ಮಿಥುನ್ ಚಕ್ರವರ್ತಿ ಅವರನ್ನು ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಇತ್ತೀಚೆಗೆ ಪ್ರಕಟಿಸಿದೆ. ದಾದಾ ಸಾಹೇಬ್ ಫಾಲ್ಕೆ ನಮ್ಮ ದೇಶದ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿದೆ.
ಅಕ್ಟೋಬರ್ 8ರಂದು ನಡೆಯಲಿರುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಕೇಂದ್ರ ವಾರ್ತಾ ಸಚಿವ ಅಶ್ವಿನಿ ವೈಷ್ಣವ್ ಈ ಮಾಹಿತಿಯನ್ನು ಪೋಸ್ಟ್ ಮಾಡಿದ್ದಾರೆ. ಮಿಥುನ್ ಚಕ್ರವರ್ತಿ ಅವರ ಅದ್ಭುತ ಚಲನಚಿತ್ರ ಪ್ರಯಾಣವು ಅನೇಕರಿಗೆ ಸ್ಫೂರ್ತಿಯಾಗಿದೆ. ಭಾರತೀಯ ಚಲನಚಿತ್ರೋದ್ಯಮಕ್ಕೆ ಅವರ ಸೇವೆಯನ್ನು ಗುರುತಿಸಿ ಈ ವರ್ಷ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲು ತೀರ್ಪುಗಾರರು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಮಿಥುನ್ ಚಕ್ರವರ್ತಿ ಬಾಲಿವುಡ್‌ನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ. ನಾಯಕನಲ್ಲದೆ ಹಲವು ಸ್ಟಾರ್ ಹೀರೋಗಳ ಚಿತ್ರಗಳಲ್ಲಿ ಪೋಷಕ ನಟನಾಗಿ, ವಿಲನ್ ಆಗಿಯೂ ನಟಿಸಿದ್ದರು. ಅವರು 1976ರಲ್ಲಿ ‘ಮೃಗಯಾ’ ಚಿತ್ರದ ಮೂಲಕ ನಟರಾಗಿ ಪಾದಾರ್ಪಣೆ ಮಾಡಿದರು. ಅವರು ತಮ್ಮ ಮೊದಲ ಚಿತ್ರದಲ್ಲೇ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆದರು. ‘ಮುಕ್ತಿ’, ‘ಬನ್ಸಾರಿ’, ‘ಅಮರ್‌ದೀಪ್’, ‘ಪ್ರೇಮ್ ವಿವಾಹ’, ‘ಭಯಾನಕ್’, ‘ಕಸ್ತೂರಿ’, ‘ಕಿಸ್ಮತ್’, ‘ಮಿ ಔರ್ ಮೇರಾ ಸಾಥಿ’, ‘ಸಾಹಸ್’, ‘ವಾಂಟೆಡ್’, ‘ಬಾಕ್ಸರ್’, ‘ತ್ರಿನೇತ್ರ’ ‘ದುಷ್ಮನ್’, ‘ದಲಾಲ್’, ‘ಭೀಷ್ಮ’, ‘ಸುಲ್ತಾನ್’, ‘ಗುರು’, ‘ಕಿಕ್’, ‘ಬಾಸ್’ ಮತ್ತು ಡಿಸ್ಕೋಡಾನ್ಸರ್ ಅವರಿಗೆ ಮನ್ನಣೆಯನ್ನು ತಂದುಕೊಟ್ಟಿತು.
ಹಿಂದಿ ಮತ್ತು ಬಂಗಾಳಿ ಚಿತ್ರಗಳಲ್ಲದೆ, ಅವರು ಕನ್ನಡ, ತೆಲುಗು, ಒರಿಯಾ ಮತ್ತು ಭೋಜ್‌ಪುರಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ.
“ಐ ಆಮ್ ಡಿಸ್ಕೋ ಡ್ಯಾನ್ಸರ್” ಹಾಡಿನ ಮೂಲಕ ಅವರು ದೇಶ ಮತ್ತು ವಿದೇಶಗಳಲ್ಲಿ ಗುರುತಿಸಿಕೊಂಡರು. ಈ ವರ್ಷದ ಆರಂಭದಲ್ಲಿ ಕೇಂದ್ರವು ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿತ್ತು.