Friday, June 14, 2024

ಸತ್ಯ | ನ್ಯಾಯ |ಧರ್ಮ

ದಲಿತರು ದೇವರು-ದೇವಾಲಯಗಳನ್ನು ಬಹಿಷ್ಕರಿಸಬೇಕು.

ದೇವರ ಗುಡಿ ಕಟ್ಟಿದ್ದು, ಆ ಗುಡಿಗೆ ಬಣ್ಣ ಬಳಿದದ್ದು, ದೇವರ ವಿಗ್ರಹ ಕೆತ್ತಿದ್ದು, ಆ ದೇವರನ್ನು ಗುಡಿಯೊಳಗೆ ಪ್ರತಿಷ್ಠಾಪಿಸಿದ್ದು ದೇವರ ಪೂಜೆಗೆ ಹೂ ಬೆಳೆದಿದ್ದು, ತೀರ್ಥದ ನೀರಿಗೆ ಬಾವಿ ತೋಡಿದ್ದು, ಪ್ರಸಾದಕ್ಕೆ ಹಣ್ಣು-ಧಾನ್ಯ ಬೆಳೆದಿದ್ದು, ಪ್ರಸಾದ ಮಾಡಲು ಸೌದೆ/ಅನಿಲ ಹೊತ್ತಿದ್ದು ದಲಿತರೇ. ಆದರೂ ಇವರಿಗೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲ ಅಪಮಾನ, ನೋವು ತಪ್ಪಿಲ್ಲ…ಮುಂದೆ ಓದಿ ಕಲಬುರಗಿಯ ಪತ್ರಕರ್ತ ವಿಕ್ರಂ ತೇಜಸ್‌ ಅವರ ಲೇಖನ.

ಸಾವಿರಾರು ವರ್ಷಗಳಿಂದ ಈ ದೇಶದಲ್ಲಿ ಮನುವಾದಿಗಳು ದಲಿತರನ್ನು, ಅಸ್ಪೃಶ್ಯರನ್ನು ಆದಿವಾಸಿಗಳನ್ನು ಹಾಗೂ ಮಹಿಳೆಯರನ್ನು ಪ್ರಾಣಿಗಳಂತೆ ನಡೆಸಿಕೊಂಡು ಇರುವೆಯಂತೆ ಸಾಯಿಸಿದರೂ ಇವರು ನಂಬಿರುವ ಮುಕ್ಕೋಟಿ ದೇವರುಗಳಲ್ಲಿ ಯಾವೊಬ್ಬ ದೇವರು ಸಹ ಬಂದು ಇವರನ್ನು ರಕ್ಷಣೆ ಮಾಡಲಿಲ್ಲ. ಆದ್ದರಿಂದ ಈ ಸತ್ಯವನ್ನು ಅರ್ಥಮಾಡಿಕೊಂಡು ಈಗ ಇವರೇ ಆ ದೇವರು ಮತ್ತು ದೇವಾಲಯಗಳನ್ನು ಬಹಿಷ್ಕರಿಸಬೇಕು.

ಇವರ ಏಳಿಗೆಗೆ ರಾಜ ವೈಭವವನ್ನು ತೊರೆದ ವಿಶ್ವಗುರು ಬುದ್ಧ, ಇವರಿಗಾಗಿಯೇ ಕೊಲೆಯಾದ ಅಣ್ಣ ಬಸವಣ್ಣ, ತನ್ನ ಇಡೀ ಪರಿವಾರವನ್ನು ಬಲಿದಾನ ನೀಡಿ, ಇವರ ಚಿಂತೆಯಲ್ಲೇ ಹತ್ತಾರು ಕಾಯಿಲೆಗಳಿಂದ ನರಳುತ್ತಲೇ ನ್ಯಾಯ ಕೊಡಿಸಿ ಕೊನೆಯುಸಿರೆಳೆದ ಬಾಬಾಸಾಹೇಬ್ ಡಾ.ಅಂಬೇಡ್ಕರ್, ನೂರು ತರಹದ ನಿಂದನೆ, ಅವಮಾನ ಸಹಿಸಿ ಸಮ ಸಮಾಜಕ್ಕಾಗಿ ವೈಚಾರಿಕತೆಯನ್ನು ಸಾರಿದ ಮತ್ತು ಜೀವನವಿಡೀ ದೇಶ ಸುತ್ತಿ ಮಾನವೀಯತೆ ಬಿತ್ತಿದ ಕನಕ, ಕಬೀರ ಹಾಗೂ ಹಲವಾರು ಶರಣರ, ಸೂಫಿಗಳ-ಸಂತರ ಮಾರ್ಗದಲ್ಲಿ ನಡೆಯುವ ಜರೂರು ಮತ್ತು ಅನಿವಾರ್ಯತೆ ಈ ಸಮುದಾಯಕ್ಕಿದೆ.

ಒಂದು ಸುಳ್ಳನ್ನು ಸಾವಿರ ಸಲ ಸತ್ಯ ಸತ್ಯ ಅಂತ ಹೇಳಿ ಆ ಮಿಥ್ಯೆಯನ್ನೇ ಸತ್ಯವೆಂದು ನಂಬಿಸಿದ್ದರಿಂದ ಈ ಸಮುದಾಯ ಮೂಲ ಸತ್ಯವನ್ನು ತಿಳಿಯದೆ ಹೋದರು. ಅವರು ಸೃಷ್ಟಿಸಿದ ಹುಸಿ ದೇವರು, ನಂಬಿಕೆ ಮತ್ತು ಜೀವ ವಿರೋಧಿ ಸಂಸ್ಕಾರಗಳನ್ನು ಅಗಾಧ ಭಕ್ತಿ, ಶ್ರದ್ಧೆ ಮತ್ತು ಅತ್ಯಂತ ಪ್ರಾಮಾಣಿಕತೆಯಿಂದ ಆಚರಿಸುತ್ತ ಉಳಿಸಿ ಬೆಳೆಸಿದ ಶೋಷಿತರ ಸಮುದಾಯಗಳ ಮೇಲೆ ಅದೇ ದೇವರು, ಧರ್ಮ ಮತ್ತು ಸಂಪ್ರದಾಯಗಳನ್ನು ಮತ್ತೆ ಮತ್ತೆ ಹೇರಲಾಗುತ್ತಿದೆ. ಅವುಗಳ ಹೆಸರಿನಲ್ಲಿ ಹಲವು ರೀತಿಯ ಹಲ್ಲೆ, ಅಪಮಾನ, ಹಿಂಸೆ ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ ಕೊಲೆಗಳಂತಹ ಘೋರ ಘಟನೆಗಳು ನಡೆದಿವೆ. ಇದನ್ನು ಅರ್ಥಮಾಡಿಕೊಳ್ಳದಿದ್ದರೆ ಇಂದು ಮುಂದೆ ಎಂದೆಂದೂ  ಇಂಥವು ನಿರಂತರವಾಗಿ ನಡೆಯಲಿವೆ. 

ದೇವರ ಗುಡಿ ಕಟ್ಟಿದ್ದು, ಆ ಗುಡಿಗೆ ಬಣ್ಣ ಬಳಿದದ್ದು, ದೇವರ ವಿಗ್ರಹ ಕೆತ್ತಿದ್ದು, ಆ ದೇವರನ್ನು ಗುಡಿಯೊಳಗೆ ಪ್ರತಿಷ್ಠಾಪಿಸಿದ್ದು ದೇವರ ಪೂಜೆಗೆ ಹೂ ಬೆಳೆದಿದ್ದು, ತೀರ್ಥದ ನೀರಿಗೆ ಬಾವಿ ತೋಡಿದ್ದು, ಪ್ರಸಾದಕ್ಕೆ ಹಣ್ಣು-ಧಾನ್ಯ ಬೆಳೆದಿದ್ದು, ಪ್ರಸಾದ ಮಾಡಲು ಸೌದೆ/ಅನಿಲ ಹೊತ್ತಿದ್ದು ಇವರೇ. ಆದರೂ ಇವರಿಗೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲ ಅಪಮಾನ, ನೋವು ತಪ್ಪಿಲ್ಲ. ಪ್ರಶ್ನೆ ಮಾಡಿದವರ ಮೇಲೆ ಹಲ್ಲೆ-ಕೊಲೆಗಳು ನಿಂತಿಲ್ಲ. ಇನ್ನೂ ಎಷ್ಟು ದಿನ ಈ ಅವಮಾನ ಸಹಿಸಬೇಕು? ಇನ್ನೆಷ್ಟು ದಿನ ಇವರ ಬಿಟ್ಟಿ ಚಾಕರಿ ಮಾಡಬೇಕು? ಇನ್ನೆಷ್ಟು ಜೀವಗಳ ಬಲಿ ಕೊಡಬೇಕು? ಇದನ್ನು ಅರ್ಥ ಮಾಡಿಕೊಂಡು ತಿರುಗಿ ಬೀಳದಿದ್ದರೆ ನಿತ್ಯ ನರಕ ತಪ್ಪಿದ್ದಲ್ಲ. ಇದಕ್ಕೆ ಪರಿಹಾರ ಎಂದರೆ ಕಲ್ಲು ಮಣ್ಣು ಕಟ್ಟಿಗೆ ಹಾಗೂ ಲೋಹಗಳಿಂದ ನಿರ್ಮಿತವಾದ ನಿರ್ಜೀವ ದೇವರುಗಳನ್ನು ತಿರಸ್ಕರಿಸುವ ಮೂಲಕ ದಲಿತ, ಮಹಿಳಾ ಹಾಗೂ ಎಲ್ಲಾ ಶೋಷಿತ ಸಮುದಾಯ ಎಚ್ಚೆತ್ತುಕೊಂಡು ದೇವರು ಮತ್ತು ದೇವಾಲಯಗಳನ್ನು ಬಹಿಷ್ಕರಿಸಬೇಕು.

ಸಂಪ್ರದಾಯವಾದಿಗಳ ಕುತಂತ್ರವನ್ನು ಅರಿತಿದ್ದ ಬಾಬಾಸಾಹೇಬರು ಜೀವವಿರೋಧಿ ಮನುಸ್ಮೃತಿ ಸುಟ್ಟುಹಾಕಿ 95 ವರ್ಷಗಳೇ ಕಳೆದಿವೆ. ಅದಕ್ಕೆ ಪ್ರತಿಯಾಗಿ ಜೀವಪರ ಸಂವಿಧಾನವನ್ನು ನೀಡಿದ್ದಾರೆ. ಆ ಸಂವಿಧಾನ ಜಾರಿಯಾಗಿ 72 ವರ್ಷಗಳು ಗತಿಸಿವೆ. ಆದರೆ, ಪ್ರತ್ಯಕ್ಷವಾಗಿ ಸಂವಿಧಾನ ಜಾರಿಯಾದರೂ, ಜಾತಿ, ಲಿಂಗ ಹಾಗೂ ವರ್ಗ ತಾರತಮ್ಯದ ರಾಜಕಾರಣದಿಂದ ಇಂದಿಗೂ ಪರೋಕ್ಷವಾಗಿ ಮನುಸ್ಮೃತಿಯೇ ಆಚರಣೆಯಲ್ಲಿದೆ. ಇದಕ್ಕೆ ಮತ್ತೊಂದು ಕಾರಣ, ಬಿಳಿ ತೊಗಲಿನ ಬ್ರಿಟಿಷರ ಸ್ಥಾನದಲ್ಲಿ ಬಿಳಿ, ಕೆಂಪು, ಕಂದು ಮಿಶ್ರ ತೊಗಲಿನ ಸಂಪ್ರದಾಯವಾದಿಗಳು ಕುಳಿತಿದ್ದಾರೆ. ಮನುಸ್ಮೃತಿಯ ಅನಿಷ್ಟಗಳನ್ನು ನಿಷೇಧಿಸಿ ಸಂವಿಧಾನ ಜಾರಿಗೊಳಿಸಬೇಕಾದ ಆಡಳಿತ ವ್ಯವಸ್ಥೆ ಭ್ರಷ್ಟವಾಗಿ, ಮನುಸ್ಮೃತಿ ಗಟ್ಟಿಗೊಳಿಸಲು ಬಿಟ್ಟಿ ತಿಂದು ಗಟ್ಟಿಯಾಗುತ್ತಿರುವ ಸೋಂಬೇರಿ ಪುರೋಹಿತಶಾಹಿ ವರ್ಗಕ್ಕೆ ಮೌಢ್ಯ ಬಿತ್ತಲು ರಾಜಾಶ್ರಯ ನೀಡುತ್ತಿವೆ. ಅಧಿಕಾರ ಹಿಡಿಯಲು ಅದೊಂದು ಅಸ್ತ್ರವಾಗಿ ಮಾಡಿಕೊಂಡು ಅನೇಕ ಸಂದರ್ಭಗಳಲ್ಲಿ ತೆರೆಯ ಮುಂದೆ ಮತ್ತು ಹಿಂದೆ ನಿಂತು ಮನುಸ್ಮೃತಿ ರಕ್ಷಿಸಲು ಕೋಮು ಗಲಭೆಗೆ ಕುಮ್ಮಕ್ಕು ನೀಡುತ್ತಿವೆ. ಆದರೆ, ಎಚ್ಚೆತ್ತುಕೊಂಡು ಪ್ರತಿರೋಧ ಒಡ್ಡಬೇಕಿದ್ದ ಶೋಷಿತ ಸಮುದಾಯ ಗಾಢ ನಿದ್ರೆಯಲ್ಲಿದೆ. ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರು ಹೇಳಿದ ಶಿಕ್ಷಣ ಸಂಘಟನೆ ಹೋರಾಟವೆಂಬ ಮೂರು ಮುಖ್ಯ ಸೂತ್ರಗಳನ್ನು ಇವರು ಅರ್ಥಮಾಡಿಕೊಳ್ಳದೇ ವ್ಯರ್ಥ ಕಾಲ ಕಳೆಯುತ್ತಿದ್ದಾರೆ. ಇನ್ನು ಅರ್ಥವಾದವರು ಅಳವಡಿಸಿಕೊಳ್ಳದೆ ಸ್ವಾರ್ಥಿಗಳಾಗಿದ್ದಾರೆ. 

2014ರ ನಂತರ ದೇವಸ್ಥಾನಗಳು ಹಾದಿ ಬೀದಿಗೊಂದು ತಲೆ ಎತ್ತಿವೆ. ಭಕ್ತಿಯ ಕಲ್ಪನೆಯೇ ಬದಲಾಗಿದೆ. ನ್ಯಾಯ, ಪ್ರೀತಿ, ಸಮಾನತೆ ಪಾತಾಳಕ್ಕೆ ಕುಸಿದಿದೆ. ಸೌಹಾರ್ದತೆಯ ಸಂಬಂಧಗಳಿಗೆ ದಿನೇ ದಿನೇ ಗೋರಿ ಕಟ್ಟಲಾಗುತ್ತಿದೆ. ಧರ್ಮಾಧಾರಿತ ಹಲ್ಲೆಗಳು  ದ್ವೇಷದ ಡೈಲಾಗುಗಳು ಎಲ್ಲೆಲ್ಲೂ ಕೇಳುತ್ತಿವೆ. ಸಂಪ್ರದಾಯದ ಹೆಸರಿನಲ್ಲಿ ಅನಾಚಾರಗಳು ಎಲ್ಲೆ ಮೀರುತ್ತಿವೆ. ಹಳ್ಳಿ, ಗಲ್ಲಿಯಿಂದ ಹಿಡಿದು ದಿಲ್ಲಿಯವರೆಗೂ ಜಾತಿ ರಾಜಕಾರಣವೇ ರಾರಾಜಿಸುತ್ತಿದೆ. ಶೋಷಣೆಗೊಳಗಾದ ಸಮುದಾಯ ಅಜ್ಞಾನ ಹೊದ್ದು ಮಲಗಿದೆ. ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಅಕ್ಷರಸ್ಥರಾಗಿದ್ದರೂ ವಿದ್ಯಾವಂತರಾಗದೆ ವ್ಯರ್ಥ ಬದುಕು ಸಾಗಿಸುತ್ತಿದ್ದಾರೆ. ಉನ್ನತ ಶಿಕ್ಷಣ ಮತ್ತು ಸ್ಥಾನ ಪಡೆದ ಅದೆಷ್ಟೋ ಜನ ನೆಲಮೂಲದ ಸಂಸ್ಕೃತಿ ಬಿಟ್ಟು, ಹೋಮ, ಹವನ, ಪೂಜೆ ತೀರ್ಥ ಪ್ರಸಾದಗಳಂತಹ ಆರ್ಯ ಸಂಸ್ಕೃತಿಗಳ ದಾಸರಾಗುತ್ತಿದ್ದಾರೆ. ಅಂತಹ ವ್ಯಕ್ತಿಗಳು ತನ್ನ ಸಮುದಾಯಕ್ಕೆ ಸಹಾಯ ಮಾಡದೇ, ನವ ಸಂಪ್ರದಾಯವಾದಿ ವರ್ಗಕ್ಕೆ ಸೇರಿ ಮಾನಸಿಕ ಗುಲಾಮರಾಗಿದ್ದಾರೆ.

ಇವರ ಅಜ್ಞಾನ, ವೈಯಕ್ತಿಕ, ಸ್ವಾರ್ಥದಿಂದಾಗಿಯೇ 21ನೇ ಶತಮಾನದ ಆಧುನಿಕ ಯುಗದಲ್ಲಿಯೂ ದೇಶದಾದ್ಯಂತ ದಲಿತರ ಮೇಲೆ ಘೋರ ಅತ್ಯಾಚಾರ ಕೊಲೆಗಳು ನಡೆಯುತ್ತಿವೆ. ಇತ್ತೀಚೆಗೆ ನಮ್ಮ ರಾಜ್ಯವೂ ಉತ್ತರದ ರಾಜ್ಯಗಳೊಂದಿಗೆ ಪೈಪೋಟಿಗೆ ಇಳಿದಂತೆ ಕ್ರೌರ್ಯ ಮೆರೆಯುತ್ತಿವೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಹುಳ್ಳೇರಹಳ್ಳಿಯಲ್ಲಿ 20ನೇ ಸೆಪ್ಟೆಂಬರ್ 2022 ರಂದು ಗ್ರಾಮ ದೇವತೆ ಮೆರವಣಿಗೆ ವೇಳೆ ಪಲ್ಲಕ್ಕಿಗೆ ಬೆಂಬಲಕ್ಕಾಗಿ ಬಳಸುವ ಗುಜ್ಜ ಕೋಲು ಕೆಳಗೆ ಬೀಳುತ್ತದೆ. ಅದನ್ನು ಮುಟ್ಟಿ ಎತ್ತಿ ಕೊಟ್ಟದ್ದಕ್ಕೆ ದಲಿತ ಯುವಕ ಚೇತನ್ ಕುಟುಂಬದವರನ್ನು ಅರುವತ್ತು ಸಾವಿರ ರೂ. ದಂಡ ವಿಧಿಸಿ ಆತನ ಕುಟುಂಬಕ್ಕೆ ಸವರ್ಣೀಯರು ಬಹಿಷ್ಕಾರ ಹಾಕಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹನುಮಸಾಗರ ಸಮೀಪದ ಮಿಯಾಪುರದಲ್ಲಿ 4ನೇ ಸೆಪ್ಟೆಂಬರ್ 2021 ಪರಿಶಿಷ್ಟ ಜಾತಿಗೆ ಸೇರಿದ ಎರಡು ವರ್ಷದ ಮಗು ಆಂಜನೇಯ ದೇವಾಲಯ ಪ್ರವೇಶಿಸಿದ್ದಕ್ಕೆ ಅಲ್ಲಿನ ಜಾತಿವಾದಿಗಳು 25 ಸಾವಿರ ರುಪಾಯಿ ದಂಡ ವಿಧಿಸುತ್ತಾರೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತಿಡಿಗೋಳ ಗ್ರಾಮದಲ್ಲಿ ರಥ ಮುಟ್ಟಿದಕ್ಕೆ ದಲಿತ ಯುವಕರ ಮೇಲೆ ಹಲ್ಲೆ ಮಾಡುತ್ತಾರೆ. ಹೀಗೆ ನಿತ್ಯ ನೂರಾರು ಪ್ರಕರಣಗಳು ನಡೆಯುತ್ತಲೇ ಇವೆ. ಜಾತ್ರೆಯಲ್ಲಿ ಪಾಲ್ಗೊಳ್ಳುವುದರಿಂದ, ದೇವಸ್ಥಾನಗಳಿಗೆ ಹೋಗುವುದರಿಂದ, ದೇವರ ಕಟ್ಟೆ, ಕೋಲು ಮುಟ್ಟಿದ ಕಾರಣಕ್ಕೆ ದಲಿತರ ಮೇಲಿನ ಹಲ್ಲೆ, ಕೊಲೆಗಳು, ಸಾಮಾಜಿಕ ಬಹಿಷ್ಕಾರ ಹಾಗೂ ದಂಡ ವಿಧಿಸುವ ಪ್ರಕರಣಗಳು ತುಂಬಾ ಹೆಚ್ಚಾಗಿವೆ. ಹಾಗಾಗಿ, ಕಲ್ಲು ಮಣ್ಣು ಕಟ್ಟಿಗೆ ಹಾಗೂ ಲೋಹಗಳಿಂದ ನಿರ್ಮಿತವಾದ ನಿರ್ಜೀವ ದೇವರುಗಳಿಗೆ ಜೀವವಿರುವ ಮನುಷ್ಯರನ್ನು ರಕ್ಷಿಸಲು ಸಾಧ್ಯವಿಲ್ಲ ಎನ್ನುವ ಸತ್ಯವನ್ನು ಶೋಷಿತ ಸಮುದಾಯಕ್ಕೆ ಮನವರಿಕೆ ಮಾಡಿಸಬೇಕು.

ದಮನಿತರ ಮೇಲೆ ದೌರ್ಜನ್ಯ ನಡೆದ ಸಂದರ್ಭಗಳಲ್ಲಿ ತಕ್ಷಣಕ್ಕೆ ಪ್ರತಿಭಟನೆ ಮಾಡುವುದು ಅತ್ಯಂತ ಅವಶ್ಯಕ. ಆದರೆ, ಪ್ರತಿಭಟನೆಯ ಜೊತೆಗೆ ಶೋಷಿತ ಸಮುದಾಯದ ಜನರಲ್ಲಿ ಅರಿವು ಮೂಡಿಸುವ ಕೆಲಸವೂ ನಡೆಯಬೇಕು. ಅವರ ಬೆಂಬಲಕ್ಕೆ ನಿಂತು ಮಾನಸಿಕ ಮತ್ತು ನೈತಿಕ ಬೆಂಬಲ ವ್ಯಕ್ತಪಡಿಸಬೇಕು. ಭಕ್ತರನ್ನು ರಕ್ಷಿಸದ ದೇವರು, ಸ್ವಾಭಿಮಾನಕ್ಕೆ ಧಕ್ಕೆ ತರುವ ಸಂಪ್ರದಾಯಗಳು ಮನುಷ್ಯರಿಗೆ ಮಾರಕ ಎನ್ನುವುದನ್ನು ಜನರಿಗೆ ಅರ್ಥಮಾಡಿಸಬೇಕು. ಸಾಂಕ್ರಾಮಿಕ ರೋಗವಾಗಿ ಕಾಡುತ್ತಿರುವ ಮೂಢನಂಬಿಕೆ ತೊಲಗಿಸುವ ನಿಟ್ಟಿನಲ್ಲಿ ವಿಜ್ಞಾನದ ಅರಿವು, ವೈಚಾರಿಕ ಉಪನ್ಯಾಸ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಪಾಠಗಳನ್ನು ಒಳಗೊಂಡ ಅಧ್ಯಯನ ಶಿಬಿರಗಳನ್ನು ನಡೆಸುವ ಮೂಲಕ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಸಾಮಾಜಿಕ ಕಾರ್ಯಕರ್ತರು ಮತ್ತು ಸಂಘಟನೆಗಳಿಂದ ನಡೆಯಬೇಕು. ಶೋಷಿತರು ದೇವಾಲಯಕ್ಕೆ ಹೋಗದಿದ್ದರೆ ಆ ದೇವರಿಗೆ ಬಡತನ ಬಂದು ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾಗುತ್ತದೆ. ಶೋಷಿತರು ದೇವಸ್ಥಾನ ಬಿಟ್ಟು ಶಾಲೆ ಅಥವಾ ಗ್ರಂಥಾಲಯಕ್ಕೆ ಹೋದರೆ ಆ ದೇವಾಲಯಗಳು ಹಾಳುಬಿದ್ದು, ದೇವರುಗಳು ಕಂಗಾಲಾಗಿ ದಲಿತ ಕೇರಿಗಳಿಗೆ ದಲಿತರ ದರ್ಶನಕ್ಕೆ ಬರಬೇಕಾಗುತ್ತದೆ. ಈ ಸತ್ಯವನ್ನು ದಲಿತರಿಗೆ ಅರ್ಥಮಾಡಿಸಬೇಕಿದೆ.

ಅಂದು ಆರ್ಯರು ತಮ್ಮ ಕುತ್ಸಿತ ಬುದ್ಧಿ ಉಪಯೋಗಿಸಿ ದೇವರು, ಧರ್ಮ, ಸಂಪ್ರದಾಯ ಹೇರುವ ಮೂಲಕ ಶೋಷಿತರನ್ನು ಸಮುದಾಯವನ್ನು ಎಲ್ಲದರಿಂದಲೂ ವಂಚಿತರನ್ನಾಗಿ ಮಾಡಿದ್ದಾರೆ. ಈ ಬಗ್ಗೆ ದಲಿತರು ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಬಂದಿದೆ. ಎಲ್ಲಾ ತಪ್ಪು ಅವರದೇ ಎನ್ನುವ ಬದಲು ಮೊದಲು ನಮ್ಮ ತಪ್ಪುಗಳನ್ನು ನಾವು ತಿದ್ದಿಕೊಳ್ಳಬೇಕಿದೆ. ಗೌರವ ಸಿಗದ ಮಠ ಮಂದಿರಗಳ ಕಡೆಗೆ ನಮ್ಮ ಯಕ್ಕಡವೂ ಬಿಡಕೂಡದು. ಇದನ್ನು ನಾವು ರೂಢಿಸಿ ಕೊಳ್ಳುವುದರ ಜೊತೆಗೆ ನಮ್ಮ ನಮ್ಮ ಸಮುದಾಯದಲ್ಲಿಯೂ ಅರಿವು ಮೂಡಿಸಬೇಕು. ಬಾಬಾಸಾಹೇಬರು ಸಂವಿಧಾನ ಬದ್ಧವಾಗಿ ನೀಡಿದ ಅವಕಾಶಗಳನ್ನು ನೀಡಿದರೂ ನಾವು ಆ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದು ಆಗಬೇಕು. ಓದುವ ಹಕ್ಕಿದೆ, ಓದಲಾಗುತ್ತಿಲ್ಲ ಹಾಗಾಗಿ ಶಾಲೆಯತ್ತ ಸಮುದಾಯ ಮುಖ ಮಾಡಬೇಕು. ಓದಿದವರು ಬೇಜವಾಬ್ದಾರಿಗಳಾಗಿ ಸಮುದಾಯದತ್ತ ತಿರುಗಿಯೂ ನೋಡುತ್ತಿಲ್ಲ. ಅವರನ್ನು ಜವಾಬ್ದಾರರನ್ನಾಗಿಸಬೇಕು. ಗೊಡ್ಡು ಸಂಪ್ರದಾಯವನ್ನು ಸೋಲಿಸಲು ಸಂವಿಧಾನ ಓದಬೇಕು. ಬುದ್ಧ, ಬಸವಣ್ಣ, ಅಂಬೇಡ್ಕರ್, ಕನಕ, ಕಬೀರ, ನಾನಕರ ಜೀವನ ಸಂದೇಶ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು. ಹೀಗೆ ಮಾಡಿದರೆ ಮಾತ್ರ ಮನುಷ್ಯ ವಿರೋಧಿ ಸಂಪ್ರದಾಯವಾದಿಗಳ ಕುತಂತ್ರದಿಂದ ಶೋಷಿತ ಸಮುದಾಯವನ್ನು ರಕ್ಷಿಸಬಹುದು. 

ವಿಕ್ರಂ ತೇಜಸ್

ಕಲಬುರಗಿಯಲ್ಲಿ ಪತ್ರಕರ್ತರು

Related Articles

ಇತ್ತೀಚಿನ ಸುದ್ದಿಗಳು