ಬೆಂಗಳೂರು: ಬಯಕೆಯಾದಾಗಲೆಲ್ಲ ಪಾನಿಪುರಿ ತಿನ್ನುತ್ತಿದ್ದೀರಾ? ಹಾಗಿದ್ದರೆ ಮತ್ತೊಮ್ಮೆ ಯೋಚಿಸಿ. ಪಾನಿಪುರಿ ತಯಾರಿಕೆಯಲ್ಲಿ ಬಳಸುವ ಕೃತಕ ಬಣ್ಣಗಳಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕಗಳು ಇರುವುದು ಪತ್ತೆಯಾಗಿದೆ.
ವಿವಿಧ ರೀತಿಯ ಆಹಾರ ಪದಾರ್ಥಗಳಿಗೆ ಕೃತಕ ಬಣ್ಣಗಳನ್ನು ಸೇರಿಸುವ ಆತಂಕದ ಹಿನ್ನೆಲೆಯಲ್ಲಿ ಕರ್ನಾಟಕದ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ರಾಜಧಾನಿ ಬೆಂಗಳೂರು ಸೇರಿದಂತೆ 79 ಸ್ಥಳಗಳಲ್ಲಿ ತಪಾಸಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆತಂಕಕಾರಿ ಸಂಗತಿಗಳು ಹೊರಬಿದ್ದಿವೆ.
ಅನೇಕ ಪಾನಿಪುರಿ ಮಾದರಿಗಳು ಅವುಗಳ ಸಾಸ್ ಮತ್ತು ಸಿಹಿ ಮೆಣಸಿನ ಪುಡಿಯಲ್ಲಿ ಕಾರ್ಸಿನೋಜೆನಿಕ್ ರಾಸಾಯನಿಕಗಳನ್ನು ಒಳಗೊಂಡಿರುವುದು ಕಂಡುಬಂದಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಹೆಚ್ಚಿನ ಮಾದರಿಗಳಲ್ಲಿ ಸನ್ ಸೆಟ್ ಯೆಲ್ಲೋ, ಬ್ರಿಲಿಯಂಟ್ ಬ್ಲ್ಯೂ ಮತ್ತು ಕಾರ್ಮೊಸಿಸ್ ಬಣ್ಣಗಳು ಕಂಡುಬಂದಿವೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸಂಗ್ರಹಿಸಲಾದ 49 ಮಾದರಿಗಳ ಪೈಕಿ 19 ಮಾದರಿಗಳಲ್ಲಿ ಸಂಶ್ಲೇಷಿತ ಬಣ್ಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪಾನಿಪುರಿಯಲ್ಲಿ ಕೃತಕ ಬಣ್ಣಗಳು ಮತ್ತು ಸ್ವೀಟ್ ಚಿಲ್ಲಿ ಪುಡಿಯ ಸಾಸ್ ಬಳಕೆಯನ್ನು ನಿಷೇಧಿಸಲು ಅಧಿಕಾರಿಗಳು ಯೋಜಿಸುತ್ತಿದ್ದಾರೆ ಎಂದು ಸಂಬಂಧಿತ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಆರೋಗ್ಯ ಇಲಾಖೆಯು ಗೋಬಿ ಮಂಚೂರಿ ಮತ್ತು ಕಬಾಬ್ ರೀತಿಯ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬಳಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿರುವುದು ಗೊತ್ತೇ ಇದೆ. ಕೃತಕ ಬಣ್ಣಗಳಿಂದ ಮಕ್ಕಳಲ್ಲಿ ಅಲರ್ಜಿ, ಹೈಪರ್ ಆ್ಯಕ್ಟಿವಿಟಿ, ವಯೋಸಹಜ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಅಲ್ಲದೆ ಈ ಸಿಂಥೆಟಿಕ್ ಬಣ್ಣಗಳನ್ನು ದೀರ್ಘಕಾಲ ಸೇವಿಸುವುದರಿಂದ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.