ಕೇಂದ್ರ ತನಿಖಾ ಸಂಸ್ಥೆಗಳು ಸುಪ್ರೀಂ ಕೋರ್ಟ್‌ಗೆ ದಾರಿ ತಪ್ಪಿಸುತ್ತಿವೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದ್ದು, ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ ಇಂದು ಸಂಸತ್ತಿನ ಸಂಕೀರ್ಣದಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದೆ.
ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ವಿಚಾರಣಾ ನ್ಯಾಯಾಲಯ ಜಾಮೀನು ನೀಡಿದ್ದರೂ, ಜಾರಿ ನಿರ್ದೇಶನಾಲಯ (ಇಡಿ) ಹೈಕೋರ್ಟ್‌ನ ಮಧ್ಯಸ್ಥಿಕೆಯನ್ನು ಕೋರಿ ಜಾಮೀನು ತಡೆಹಿಡಿದಿದೆ ಎಂದರು.
ಮುಖ್ಯಮಂತ್ರಿ ಕೇಜ್ರಿವಾಲ್ ನಂತರ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆಯಲು ಮುಂದಾದಾಗ, ಕೇಂದ್ರ ಸರ್ಕಾರ ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿತು ಎಂದು ಅವರು ಹೇಳಿದ್ದಾರೆ.
ಇದು ತನಿಖಾ ಸಂಸ್ಥೆಗಳ ದುರ್ಬಳಕೆಯಾಗಿದೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ. ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಇಡಿ ಮತ್ತು ಸಿಬಿಐ ಎರಡರಲ್ಲೂ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಅವರು ಹೇಳಿದರು. ಸಂಜಯ್ ಸಿಂಗ್ ಅವರ ಈ ಹೇಳಿಕೆಗೆ ಯಾವುದೇ ತನಿಖಾ ಸಂಸ್ಥೆ ತಕ್ಷಣ ಪ್ರತಿಕ್ರಿಯಿಸಿಲ್ಲ.
ಸೋಮವಾರ ಸಂಸತ್ತಿನಲ್ಲಿ ಈ ಇಲಾಖೆಗಳ ವಿರುದ್ಧ ಪ್ರತಿಪಕ್ಷಗಳ ಒಕ್ಕೂಟ ‘ಇಂಡಿಯಾ’ ಪ್ರತಿಭಟಿಸಲಿದೆ ಎಂದು ಸಿಂಗ್ ಹೇಳಿದರು. ಶನಿವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ‘ತನಿಖಾ ಸಂಸ್ಥೆಗಳ ದುರ್ಬಳಕೆ’ ಕುರಿತು ‘ಇಂಡಿಯಾ’ ನಾಯಕರು ಸಭೆ ನಡೆಸಿದರು.