Friday, April 26, 2024

ಸತ್ಯ | ನ್ಯಾಯ |ಧರ್ಮ

ಪತ್ರಕರ್ತ ವಿಶ್ವೇಶ್ವರ ಭಟ್ಟರಿಂದ ರಾಷ್ಟ್ರಪತಿಗೆ ಅವಮಾನ!

ಕನ್ನಡ ದಿನಪತ್ರಿಕೆ ‘ವಿಶ್ವವಾಣಿ’ ಸಂಪಾದಕರಾದ ವಿಶ್ವೇಶ್ವರ ಭಟ್ ತಮ್ಮ ಲೇಖನವೊಂದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅವಮಾನಿಸಿದ ಸಂಗತಿಯೊಂದು ತಡವಾಗಿ ಬೆಳಕಿಗೆ ಬಂದಿದೆ. ವಿಶ್ವವಾಣಿ ಪತ್ರಿಕೆಯ ತಮ್ಮದೇ ಅಂಕಣ ‘ನೂರೆಂಟು ವಿಶ್ವ’ದಲ್ಲಿ ಅಕ್ಟೋಬರ್ 6 ರಂದು ಬರೆದ ಲೇಖನವೊಂದರಲ್ಲಿ ‘ಮುರ್ಮು’ ಎಂಬ ಪದ ಬಳಸಿ ರಾಷ್ಟ್ರಪತಿಗಳ ಮೈಬಣ್ಣವನ್ನು ಹೀಯಾಳಿಸಿ ಅವಮಾನಕರವಾಗಿ ಬರೆದಿದ್ದಾರೆ.

ನೂರೆಂಟು ವಿಶ್ವ‘ ವಿಶ್ವೇಶ್ವರ ಭಟ್ ಅವರ ವಯಕ್ತಿಕ ಬರಹಗಳಾಗಿದ್ದು, ವಿಶ್ವವಾಣಿ ಪತ್ರಿಕೆಗೆ ವಾರಕ್ಕೊಮ್ಮೆ ಒಂದೊಂದು ವಿಶೇಷ ವಿಚಾರಗಳನ್ನು ಇಟ್ಟು ಅಂಕಣವನ್ನು ಬರೆಯುತ್ತಿದ್ದಾರೆ. ಸಧ್ಯ ಈ ವಾರದ ಅಕ್ಟೋಬರ್ 6 ರ ತಮ್ಮ ಅಂಕಣದಲ್ಲಿ ವಿಶ್ವೇಶ್ವರ ಭಟ್ ಜೋರ್ಡಾನ್ ದೇಶದ ಪರಿಚಯವನ್ನು ಮಾಡಿಕೊಟ್ಟಿದ್ದಾರೆ.

ಜೋರ್ಡಾನ್ ದೇಶದ ಭೌಗೋಳಿಕ ವ್ಯವಸ್ಥೆ ಮತ್ತು ಅಲ್ಲಿನ ಹವಾಮಾನವನ್ನು ಪರಿಚಯ ಮಾಡಿಕೊಡುವ ಭರದಲ್ಲಿ ಅಲ್ಲಿನ ಬಿಸಿಲಿಗೆ ಮೈಯ ಚರ್ಮ ಕಪ್ಪಾಗುವುದು ಎಂದು ಹೇಳುವುದನ್ನು ವಿಶ್ವೇಶ್ವರ ಭಟ್ “… ಸುಟ್ಟು ಕರಕಲಾದ ಕಾಗೆ. ಥೇಟು ಮುರ್ಮು ಅವತಾರ” ಎಂದು ಹೇಳಿ ಶ್ರೀಮತಿ ದ್ರೌಪದಿ ಮುರ್ಮು ಅವರ ಮೈಬಣ್ಣವನ್ನು ಪರೋಕ್ಷವಾಗಿ ಗೇಲಿ ಮಾಡಿದ್ದಾರೆ. ಇದು ಸ್ಪಷ್ಟವಾಗಿ ವರ್ಣಭೇದ ನೀತಿಯ ಕೆಳಗೆ ಬರುತ್ತದೆ.

ವಿಶ್ವೇಶ್ವರ ಭಟ್ ಅವರು ಜೋರ್ಡಾನ್ ನ ಬಿಸಿಲನ್ನು ವರ್ಣಿಸಲು ದ್ರೌಪದಿ ಮುರ್ಮು ಅವರ ಅವಮಾನಿಸಿದ ಸಾಲು ಈ ಕೆಳಗಿನಂತಿದೆ
ಅಪ್ಪಟ ಬೀನ್ಕಿ ಕೆಂಡ! ಅರ್ಧಗಂಟೆ ಆ ಮರುಭೂಮಿಯಲ್ಲಿ ನಿಂತರೆ ಇಡೀ ಶರೀರವೆಲ್ಲ ಸುಟ್ಟು ಕರಕಲಾದ ಕಾಗೆ! ಥೇಟು ‘ಮುರ್ಮು’ ಅವತಾರ! ಕಣ್ಮುಚ್ಚಿ ದರೂ ಜೋಗದ ಜಲಪಾತದಂತೆ ಸುರಿಯುವ ನಿಗಿನಿಗಿ ಬಿಸಿಲ ಧಾರೆ. ಜೋರ್ಡಾನ್ ಇರುವುದೇ ಹಾಗೆ. ಇಡೀ ದೇಶದ ಭೂಭಾಗದ ಮುಕ್ಕಾಲು ಭಾಗ (75%) ಬೋಳು ಮರುಭೂಮಿ. ಅಲ್ಲಿ ಒಂದೇ ಒಂದು ಹಸಿರು ಕಡ್ಡಿಯೂ ಕಾಣಸಿಗದು. ಅಂಥ ರಣಚಂಡಿ ಮರಳುಹಾಸು.
ಇದು ಪತ್ರಕರ್ತ ವಿಶ್ವೇಶ್ವರ ಭಟ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮೈ ಬಣ್ಣವನ್ನು ಗೇಲಿ ಮಾಡಿದ ರೀತಿ.

ವಿಶ್ವೇಶ್ವರ ಭಟ್ ಈ ಹಿಂದೆಯೂ ಸಹ “ವಕ್ರತುಂಡೋಕ್ತಿ” ಎಂಬ ತಲೆಬರಹದ ಅಡಿಯಲ್ಲಿ ಜಾತಿನಿಂಧನೆ, ಬಣ್ಣದ ಹಿನ್ನೆಲೆಯಲ್ಲಿ ಕುಹಕ, ಸೈದ್ಧಾಂತಿಕ ವಿರೋಧಿಗಳ ಅವಹೇಳನದಂತಹ ಹಲವಷ್ಟು ಕೀಳು ಮಟ್ಟದ ಟ್ರೋಲ್ ಗಳನ್ನು ಮಾಡಿ ಸಾಮಾಜಿಕವಾಗಿ ಟೀಕೆಗೆ ಗುರಿಯಾಗಿದ್ದರು. ಈಗ ದೇಶದ ಪರಮೋಚ್ಚ ಪ್ರಜೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕಾಗೆಗೆ ಹೋಲಿಸಿ ಕುಹಕದಿಂದ ಅವಹೇಳನ ಮಾಡಿದ್ದಾರೆ.

“ಮುರ್ಮು” ಎಂಬುದು ಕನ್ನಡದಲ್ಲಿ ಬಳಕೆಯೇ ಇಲ್ಲದ ಪದವಾಗಿದೆ. ಅದರಲ್ಲೂ ಬಣ್ಣದ ಹಿನ್ನೆಲೆ ವರ್ಣಿಸಿ ಕಪ್ಪು ಎಂಬುದನ್ನು ಮುರ್ಮು ಅವತಾರ ಎಂದು ಉಲ್ಲೇಖಿಸಿ ಹೇಳುವುದು, ಸ್ಪಷ್ಟವಾಗಿ ಶ್ರೀಮತಿ ದ್ರೌಪದಿ ಮುರ್ಮು ಅವರ ಮೈ ಬಣ್ಣದ ಬಗೆಗಿನ ಮಾತು ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವ್ಯಕ್ತಿಯೊಬ್ಬರ ಘನತೆಗೆ ಕುಂದು ತರುವ “ಬಾಡಿ ಶೇಮಿಂಗ್”ನ್ನು ಯಾರು ಮಾಡಿದರೂ ತಪ್ಪೇ. ಒಬ್ಬ ಹಿರಿಯ ಪತ್ರಕರ್ತನ ಜಾಗದಲ್ಲಿರುವ ವಿಶ್ವೇಶ್ವರ ಭಟ್ ಕೊಂಚ ವಿವೇಚನೆ ಇಟ್ಟು ಲೇಖನ ಬರೆಯಬೇಕಿತ್ತು. ಸಮಾಜದಲ್ಲಿ ಮೇಲ್ವರ್ಗ ಎಂದು ಗುರುತಿಸಿಕೊಂಡ ಸಮುದಾಯದ ವಿಶ್ವೇಶ್ವರ ಭಟ್ ಮೇಲಿನ ಸಾಲುಗಳನ್ನು ಬೇಕಂತಲೇ ಬರೆದಿರಬಹುದು ಎಂಬುದೂ ಕೆಲವರ ಅಭಿಪ್ರಾಯವಾಗಿದೆ. ಇಲ್ಲವಾದರೆ ಉದ್ದೇಶಪೂರ್ವಕವಾಗಿ ಶ್ರೀಮತಿ ದ್ರೌಪದಿ ಮುರ್ಮು ಅವರ ಹೆಸರು ಬರೆಯುವ ಅಗತ್ಯವಿರಲಿಲ್ಲ.

Related Articles

ಇತ್ತೀಚಿನ ಸುದ್ದಿಗಳು