕ್ಕೆ ವೀರಪ್ಪನ್ ಶ್ರೀನಿವಾಸ್ ಮೇಲೆ ವಿಪರೀತ ಸೇಡು ಬೆಳೆಸಿಕೊಂಡಿದ್ದ.
ತಾನು ಶರಣಾಗಲು ಸಿದ್ಧವಿದ್ದೇನೆ ಎಂದು ವೀರಪ್ಪನ್ ಕಳುಹಿಸಿದ ಸಂದೇಶವನ್ನು ನಂಬಿ ಅಂದು ಶ್ರೀನಿವಾಸ್ ಅವನ ಬಲೆಯಲ್ಲಿ ಸಿಕ್ಕಿಬಿದ್ದಿದ್ದರು.
ಶ್ರೀನಿವಾಸ್ ಕೂಡಾ ಒಬ್ಬ ಸಾಮಾನ್ಯ ಅರಣ್ಯಾಧಿಕಾರಿಯಾಗಿರಲಿಲ್ಲ. ಅವರ ಸಾಟಿಯಿಲ್ಲದ ಹೋರಾಟಕ್ಕಾಗಿ ಅವರಿಗೆ ಭಾರತದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಕೀರ್ತಿ ಚಕ್ರವನ್ನು ನೀಡಿ ಸನ್ಮಾನಿಸಲಾಗಿದೆ.
ವೀರಪ್ಪನ್ ಮೇಲೆ ನಿಗಾ
1986ರಲ್ಲಿ ಸಾರ್ಕ್ (ಸೌತ್ ಏಷಿಯನ್ ಅಸೋಸಿಯೇಷನ್ ಫಾರ್ ರೀಜನಲ್ ಕಾರ್ಪೊರೇಷನ್) ಸಭೆಗಳು ಬೆಂಗಳೂರಿನಲ್ಲಿ ನಡೆಯುತ್ತಿದ್ದವು. ಶ್ರೀಲಂಕಾದ ಅಧ್ಯಕ್ಷ ಜೆ.ಜಯವರ್ಧನೆ ಆ ಸಭೆಗಳಲ್ಲಿ ಭಾಗವಹಿಸಿದ್ದರು ಮತ್ತು ಭಾರಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಅಂದಿನ ದಿನಗಳಲ್ಲಿ ತಮಿಳು ಉಗ್ರಗಾಮಿ ಗುಂಪಾಗಿದ್ದ LTTE ಶ್ರೀಲಂಕಾದಲ್ಲಿ ಬೆಳೆದು ನಿಂತು ಅಲ್ಲಿನ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿತ್ತು.
ಈ ಸಭೆಯ ಹಿನ್ನೆಲೆಯಲ್ಲಿ ಪೊಲೀಸರು ನಗರದೆಲ್ಲೆಡೆ ಬಿಗಿ ಭದ್ರತೆಯೊಂದಿಗೆ, ಶಂಕಿತರನ್ನು ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಬೆಂಗಳೂರಿನ ಬಸ್ ಸ್ಟ್ಯಾಂಡ್ ಒಂದರಲ್ಲಿ ಒಬ್ಬ ವ್ಯಕ್ತಿ ಅನುಮಾನಸ್ಪದವಾಗಿ ಪತ್ತೆಯಾಗಿದ್ದ. ಅವನ ಬಳಿ ಪೊಲೀಸರು “ಯಾರು ನೀನು, ನಿನ್ನ ಹೆಸರೇನು, ಎಲ್ಲಿಂದ ಬಂದೆ? ಇಲ್ಲಿಗ್ಯಾಕೆ ಬಂದೆ” ಇತ್ಯಾದಿಯಾಗಿ ಪ್ರಶ್ನೆ ಕೇಳಿದ್ದಾರೆ. ಆದರೆ ಆ ವ್ಯಕ್ತಿ ಸ್ಪಷ್ಟವಾಗಿ ಉತ್ತರಿಸಲಿಲ್ಲ.
ಇದಲ್ಲದೆ ಅವನಿಗೆ ಸರಿಯಾಗಿ ಕನ್ನಡವೂ ಬರುತ್ತಿರಲಿಲ್ಲ. ಹೀಗಾಗಿ ಅನಿಮಾನಗೊಂಢ ಪೊಲೀಸರು ಅವನನ್ನು ವಶಕ್ಕೆ ಪಡೆದರು. ನಂತರ ಅವನನ್ನು ಜಯನಗರ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ಅವನು ʼವೀರಪ್ಪನ್ʼ ಎನ್ನುವುದು ತಿಳಿದುಬಂತು.
ವೀರಪ್ಪನ್ ಹುಟ್ಟಿದ್ದು ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಗೋಪಿನಾಥಂ ಎಂಬ ಹಳ್ಳಿಯಲ್ಲಿ. ಈ ಊರು ಇರುವುದು ದಟ್ಟ ಕಾಡಿನ ನಡುವಿನಲ್ಲಿ. ಈ ಕಾಡು ಶ್ರೀಗಂಧದ ಮರಗಳು ಮತ್ತು ಆನೆಗಳ ಆಗರ. ಮತ್ತು ವೀರಪ್ಪನ್ ಇವೆರಡರ ಕಾರಣದಿಂದಲೇ ಕುಖ್ಯಾತನಾಗಿದ್ದ.
ಈ ಊರು ತಮಿಳುನಾಡಿನ ಸರಹದ್ದಿನಲ್ಲಿದ್ದ ಕಾರಣ ವೀರಪ್ಪನ್ ಗ್ಯಾಂಗ್ ಕರ್ನಾಟಕದಲ್ಲಿ ಅಪರಾಧವೆಸಗಿ ತಮಿಳುನಾಡಿನಲ್ಲಿ ಅಡಗಿಕೊಳ್ಳುತ್ತಿತ್ತು. ಇದರಿಂದಾಗಿ ಅವನನ್ನು ಬಂಧಿಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಬಹಳ ಸಮಯದ ನಂತರ ಈ ಕುರಿತು ತಿಳಿದುಕೊಂಡ ಇಲಾಖೆಯು ತಮಿಳುನಾಡು ಮತ್ತು ಕರ್ನಾಟಕ ಪೊಲೀಸರ ಜಂಟಿ ವಿಶೇಷ ಕಾರ್ಯಪಡೆಯೊಂದನ್ನು ರಚಿಸಿತು.

1972ರಲ್ಲಿ ಜಾರಿಗೆ ಬಂದ ವನ್ಯಜೀವಿ ಸಂರಕ್ಷಣಾ ಕಾಯ್ದೆಯು ಆನೆಗಳ ಬೇಟೆಯನ್ನು ತಗ್ಗಿಸಿತು. ಇದು ವೀರಪ್ಪನ್‌ಗೆ ಪ್ರತಿಸ್ಪೃಧಿಗಳಿಲ್ಲದಂತೆ ಮಾಡುವಲ್ಲಿಯೂ ಸಹಾಯವಾಯಿತು. ವೀರಪ್ಪನ್ ಬೆಳೆಯುತ್ತಲೇ ಹೋದ.
ಅಂದು ವೀರಪ್ಪನ್ ಬಂಧನವನ್ನು ಅಧೀಕೃತವಾಗಿ ತೋರಿಸಲಾಗಿರಲಿಲ್ಲ. ಇದಕ್ಕೆ ಕಾರಣ ಹಾಗೆ ತೋರಿಸಿದಲ್ಲಿ ಅವನನ್ನು ನ್ಯಾಯಾಲಕ್ಕೆ ಹಾಜರಿಪಡಿಸಬೇಕಾಗುತ್ತಿತ್ತು.
ಕೊನೆಗೆ ಅಂದು ವೀರಪ್ಪನನ್ನು ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡರು. ಆಗ ಇದೇ ಶ್ರೀನಿವಾಸ್ ಚಾಮರಾಜನಗರದ ಅರಣ್ಯಾಧಿಕಾರಿಯಾಗಿದ್ದರು. ಅವರು ಈಗಾಗಲೇ ವೀರಪ್ಪನ್ ಕುರಿತು ಸಾಕಷ್ಟು ತನಿಖೆ ಮಾಡಿ ಅವನ ವ್ಯವಹಾರಗಳ ಕುರಿತು ಸಾಕಷ್ಟು ಮಾಹಿತಿಯನ್ನು ಹೊಂದಿದ್ದರು.
ಇದೇ ಕಾರಣಕ್ಕಾಗಿ ವೀರಪ್ಪನ್‌ನನ್ನು ಶ್ರೀನಿವಾಸ್ ಅವರ ವಶಕ್ಕೆ ನೀಡಲಾಗಿತ್ತು. ಇದರೊಂದಿಗೆ ಅವರು ವೀರಪ್ಪನ್‌ನ ಶ್ರೀಗಂಧ ಕಳ್ಳಸಾಗಣೆ ಜಾಲ, ಅವನ ಬೇಟೆಯ ವಿಧಾನಗಳ ತನಿಖೆ, ಖರೀದಿದಾರರ ಗೋಡೌನ್‌ಗಳ ಮೇಲಿನ ದಾಳಿ ಇತ್ಯಾದಿ ಆರಂಭವಾಯಿತು. ಇದು ಒಂದು ತಿಂಗಳ ಕಾಲ ನಡೆಯಿತು. ಇದುವರೆಗೂ ಅವನ ಬಂಧನವನ್ನು ಅಧಿಕೃತವಾಗಿ ತೋರಿಸಲಾಗಿರಲಿಲ್ಲ.
ಬೋಡಿಪಡ್ಗದಲ್ಲಿರುವ ಅರಣ್ಯ ಕಚೇರಿ ಅತಿಥಿ ಗೃಹದಲ್ಲಿ ಪೊಲೀಸ್ ಪೇದೆಗಳು ಮತ್ತು ಅರಣ್ಯ ಸಿಬ್ಬಂದಿ ವೀರಪ್ಪನ್ ಚಟುವಟಿಕೆಗಳ ಮೇಲೆ ನಿಗಾ ಇರಿಸಿದ್ದರು.
ಒಂದು ದಿನ ಶ್ರೀನಿವಾಸ್ ಹೊರಗೆ ಕೆಲಸದ ಮೇಲೆ ಹೋಗಿದ್ದ ಸಮಯದಲ್ಲಿ, ಸಿಬ್ಬಂದಿ ಗಡಿಬಿಡಿಯಲ್ಲಿರುವುದನ್ನು ಗಮನಿಸಿ ವೀರಪ್ಪನ್ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ.
ಪತ್ರಕರ್ತ ಸುನತ್ ರಘುರಾಮ್ ಅವರು ವೀರಪ್ಪನ್ ಬಂಧನ ಮತ್ತು ತಪ್ಪಿಸಿಕೊಳ್ಳುವಿಕೆಯ ಈ ಅಧ್ಯಾಯದ ಕುರಿತು ‘ವೀರಪ್ಪನ್: ಇಂಡಿಯಾಸ್ ಮೋಸ್ಟ್ ವಾಂಟೆಡ್ ಮ್ಯಾನ್’ (ಪುಟ ಸಂಖ್ಯೆ 35-36) ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಅವರು ವೀರಪ್ಪನ್ ಜೀವನದ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿದ್ದಾರೆ.
ಅರಣ್ಯ ಸೇವೆಗಳ ಅಧಿಕಾರಿ ಶ್ರೀನಿವಾಸ್ ಅವರು ಸೆಪ್ಟೆಂಬರ್ 12, 1954ರಂದು ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಜನಿಸಿದರು ಎಂದು ಆಂಧ್ರಪ್ರದೇಶ ಸರ್ಕಾರ ಅವರ ಬದುಕಿನ ಕುರಿತು ಹೊರಡಿಸಿದ ಕರಪತ್ರ ಹೇಳುತ್ತದೆ.
1976ರಲ್ಲಿ ಅವರು ಆಂಧ್ರ ವಿಶ್ವವಿದ್ಯಾಲಯದಿಂದ ಲೈಫ್ ಸೈನ್ಸ್ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದರು. 1979ರಲ್ಲಿ, ಭಾರತೀಯ ಅರಣ್ಯ ಸೇವೆಗಳಿಗೆ ಆಯ್ಕೆಯಾದ ಅವರು ಚಾಮರಾಜನಗರ ಸಹಾಯಕ ಸಂರಕ್ಷಣಾಧಿಕಾರಿ ಸಹಾಯಕ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ನಂತರ ಅವರಿಗೆ ಉಪ ಸಂರಕ್ಷಣಾಧಿಕಾರಿಯಾಗಿ ಬಡ್ತಿ ನೀಡಲಾಯಿತು.
ಅಲ್ಲಿ ಅವರು ಶ್ರೀಗಂಧ ಕಳ್ಳಸಾಗಣೆದಾರರ ಹೆಸರುಗಳು ಮತ್ತು ಫೋಟೋಗಳು, ಅವರ ಊರು ಮತ್ತು ವಯಸ್ಸು, ಅವರು ಹೇಗೆ ಕಳ್ಳಸಾಗಣೆ ಮಾಡುತ್ತಿದ್ದಾರೆ ಮತ್ತು ಅವರು ಯಾರಿಗೆ ಸರಬರಾಜು ಮಾಡುತ್ತಿದ್ದಾರೆ ಎಂಬ ವಿವರಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು. ಇದೇ ಸಮಯದಲ್ಲಿ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿಯ ನಡುವಿನ ಸಂವಹನವನ್ನು ಸುಧಾರಿಸಲು ವೈರ್ ಲೆಸ್ ನೆಟ್ ವರ್ಕ್ ಸ್ಥಾಪಿಸಲಾಯಿತು. ಇದು ಮಾಹಿತಿ ವಿತರಣೆಯ ವೇಗವನ್ನು ಹೆಚ್ಚಿಸಿತು.
ಮಾಧ್ಯಮ ವರದಿಗಳ ಪ್ರಕಾರ, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರು ಕೆಲವೊಮ್ಮೆ ವೀರಪ್ಪನ್ ಬಗ್ಗೆ ಮಾಹಿತಿ ನೀಡುವಂತೆ ಗ್ರಾಮಸ್ಥರಿಗೆ ಚಿತ್ರಹಿಂಸೆ ನೀಡುತ್ತಿದ್ದರು. ಇದರ ಪರಿಣಾಮವಾಗಿ ಜನರು ವೀರಪ್ಪನ್ ಕುರಿತು ಸಹಾನುಭೂತಿ ಹೊಂದಿದ್ದರು.
ಇನ್ನೊಂದು ಕಡೆ, ವೀರಪ್ಪನ್‌ಗೆ ಯಾರಾದರೂ ಪೊಲೀಸ್ ಇಲಾಖೆ ಅಥವಾ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಕುರಿತು ಅನುಮಾನ ಬಂದರೆ ಅವನು ಅಂತವರ ರುಂಡ-ಮುಂಡಗಳನ್ನು ಬೇರ್ಪಡಿಸಿ ನೇತು ಹಾಕುತ್ತಿದ್ದ. ಜನರು ಪೊಲೀಸರ ಪರವಾಗಿದ್ದಿದ್ದರೆ ಅವರ ಗತಿ ಏನಾಗುತ್ತಿತ್ತೆನ್ನುವುದರ ಅರಿವು ನಿಮಗೆ ಈಗ ಮೂಡಿರಬಹುದು.
ಅರಣ್ಯ ಪ್ರದೇಶ, ನದಿ, ತೊರೆ, ಪ್ರಾಣಿ, ಪಕ್ಷಿಗಳು, ಸಸ್ಯಗಳು ಮತ್ತು ಗಿಡಮೂಲಿಕೆಗಳ ಬಗ್ಗೆ ಪೊಲೀಸರಿಗಿಂತ ವೀರಪ್ಪನ್‌ಗೆ ಹೆಚ್ಚು ತಿಳಿದಿತ್ತು, ಇದರಿಂದಾಗಿಯೇ ಅವನು ಸುಲಭವಾಗಿ STF ಕೈಯಿಂದ ತಪ್ಪಿಸಿಕೊಳ್ಳುತ್ತಿದ್ದ, ಮತ್ತು ಕಾಡುಗಳು ತುಂಬಾ ದಟ್ಟವಾಗಿದ್ದವು, ಕೆಲವು ಸ್ಥಳಗಳಲ್ಲಿ ಸೂರ್ಯನ ಬೆಳಕು ಸಹ ನೆಲಕ್ಕೆ ಬೀಳುತ್ತಿರಲಿಲ್ಲ, ಮತ್ತು ಯಾರೂ ಕಾಡಿಗೆ ಕಾಲಿಡುತ್ತಿರಲಿಲ್ಲ.
ಈ ನಡುವೆ 1987ರಲ್ಲಿ ಶ್ರೀನಿವಾಸ್ ಅವರನ್ನು ಕಾಫಿ ತೋಟಗಳೇ ಪ್ರಧಾನವಾಗಿರುವ ಚಿಕ್ಕಮಗಳೂರಿನ ಕಡೆಗೆ ವರ್ಗಾಯಿಸಲಾಯಿತು. ಆದರೆ ಆ ಸಮಯದಲ್ಲೂ ಅವರು ವೀರಪ್ಪನ್ ಚಲವಲನಗಳ ಮೇಲೆ ನಿಗಾ ಇಟ್ಟಿದ್ದರು ಎನ್ನುತ್ತಾರೆ ರಘುರಾಮ್. ಶ್ರೀನಿವಾಸ್ ಬಸ್ಸಿನಲ್ಲಿ ಚಾಮರಾಜನಗರಕ್ಕೆ ಬಸ್ಸಿನಲ್ಲಿ ಬಂದು ಮಾಹಿತಿದಾರರನ್ನು ವ್ಯವಸ್ಥೆ ಮಾಡಿ ಅವರ ಮೂಲಕ ವೀರಪ್ಪನ್ ಕುರಿತಾದ ಮಾಹಿತಿಗಳನ್ನು ಪಡೆಯುತ್ತಿದ್ದರು.
ಶ್ರೀನಿವಾಸ್ ವರ್ಸಸ್ ವೀರಪ್ಪನ್
ಆಂಧ್ರಪ್ರದೇಶದ ಅರಣ್ಯ ಇಲಾಖೆ ‘ಅಡವಿ ಮರವೀರುಲು’ (ಅರಣ್ಯ ಹುತಾತ್ಮರು) ಎಂಬ ಪುಸ್ತಕವನ್ನು ಪ್ರಕಟಿಸಿದ್ದು, ಅದರಲ್ಲಿ ಪುಟ ಸಂಖ್ಯೆ 34ರಲ್ಲಿ ಶ್ರೀನಿವಾಸ್ ತರಬೇತಿಗಾಗಿ ಅಮೇರಿಕಾಕ್ಕೆ (US) ಹೋಗಿದ್ದರು ಎಂದು ಬರೆಯಲಾಗಿದೆ.
1990ರ ಎಪ್ರಿಲ್ ತಿಂಗಳಿನಲ್ಲಿ ವೀರಪ್ಪನ್ ತನ್ನ ಬೆನ್ನಟ್ಟಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿ ಓಢಿ ಹೋಗಿದ್ದ. ಈ ಘಟನೆಯ ನಂತರ, ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಜಂಟಿಯಾಗಿ ಕಾರ್ಯಪಡೆಯನ್ನು ರಚಿಸಲು ನಿರ್ಧರಿಸಿದವು. ಈ ಟಾಸ್ಕ್‌ಫೋರ್ಸ್‌ನ ನಾಯಕತ್ವವನ್ನು ಶ್ರೀನಿವಾಸ್ ಅವರಿಗೆ ನೀಡಲಾಯಿತು. ಯುಎಸ್‌ನಿಂದ ಮರಳಿದ ಅವರು 1990ರಲ್ಲಿ STF ಉಸ್ತುವಾರಿ ವಹಿಸಿಕೊಂಡರು.
ಸ್ಥಳೀಯ ಜನರು ವೀರಪ್ಪನನ್ನು ರಾಬಿನ್ ಹುಡ್ ರೀತಿ ನೋಡುತ್ತಿದ್ದರು. ಅವನು ಶ್ರೀಮಂತರನ್ನು ಲೂಟಿ ಮಾಡಿ ಅದನ್ನು ಬಡವರಿಗೆ ಹಂಚುತ್ತಿದ್ದ. ಇದರ ಪ್ರಭಾವಕ್ಕೆ ಒಳಗಾದ ಊರಿನ ಯುವಕರು ವೀರಪ್ಪನ್ ಗ್ಯಾಂಗಿಗೆ ಸೇರಿಕೊಳ್ಳುತ್ತಿದ್ದರು. ವೀರಪ್ಪನ್ ನಿಷ್ಟಾವಂತರಿಗೆ ಮಾಹಿತಿಗಳನ್ನು ತಲುಪಿಸುವುದು, ಅವರ ಚಲನವಲನಗಳನ್ನು ಗುಟ್ಟಾಗಿಡುವುದು ಮತ್ತು ಅವನ ನೆಲೆಗಳಿಗೆ ಆಹಾರ ಇತ್ಯಾದಿ ಅಗತ್ಯ ವಸ್ತುಗಳನ್ನು ತಲುಪಿಸುವುದು ಈ ಯುವಕರ ಕೆಲಸವಾಗಿತ್ತು.
ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಬಡತನದ ಕಾರಣದಿಂದಾಗಿ ಯುವಕರು ವೀರಪ್ಪನ್ ಗ್ಯಾಂಗ್ ಸೇರುತ್ತಿದ್ದಾರೆಂದು ಶ್ರೀನಿವಾಸನ್ ಅವರಿಗೆ ತಿಳಿದುಬಂದಿತ್ತು ಎಂದು ರಘುರಾಮ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.
ಆಗ ಶ್ರೀನಿವಾಸ್ ಅವರು ಊರಿನ ಜನರಿಗೆ ಉದ್ಯೋಗ ಒದಗಿಸುವ ಸಲುವಾಗಿ ಗ್ರಾಮ ಮಟ್ಟದಲ್ಲಿ ಸಹಕಾರಿ ಸಂಘಗಳನ್ನು ಸ್ಥಾಪಿಸುವ ವ್ಯವಸ್ಥೆ ಮಾಡಿದರು. ಅವರು ಹಳ್ಳಿಗಳಿಗೆ ನೀರು ಮತ್ತು ಒಳ ಚರಂಡಿ ವ್ಯವಸ್ಥೆಗಳನ್ನು ಸುಧಾರಿಸುವ ಮೂಲಕ ಜನರ ವಿಶ್ವಾಸ ಗಳಿಸುವ ಪ್ರಯತ್ನ ಮಾಡಿದರು.
ಶ್ರೀನಿವಾಸ್ ಹಿಂಸಾಚಾರ ಮತ್ತು ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ಜನರಿಗೆ ಮನವಿ ಮಾಡಿದರು. ಅಲ್ಲದೆ ಅವರು ವೀರಪ್ಪನ್‌ನ ಹುಟ್ಟೂರಿನಲ್ಲಿ ಒಂದು ಡಿಸ್ಪೆನ್ಸರಿಯನ್ನೂ ಕಟ್ಟಿಸಿದರು.
ರಾಜಮಂಡ್ರಿಯಲ್ಲಿ ತಮ್ಮ ತಾತನ ಬಳಿ ಕಲಿತಿದ್ದ ಆಯುರ್ವೇದ ಪಾಠಗಳ ಆಧಾರದ ಮೇಲೆ ಅವರು ಊರಿನ ಜನರಿಗೆ ಜ್ವರ, ಶೀತ, ಕೆಮ್ಮು ಮತ್ತು ಅತಿಸಾರದಂತಹ ಕಾಯಿಲೆಗೆ ಔಷಧಿಯನ್ನು ನೀಡುತ್ತಿದ್ದರು. ಸೇವಾ ಚಟುವಟಿಕೆಗಳಿಗೆ ತಮ್ಮ ಹಣವನ್ನು ಬಳಸುತ್ತಿದ್ದ ಅವರು ಅಗತ್ಯವಿದ್ದಾಗ ಸ್ನೇಹಿತರಿಂದಲೂ ಪಡೆಯುತ್ತಿದ್ದರು.
ಶ್ರೀನಿವಾಸ್ ಅವರು ಊರಿನ ಗರ್ಭಿಣಿ ಮಹಿಳೆಯರು ಹಾಗೂ ರೋಗಿಗಳನ್ನು ತನ್ನ ಜೀಪಿನಲ್ಲೇ ಪಟ್ಟಣದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು ಎಂದು ಗ್ರಾಮಸ್ಥರು ಈಗಲೂ ಹೇಳುತ್ತಾರೆ. ಈ ನಡುವೆ ವೀರಪ್ಪನ್ ಗ್ಯಾಂಗಿನ 20 ಸದಸ್ಯರು ತಮ್ಮ ಶಸ್ತ್ರಾಸ್ತ್ರ ಕೆಳಗಿಟ್ಟು ಶರಣಾಗಿದ್ದರು. ಶ್ರೀನಿವಾಸ್ ಇದೇ ಜನರ ಜೊತೆ ಗೋಪಿನಾಥಂನಲ್ಲೇ ವಾಸಿಸುತ್ತಿದ್ದರು. ಅದೇ ಊರಿನಲ್ಲಿ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ, ಸಹೋದರ ಅರ್ಜುನನ್ ಮತ್ತು ಸಹೋದರಿ ಸೇರಿದಂತೆ ವೀರಪ್ಪನ್ ನ ಹಳೆಯ ಸ್ನೇಹಿತರು ಕೂಡಾ ವಾಸಿಸುತ್ತಿದ್ದರು.
“ಅವನು ಒಳ್ಳೆಯವನಾಗಿರಲಿಲ್ಲ. ಅವನು ಒಳ್ಳೆಯ ಮನುಷ್ಯನಂತೆ ನಟಿಸಿದ್ದ. ವೀರಪ್ಪನ್‌ನನ್ನು ಜನರು ದೇವರಂತೆ ಏಕೆ ನೋಡುತ್ತಾರೆನ್ನುವುದನ್ನು ತಿಳಿಯಲು ಊರಿಗೆ ಬಂದಿದ್ದ. ವೀರಪ್ಪನ್ ಮಾಡುವ ಕೆಲಸವನ್ನೇ ನಾನೂ ಮಾಡಿದರೆ ಜನರು ನನ್ನನ್ನು ನಂಬುತ್ತಾರೋ, ಅವನನ್ನು ನಂಬುತ್ತಾರೋ ನೋಡೋಣ ಎಂದು ಆತ ಇದನ್ನೆಲ್ಲ ಮಾಡಿದ. ಇದರಿಂದಾಗಿ ನನ್ನ ಗಂಡನಿಗೆ ಸಾಕಷ್ಟು ತೊಂದರೆಯಾಗಿತ್ತು” ಎಂದು ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಹೇಳಿದ್ದಾಳೆ.
ವೀರಪ್ಪನ್ ತಂಗಿಯನ್ನು ಕೆಲಸಕ್ಕೆ ಸೇರಿಸಿಕೊಂಡ ಶ್ರೀನಿವಾಸ್
ಶ್ರೀನಿವಾಸ್ ಅವರು ಊರಿನಲ್ಲಿದ್ದ ಮಾರಿಯಮ್ಮ ದೇವಸ್ಥಾನವನ್ನು ಮರುನಿರ್ಮಿಸಿ ಮೂರು ಲಕ್ಷ ರೂಪಾಯಿಗಳ ಠೇವಣಿಯನ್ನೂ ಇಟ್ಟಿದ್ದರು. ಮುಂದೇ ಇದೇ ಶ್ರೀನಿವಾಸ್ ಸಾವಿಗೆ ಕಾರಣವಾಯಿತೆಂದು ರಘುರಾಮ್ ತಮ್ಮ ಪುಸ್ತಕದಲ್ಲಿ ಬರೆಯುತ್ತಾರೆ.
ಶ್ರೀನಿವಾಸ್ ಮಾರಿಯಮ್ಮ ಎಂಬ ಮಹಿಳೆಯನ್ನು ತಮ್ಮ ಡಿಸ್ಪೆನ್ಸರಿಯಲ್ಲಿ ಕೆಲಸಕ್ಕೆ ಇರಿಸಿಕೊಂಡಿದ್ದರು. ಆಕೆಯ ಗಂಡ ಜೈಲಿನಲ್ಲಿದ್ದ. ಆಕೆ ಮೂರು ಮಕ್ಕಳಿದ್ದರು. ಮಾರಿಯಮ್ಮ ನೀರು ಕುದಿಸುವುದು, ಔಷಧಿಗಳನ್ನು ಸಂಗ್ರಹಿಸುವಂತಹ ಕೆಲಸವನ್ನು ಮಾಡುತ್ತಿದ್ದಳು. ಅವಳು ವೀರಪ್ಪನ್ ತಂಗಿಯಾಗಿದ್ದಳು ಮತ್ತು ವೀರಪ್ಪನ್‌ಗೆ ಅವಳೆಂದರೆ ಬಹಳ ಅಕ್ಕರೆಯಿತ್ತು.
ಶ್ರೀನಿವಾಸ್ ಅವರು ವಿಶೇಷ ಕಾರ್ಯಪಡೆಯ ಸರ್ವೇಯರ್ ಆಗಿದ್ದರು. ಅವರಿಗೆ ವೀರಪ್ಪನನ್ನು ಸರೆಂಡರ್ ಮಾಡಿಸುವ ವಿಶ್ವಾಸವಿತ್ತು. ಈ ಕಾರಣಕ್ಕಾಗಿಯೇ ಅವರು ಅವನ ಅನುಯಾಯಿಗಳ ಬಂಧನವನ್ನು ಅಧಿಕೃತವಾಗಿ ದಾಖಲಿಸಿರಲಿಲ್ಲ.
ಒಂದು ಹಂತದಲ್ಲಿ ಎಸ್ ಟಿಎಫ್ ವೀರಪ್ಪನ್ ನನ್ನು ಬಂಧಿಸಲು ಆತನ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಆ ಸಮಯದಲ್ಲಿ, ವೀರಪ್ಪನ್ ಮೇಲೆ ಗುಂಡು ಹಾರಿಸದಂತೆ ಕಾರ್ಯಪಡೆಗೆ ಸೂಚನೆ ನೀಡಲಾಗಿತ್ತು. ಈ ಆದೇಶದಿಂದ ಪೊಲೀಸರಿಗೆ ಸಿಟ್ಟು ಬಂದಿತ್ತು. ಆದರೆ ಕರ್ತವ್ಯ ವ್ಯಾಪ್ತಿಯ ಪ್ರಕಾರ ಶ್ರೀನಿವಾಸ್ ಅವರ ಮಾತನ್ನು ಕೇಳಲೇಬೇಕಿತ್ತು. ಅವರಿಗೆ ಬೇರೆ ದಾರಿಯಿರಲಿಲ್ಲ.
ಆಗಿನ STF ಟೈಗರ್ ಎಂದು ಕರೆಸಿಕೊಳ್ಳುತ್ತಿದ್ದ ಟೈಗರ್ ಅಶೋಕ್ ಕುಮಾರ್ ಹೇಳುವಂತೆ “ಆ ದಿನ ಸಂಜೆ ಸುಮಾರು 6-7 ಗಂಟೆ ಸುಮಾರಿಗೆ ಶ್ರೀನಿವಾಸ್ ಮಾರಿಯಮ್ಮನ ಜೊತೆ ಜೀಪಿನಲ್ಲಿ ಹೋಗುತ್ತಿದ್ದರು. ಆಗ ಸೂದನ್ ಎನ್ನುವ ಕಾನ್ಸ್ಟೇಬಲ್ ಅವರಿಬ್ಬರ ಸಂಬಂಧದ ಕುರಿತು ಮಾತನಾಡಲು ಆರಂಭಿಸಿದರು.”
ಅಲ್ಲಿಯವರೆಗೆ ಟಾಸ್ಕ್‌ಫೋರ್ಸ್ ವೀರಪ್ಪನ್ ವಿರುದ್ಧ ಯಾವುದೇ ಗಮನಾರ್ಹ ವಿಜಯವನ್ನು ಸಾಧಿಸಿರಲಿಲ್ಲ. ಅಂದು STF ಕಮಾಂಡೆಂಟ್ ಗೋಪಿನಾಥಂ ಗ್ರಾಮ ಕೆಲವರನ್ನು ಬಂಧಿಸಿದರು. ಇದು ಶ್ರೀನಿವಾಸ್ ಮೇಲೆ ಊರಿನ ಜನರು ಸಿಟ್ಟಾಗುವಂತೆ ಮಾಡಿತು. ಅವರು ಊರಿನ ಜನರಿಗೆ ಯಾರನ್ನೂ ಬಂಧಿಸುವುದಿಲ್ಲವೆಂದು ಮಾತು ಕೊಟ್ಟಿದ್ದರು.
ಈ ನಡುವೆ ವೀರಪ್ಪನ್ ಪತ್ನಿ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಳು. ಇದಕ್ಕೆ ಮಾರಿಯಮ್ಮ ಸಹಾಯ ಮಾಡಿದ್ದಳು ಎನ್ನುವ ಸುದ್ದಿಯಿತ್ತು. ಈ ಕಾರಣಕ್ಕಾಗಿ ಶ್ರೀನಿವಾಸ್ ಆಕೆಯ ಮೇಲೆ ಕೋಪಗೊಂಡಿದ್ದರು.
“ಮುತ್ತುಲಕ್ಷ್ಮಿ ಎಲ್ಲಿದ್ದಾಳೆಂದು ಹೇಳದೆ ಹೋದರೆ ಅವಳ ಬಟ್ಟೆ ಬಿಚ್ಚಿ ಕರೆಂಟ್ ಶಾಕ್ ಕೊಡುವುದಾಗಿ ಶ್ರೀನಿವಾಸ್ ಮಾರಿಯಮ್ಮನಿಗೆ ಹೆದರಿಸಿದ್ದರು” ಎಂದು ರಘುರಾಮ್ ತನ್ನ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ
“ಅವನ ಮೇಲೆ ಬಿಸಿ ಎಣ್ಣೆ ಸುರಿದು ಕೊಲ್ಲು. ಹಾಗೆ ಕೊಲ್ಲದೆ ಹೋದರೆ ನೀನು ನನ್ನ ತಂಗಿಯೇ ಅಲ್ಲ” ಎಂದು ವೀರಪ್ಪನ್ ಮಾರಿಯಮ್ಮನಿಗೆ ಕಾಗದ ಬರೆದಿದ್ದ ಎನ್ನುತ್ತಾಳೆ ಮುತ್ತುಲಕ್ಷ್ಮಿ
ಆಗಿನ ಅರಣ್ಯ ಅಧಿಕಾರಿ ಬಿ.ಕೆ.ಸಿಂಗ್ ಅವರ ಪ್ರಕಾರ, STF ಅಧಿಕಾರಿಗಳಿಗೆ ವೀರಪ್ಪನ್ ಗೆ ಸಂಬಂಧಿಸಿದ ಒಂದೇ ಒಂದು ಪ್ರಕರಣವನ್ನು ಭೇದಿಸಲು ಸಾಧ್ಯವಾಗಿರಲಿಲ್ಲ, ಆದರೆ ಶ್ರೀನಿವಾಸ್ 22 ಜನರನ್ನು ಶರಣಾಗುವಂತೆ ಮಾಡಿದ್ದರು.
ನಂಬಿಸಿ ಕರೆದೊಯ್ದು…
ಶ್ರೀನಿವಾಸ್ ತನ್ನ ವೈಯಕ್ತಿಕ ಪರಿಚಯಗಳನ್ನು ಬಳಸಿ ವೀರಪ್ಪನ್ ಸಹೋದರ ಅರ್ಜುನನನ್ನು ಬಿಡುಗಡೆ ಮಾಡಿಸಿದ್ದರು. ಆದರೆ ಮಾರಿಯಮ್ಮ ತೀರಿಕೊಂಡಾಗ ವೀರಪ್ಪನ್ ವ್ಯಘ್ರನಾಗಿದ್ದ. ಆದರೆ ಮಾರಿಯಮ್ಮ ಸತ್ತಿದ್ದು ಶ್ರೀನಿವಾಸ್ ಅವರಿಗೆ ತಿಳಿದಿರಲಿಲ್ಲ.
ಈ ಹೊತ್ತಿಗೆ STF ನಲ್ಲಿ ಶ್ರೀನಿವಾಸ್ ಅವರ ಅಧಿಕಾರವಧಿ ಮುಗಿದಿತ್ತು. ಆದರೆ ಅರ್ಜುನನ್ ಹೊರಗೆ ಬಂದರೆ ಅವನ ಮೂಲಕ ತನಗೆ ವೀರಪ್ಪನ್ ಕುರಿತಾದ ಮಾಹಿತಿ ಸಿಗಬಹುದೆನ್ನುವುದು ಅವರ ಎಣಿಕೆಯಾಗಿತ್ತು. ಇದಕ್ಕಾಗಿಯೇ ಅವರು ಉನ್ನತಾಧಿಕಾರಿಗಳ ಬಳಿ 15 ದಿನಗಳ ಕಾಲ ಸಮಯ ನೀಡುವಂತೆ ಕೇಳಿಕೊಂಡರು.
ಕೀರ್ತಿ ಚಕ್ರ ಪ್ರಶಸ್ತಿಯ ಸಮಯದಲ್ಲಿ ಉಲ್ಲೇಖಿಸಲಾದ ಮಾಹಿತಿಯ ಪ್ರಕಾರ, ಒಂದು ದಿನ ಶ್ರೀನಿವಾಸ್ ಕಾಳಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ, ಅರ್ಜುನನ್ ಅಲ್ಲಿಗೆ ಬಂದು ವೀರಪ್ಪನ್ ತನ್ನ ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಲು ಬಯಸಿದ್ದಾನೆ ಎಂದು ಹೇಳಿದ. ಆದರೆ ಆ ಸಮಯದಲ್ಲಿ, ಪೊಲೀಸರು ಹಾಜರಿರಬಾರದು ಎಂಬ ಷರತ್ತು ವಿಧಿಸಲಾಗಿತ್ತು.
ನವೆಂಬರ್ 9ರ ಮುಂಜಾನೆ ಶ್ರೀನಿವಾಸ್ ಅರ್ಜುನನ್ ಜೊತೆ ಗೋಪಿನಾಥಂನಿಂದ ಹೊರಟಿದ್ದರು. ಶ್ರೀನಿವಾಸ್ ಬಳಿ ಆಯುಧವೂ ಇರಲಿಲ್ಲ.
ಸುಮಾರು ಆರು ಕಿಲೋಮೀಟರ್ ಪ್ರಯಾಣಿಸಿದ ನಂತರ ಅರ್ಜುನನ್ ವಾಹನವನ್ನು ನಿಲ್ಲಿಸುವಂತೆ ಹೇಳಿದ. ಅಲ್ಲಿದ್ದ ನೀರಿನ ಟ್ಯಾಂಕ್ ಒಂದರ ಪಕ್ಕದಲ್ಲಿ ನಿಲ್ಲುವಂತೆ ತಿಳಿಸಲಾಯಿತು. ಆ ಕ್ಷಣದಲ್ಲೇ ಆತನನ್ನು ವೀರಪ್ಪನ್ ಅನುಯಾಯಿಯೊಬ್ಬ ಅವರನ್ನು ಗುಂಡಿಕ್ಕಿ ಕೊಂದಿದ್ದ.
ವೀರಪ್ಪನ್ ತನ್ನ ತಂಗಿಯ ಸಾವಿನ ಸೇಡು ತೀರಿಸಿಕೊಳ್ಳಲು, ತಮ್ಮ ಅರ್ಜುನನ್‌ನನ್ನು ಬಳಸಿಕೊಂಡಿದ್ದ ಎನ್ನಲಾಗುತ್ತದೆ
ಇದಾದ ನಂತರ ಶ್ರೀನಿವಾಸ್ ಅವರ ದೇಹದ ಅರ್ಧ ಭಾಗಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿತ್ತು. ಅವರ ತಲೆಯನ್ನು ಮುಂಡದಿಂದ ಬೇರ್ಪಡಿಸಲಾಗಿತ್ತು. ಎರಡೂ ಕೈಗಳನ್ನು ದೇಹದಿಂದ ಬೇರ್ಪಡಿಸಲಾಗಿತ್ತು. ಅಂದು ವೀರಪ್ಪನ್ ಹೆಂಡತಿ ಶ್ರೀನಿವಾಸ್ ಅವರ ತಲೆಯನ್ನು ಕಾಲಿನಿಂದ ಒದ್ದಿದ್ದಳು ಎಂದು ರಘುರಾಮ್ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಇದೆಲ್ಲ ಆಗಿ ಹಲವು ವರ್ಷಗಳ ನಂತರ 2004ರ ಅಕ್ಟೋಬರ್ 18ರಂದು ತಮಿಳುನಾಡಿನ ವಿಶೇಷ ಕಾರ್ಯಪಡೆ ವೀರಪ್ಪನ್ ಮತ್ತು ಆತನ ಮೂವರು ಅನುಯಾಯಿಗಳನ್ನು ಹತ್ಯೆ ಮಾಡಿತು.
ವೀರಪ್ಪನ್‌ನನ್ನು ಬಂಧಿಸಲು ಎರಡೂ ರಾಜ್ಯಗಳ ಸರ್ಕಾರಗಳು ಸಾವಿರಾರು ಜನರನ್ನು ನೇಮಿಸಿಕೊಂಡಿದ್ದವು ಮತ್ತು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿದ್ದವು.
ವೀರಪ್ಪನ್ ಹತ್ಯೆಯಾದ ಕಾರಣ ಎರಡೂ ರಾಜ್ಯಗಳ ಹಲವು ನಾಯಕರ ಗುಟ್ಟುಗಳು ಎಂದೂ ಹೊರ ಬರದಂತೆ ಮುಚ್ಚಿ ಹೋದವು ಎಂದು ಹೇಳಲಾಗುತ್ತದೆ.
(ಮುತ್ತುಲಕ್ಷ್ಮಿ, ಬಿ. ಕೆ. ಸಿಂಗ್ ಮತ್ತು ಅಶೋಕ್ ಕುಮಾರ್ ಅವರ ಹೇಳಿಕೆಗಳನ್ನು “ದಿ ಹಂಟ್ ಫಾರ್ ವೀರಪ್ಪನ್” ಸಾಕ್ಷ್ಯಚಿತ್ರ ಸರಣಿಯಿಂದ ತೆಗೆದುಕೊಳ್ಳಲಾಗಿದೆ.)
ಆಧಾರ: BBC