ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕೆಎಸ್ಆರ್ಟಿಸಿ ಬಸ್ ಭೀಕರ ಅಪಘಾತವಾಗಿದ್ದು, ಅನೇಕ ಮಂದಿ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಚಾಲಕನ ಅಜಾಗರೂಕತೆ ಮತ್ತು ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಈ ಅಪಘಾತಕ್ಕೆ ಕಾರಣ ಎಂಬ ಮಾತುಗಳು ಕೇಳಿ ಬಂದಿವೆ. ಪಲ್ಟಿ ಹೊಡೆದ ಜಾಗದಲ್ಲಿ ಕಂಟೇನರ್ ಗೆ ಗುದ್ದಿದ ಪರಿಣಾಮ ಹಲವರಿಗೆ ತೀವ್ರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಕುಣಿಗಲ್ ಡಿಪೋಗೆ ಸಂಬಂಧಿಸಿದ ಬಸ್ ಇದಾಗಿದ್ದು, ಮೈಸೂರಿನಿಂದ ಬರುವಾಗ ಮಂಡ್ಯ ಪಟ್ಟಣದ ಕಡೆ ಬಸ್ ತಿರುಗುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಮಂಡ್ಯ ಪಟ್ಟಣದ ಸರ್ವೀಸ್ ರಸ್ತೆಯಲ್ಲಿ ಸಂಭವಿಸಿದ ಈ ಅಪಘಾತದಲ್ಲಿ 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಬಸ್ ನಲ್ಲಿ ಸುಮಾರು 60 ಮಂದಿ ಪ್ರಯಾಣಿಕರಿದ್ದರು. ಅದರಲ್ಲೂ ವಿದ್ಯಾರ್ಥಿಗಳು ಹೆಚ್ಚು ಮಂದಿ ಇದ್ದರು ಎಂದು ತಿಳಿದು ಬಂದಿದೆ.
ಬೆಂಗಳೂರು ಮೈಸೂರು ಹೆದ್ದಾರಿ ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದು, ಬಸ್ ಪಲ್ಟಿ ಹೊಡೆದ ಜಾಗದಲ್ಲೂ ಸಣ್ಣಪುಟ್ಟ ಏರು ತಗ್ಗುಗಳಿರುವ ಹಿನ್ನೆಲೆಯಲ್ಲಿ ಅದನ್ನು ತಪ್ಪಿಸುವ ಭರದಲ್ಲಿ ಈ ಅವಘಡ ಸಂಭವಿಸಿದೆ. ಇಡೀ ಹೆದ್ದಾರಿಯುದ್ದಕ್ಕೂ ಇಂತದ್ದೇ ಅವೈಜ್ಞಾನಿಕ ವ್ಯವಸ್ಥೆ ಇದ್ದು, ಹೆದ್ದಾರಿ ಆಗಿದ್ದೇ ಪ್ರಯಾಣಿಕರಿಗೆ ದೊಡ್ಡ ಶಾಪವಾದಂತಾಗಿದೆ ಎಂದು ಪ್ರಯಾಣಿಕರು, ಸ್ಥಳೀಯರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.