ಬೆಂಗಳೂರು: ಹೆಡ್ ಬುಷ್ ಸಿನಿಮಾ ಕೆಲವರ ಷಡ್ಯಂತ್ರದಿಂದ ವಿವಾದಕ್ಕೆ ಸಿಲುಕಿ ನಾಯಕ ನಟ ಡಾಲಿ ಧನಂಜಯ ಅವರ ಪರವಾಗಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ನಾಡಿನ ಹಿರಿಯ ಸಂಸ್ಕೃತಿ ಚಿಂತಕ ಡಾ.ರಹಮತ್ ತರೀಕೆರೆ ನಟನ ಕುರಿತು ಮೆಚ್ಚುಗೆಯ ಮಾತನಾಡಿದ್ದಾರೆ.
ತಮ್ಮ ಫೇಸ್ಬುಕ್ ಗೋಡೆಯ ಮೇಲೆ ಈ ಕುರಿತು ಬರೆದಿರುವ ರಹಮತ್ ತರೀಕೆರೆ, ʼಹೆಡ್ ಬುಷ್ ಸಿನಿಮಾದ ವಾದ ವಿವಾದಗಳಿಗೆ ಉತ್ತರ ನೀಡುವ ಸಂಧರ್ಭದಲ್ಲಿ ನಟ ಡಾಲಿ ಧನಂಜಯ ಅವರು ಪ್ರಾಸಂಗಿಕವಾಗಿ ಆಡಿರುವ ಮಾತು, ಕೊಟ್ಟಿರುವ ಹೇಳಿಕೆಗಳನ್ನು ನೋಡಿದರೆ, ಕರ್ನಾಟಕದ ಸುಂದರವಾದ ಮನಸ್ಸುಗಳಲ್ಲಿ ʼಡಾಲಿʼ ಕೂಡ ಒಬ್ಬರುʼ ಎಂದು ಅಭಿಪ್ರಾಯಪಟ್ಟಿದ್ದಾರೆ.
ಡಾಲಿ ಧನಂಜಯ್ ನಾಯಕ ನಟನಾಗಿ ಅಭಿನಯಿಸಿರುವ ಹೆಡ್ ಬುಷ್ ಸಿನಿಮಾದಲ್ಲಿನ ದೃಶ್ಯವೊಂದರಲ್ಲಿ ಕನ್ನಡದ ಸಂಸ್ಕೃತಿಯ ಭಾಗವಾಗಿರುವ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ಕೆಲವರು ದಾಳಿ ನಡೆಸಿದ್ದರು. ಈ ಹಿನ್ನಲೆಯಲ್ಲಿ ಮಾಧ್ಯಮದಲ್ಲಿ ನಡೆದ ಸಂದರ್ಶನವೊಂದರಲ್ಲಿ ನಟ ಧನಂಜಯರವರು, ಈ ವಾದ-ವಿವಾದಗಳಿಗೆ ಉತ್ತರ ನೀಡಿದ್ದರು.
ಡಾಲಿ ಧನಂಜಯ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಬೆಂಬಲದ ಮಹಾಪೂರವೇ ಹರಿದು ಬಂದಿದ್ದು ʼಬಡವ್ರ ಮಕ್ಕಳು ಬೆಳೀಬೇಕು ಕಣ್ರಯ್ಯʼ ಎಂಬ ಹ್ಯಾಶ್‌ಟ್ಯಾಗ್ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಕೃತಿ ಚಿಂತಕ ರಹಮತ್ ತರೀಕೆರೆಯವರು ತಮ್ಮ ಪೇಸ್ಬುಕ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದು, ʼನನಗೆ ನಟ ಡಾಲಿ ಧನಂಜಯ್ ಅವರ ಬಗ್ಗೆ ಏನೂ ಗೊತ್ತಿರಲಿಲ್ಲ. ಮೊನ್ನೆಯಿಂದ ಅವರು ಪ್ರಾಸಂಗಿಕವಾಗಿ ಆಡಿರುವ ಮಾತು, ಕೊಟ್ಟಿರುವ ಹೇಳಿಕೆಗಳನ್ನು ನೋಡಿದೆ. ‘ಇದು ಕರ್ನಾಟಕದ ಸುಂದರವಾದ ಮನಸ್ಸುಗಳಲ್ಲಿ ಒಂದು. ನನಗೆ ನಟ ಡಾಲಿ ಧನಂಜಯ್, ಬಸವಣ್ಣ ಕುವೆಂಪು ಅಂಬೇಡ್ಕರ್ ಚಿಂತನೆಗಳ ಬಿಸಿಲು-ಬೆಳಕು ಗಾಳಿ-ಮಳೆಯನುಂಡು ಚಿಗುರಿದ ಗಿಡ’ ಅನಿಸಿತುʼ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕನ್ನಡದ ವಿದ್ವತ್ ವಲಯವು ಸಹ ಸಿನಿಮಾ ನಟ ಡಾಲಿಯವರ ಕುರಿತು ಸದಭಿಪ್ರಾಯ ತಳೆಯುವ ಸೂಚನೆ ದೊರೆತಿದೆ.
