Thursday, July 10, 2025

ಸತ್ಯ | ನ್ಯಾಯ |ಧರ್ಮ

ಡಿ ಬೀಟ್ಸ್ ಗೆ ಬನಾರಸ್ ಸೋಲ್ಡ್

ಬನಾರಸ್ ಚಿತ್ರದ ಕಡೆಯಿಂದ ಒಂದರ ಹಿಂದೊಂದರಂತೆ ಹೊಸ ಸಂಗತಿಗಳು ಹೊರ ಬೀಳುತ್ತಿವೆ. ಹೊಸತನಗಳಿಂದಲೇ ತುಂಬಿಕೊಂಡಿರುವ ಚಿತ್ರವೊಂದು ಹೆಜ್ಜೆ ಹೆಜ್ಜೆಗೂ ದಾಖಲೆ ಬರೆಯುತ್ತಾ ಮುಂದುವರೆಯುತ್ತಿದೆ. ಒಂದು ಕಡೆಯಿಂದ ಎಲ್ಲರನ್ನೂ ಮುದಗೊಳಿಸಿರುವ ಮಾಯಗಂಗೆ ಹಾಡು, ಮತ್ತೊಂದೆಡೆ ವಾರದ ಹಿಂದಷ್ಟೇ ಬಿಡುಗಡೆಗೊಂಡು ಮಿಲಿಯನ್ನುಗಟ್ಟಲೆ ವ್ಯೂಸ್ ಪಡೆದು ಪ್ರಸಿದ್ಧಿ ಪಡೆದುಕೊಂಡಿರುವ ಟ್ರೈಲರ್ ಗಳ ನಡುವೆ  ಬನಾರಸ್ ಕಡೆಯಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಈ ಸಿನಿಮಾದ ವಿಶಾಲ ಕರ್ನಾಟಕ ವಿತರಣಾ ಹಕ್ಕನ್ನು ಖ್ಯಾತ ವಿತರಣಾ ಸಂಸ್ಥೆ ಡಿ ಬೀಟ್ಸ್ ಪಡೆದುಕೊಂಡಿದೆ.

ಶೈಲಜಾ ನಾಗ್ ಮತ್ತು ಬಿ ಸುರೇಶ್ ಸಾರಥ್ಯದ ಡಿ ಬೀಟ್ಸ್ ಎಂಥಾ ಗುಣಮಟ್ಟವನ್ನು ಕಾಯ್ದುಕೊಂಡಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಈ ಸಂಸ್ಥೆಯಿಂದ ಬಿಡುಗಡೆಗೊಳ್ಳುವುದೇ ಪ್ರತಿಷ್ಠೆಯ ಸಂಗತಿ ಎಂಬಂಥಾ ವಾತಾವರಣವೂ ಇದೆ. ಎಲ್ಲ ವಿಷಯಗಳಲ್ಲೂ ಹಿಡಿಸಿದರೆ ಮಾತ್ರವೇ ಅಂಥಾ ಚಿತ್ರಕ್ಕೆ ಡಿ ಬೀಟ್ಸ್ ಕಡೆಯಿಂದ ಬಿಡುಗಡೆಯ ಭಾಗ್ಯ ಸಿಗುತ್ತದೆ. ಹಾಗಾಗಿ ಬನಾರಸ್ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಚಿತ್ರದ ಬಗೆಗಿನ ಬೆರಗನ್ನು ಇಮ್ಮಡಿಯಾಗುವಂತೆ ಮಾಡಿದೆ.

ಬನಾರಸ್ ಅನ್ನು ವಿಶಾಲ ಕರ್ನಾಟಕಕ್ಕೆ ಯಾವ ಸಂಸ್ಥೆಯ ಮೂಲಕ ವಿತರಣೆ ಮಾಡುತ್ತಾರೆಂಬ ಕುತೂಹಲಕ್ಕೆ ಈ ಮೂಲಕ ತೆರೆಬಿದ್ದಿದೆ. ನಿರೀಕ್ಷೆಯಂತೆಯೇ ಡಿ ಬೀಟ್ಸ್ ವಿತರಣಾ ಹಕ್ಕನ್ನು ಖರೀದಿಸಿದೆ. ಅತ್ಯಂತ ವ್ಯವಸ್ಥಿತವಾಗಿ ಚಿತ್ರವನ್ನು ಕರ್ನಾಟಕದ ತುಂಬೆಲ್ಲ ಬಿಡುಗಡೆ ಮಾಡೋದು ಡಿ ಬೀಟ್ಸ್ ಯೋಜನೆ. ಅದಕ್ಕೆ ತಕ್ಕಂತೆ ಬನಾರಸ್ ಬಿಡುಗಡೆಗೆ ಪ್ಲಾನು ಮಾಡಿಕೊಳ್ಳಲಾಗಿದೆ. ಈ ವಿದ್ಯಮಾನದಿಂದಾಗಿ ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್ ಸಂತೃಪ್ತರಾಗಿದ್ದಾರೆ. ನಾಯಕ ನಟ ಝೈದ್ ಖಾನ್ ಮುಖದಲ್ಲಿಯೂ ಸಂತಸ ಮಿನುಗುತ್ತಿದೆ.

ಬನಾರಸ್ ಬಿಡುಗಡೆಗೆ ಇನ್ನು ಬಾಕಿ ಉಳಿದಿರೋದು ಕೆಲವೇ ದಿನಗಳು ಮಾತ್ರ. ಈ ಸಂಬಂಧವಾಗಿ ಝೈದ್ ಖಾನ್ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ. ನಾಯಕಿ ಸೋನಲ್ ಮೊಂತೇರೋ ಕೂಡಾ ಅದಕ್ಕೆ ಸಾಥ್ ಕೊಟ್ಟಿದ್ದಾರೆ. ಇಡೀ ಚಿತ್ರತಂಡ ನಾನಾ ಜವಾಬ್ದಾರಿ ಹೊತ್ತು ಉತ್ಸಾಹದಿಂದ ಮುಂದಡಿ ಇಡುತ್ತಿದೆ. ಇದೀಗ ಕರ್ನಾಟಕದಲ್ಲಿ ವಿತರಣಾ ಹಕ್ಕು ಡಿ ಬೀಟ್ಸ್ ಮಡಿಲು ಸೇರುತ್ತಲೇ, ಇನ್ನುಳಿದ ಒಂದಷ್ಟು ಭಾಷೆಗಳಲ್ಲಿಯೂ ಬಿಡುಗಡೆಯ ಮಾತುಕತೆ ನಡೆಯುತ್ತಿವೆ. ದೊಡ್ಡ ಸಂಸ್ಥೆಗಳೇ ವಿತರಣಾ ಹಕ್ಕು ಖರೀದಿಸಲು ಮುಂದೆ ಬಂದಿವೆಯಂತೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page