ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹತಾಶರಾಗಿದ್ದಾರೆ. ಮುಖ್ಯಮಂತ್ರಿಯಾಗಲು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದರು. ಒಂದು ವೇಳೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯದಿದ್ದರೆ, ಸುಮಾರು 50-60 ಶಾಸಕರನ್ನು ಕರೆದುಕೊಂಡು, “ರಾಜ್ಯ ಕಂಡ ಪ್ರಾಮಾಣಿಕ ರಾಜಕಾರಣಿ ಡಿ.ಕೆ. ಶಿವಕುಮಾರ್ ಮತ್ತು ವಿಜಯೇಂದ್ರ ಸೇರಿ” ಸರ್ಕಾರ ರಚಿಸಲೂ ಹೊರಟಿದ್ದರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
“ಹಣ ಪಡೆದ ಸ್ವಾಮೀಜಿಗಳು ಸಹ ತಥಾಸ್ತು ಎಂದಿದ್ದರು. ಅಂತಹ ಯೋಜನೆಗೆ ನಾನು ತೊಡಕಾಗಬಹುದು ಎಂಬ ಕಾರಣಕ್ಕಾಗಿಯೇ ನನ್ನನ್ನು ಪಕ್ಷದಿಂದ ಉಚ್ಚಾಟಿಸಿದರು” ಎಂದು ಯತ್ನಾಳ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಡಿ.ಕೆ. ಶಿವಕುಮಾರ್ ಅವರು ಬಿಹಾರಕ್ಕೆ ಹಣ ನೀಡಿದರು. ಅತಿರಥ ಮಹಾರಥರು ದಾಖಲೆಯ ಪ್ರಚಾರ ಮಾಡಿದರೂ ಕಾಂಗ್ರೆಸ್ ಅಲ್ಲಿ ಸೋತಿದೆ. ಈ ವಿಷಯವನ್ನು ಬಿಜೆಪಿಯ ವರಿಷ್ಠರೂ ನನಗೆ ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ಸಿಎಂ ಆಗುವುದು, ವಿಜಯೇಂದ್ರ ಡಿಸಿಎಂ ಆಗುವ ಕನಸು ಕಟ್ಟಿದ್ದರು. “ಇಬ್ಬರೂ ಸೇರಿದ್ದರೆ ರಾಜ್ಯದಲ್ಲಿ ಬೆಳ್ಳಿ, ಬಂಗಾರ, ಕಸ ಏನೂ ಉಳಿಯುತ್ತಿರಲಿಲ್ಲ,” ಎಂದು ವ್ಯಂಗ್ಯವಾಡಿದರು.
“ಈಗ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಭವನ ಕಟ್ಟಿದ್ದೇನೆ, ಬಿಹಾರಕ್ಕೆ ಹಣ ಕೊಟ್ಟಿದ್ದೇನೆ ಎಂದೆಲ್ಲ ರಾಹುಲ್ ಗಾಂಧಿ ಮುಂದೆ ಲೆಕ್ಕ ಇಡುತ್ತಿದ್ದಾರೆ. ಆದರೆ, ‘ನಾನೇ ಶೂನ್ಯಕ್ಕಿಳಿದಿದ್ದೇನೆ, ನಡಿ’ ಎಂದು ರಾಹುಲ್ ಗಾಂಧಿ ಅವರು ಶಿವಕುಮಾರ್‌ರನ್ನು ಅಟ್ಟುತ್ತಿದ್ದಾರೆ” ಎಂದು ಯತ್ನಾಳ್ ಲೇವಡಿ ಮಾಡಿದರು.
