ಹೊಸ ದೆಹಲಿ: ಕರ್ನಾಟಕ, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚು ವರದಿಯಾಗುತ್ತಿವೆ.
ಈ ಕುರಿತು ವೈದ್ಯರು ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ. ಡೆಂಗ್ಯೂ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತಲೂ ಅದರ ತಡೆಗಟ್ಟುವಿಕೆ ಸುಲಭ ಮತ್ತು ಅದರ ಕಡೆಗೆ ಜನರು ಗಮನ ಕೊಡಬೇಕು ಎಂದು ಅವರು ಹೇಳಿದ್ದಾರೆ.
ಡೆಂಗ್ಯೂ ಜ್ವರವು ಸೋಂಕಿತ ಸೊಳ್ಳೆ ಕಡಿತದಿಂದ ಹಬ್ಬುವ ರೋಗವಾಗಿದ್ದು. ಈ ರೀತಿಯ ಸೊಳ್ಳೆಗಳು ಬೆಚ್ಚಗಿನ ಮತ್ತು ಆರ್ದ್ರ ವಾತಾವರಣದಲ್ಲಿ ಬೆಳೆಯುತ್ತವೆ. ಈ ಜ್ವರವು 100ಕ್ಕೂ ಹೆಚ್ಚು ದೇಶಗಳಲ್ಲಿ ಸ್ಥಳೀಯವಾಗಿ ಕಾಣಿಸಿಕೊಳ್ಳುತ್ತದೆ.
“ಹಿಂದಿನಂತೆ ಈ ಜ್ವರವು ಕೇವಲ ದೊಡ್ಡವರಿಗಷ್ಟೇ ಬಾರದೆ ಮಕ್ಕಳಲ್ಲೂ ಕಾಣಿಸಿಕೊಳ್ಳುವ ಅಪಾಯವಿದೆ. ಹೊಟ್ಟೆಯಲ್ಲಿ ವಾಂತಿ ಮತ್ತು ನೋವು, ಹಸಿವು ಕಡಿಮೆಯಾಗುವುದು ಈ ಜ್ವರದ ಮುಖ್ಯ ಲಕ್ಷಣಗಳಾಗಿವೆ. ಆದರೆ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಮೇಲ್ಭಾಗದ ಉಸಿರಾಟದ ಸೋಂಕುಗಳು ಮತ್ತು ಗ್ಯಾಸ್ಟ್ರೋಎಂಟರೈಟಿಸ್ ಹೊಂದಿರುವ ಮಕ್ಕಳು ಸಹ ಡೆಂಗ್ಯೂ ಜ್ವರಕ್ಕೆ ಗುರಿಯಾಗುವ ಸಾಧ್ಯತೆಗಳಿರುತ್ತವೆ” ಎಂದು ವೈದ್ಯರು ಹೇಳುತ್ತಾರೆ.
ಈ ಬಾರಿ ಕರ್ನಾಟಕದಲ್ಲಿ 5,374 ಡೆಂಗ್ಯೂ ಪ್ರಕರಣಗಳು ಮತ್ತು ಐದು ಸಾವುಗಳು ವರದಿಯಾಗಿವೆ. ತೆಲಂಗಾಣದಲ್ಲಿ 882, ಆಂಧ್ರಪ್ರದೇಶದಲ್ಲಿ ಡೆಂಗ್ಯೂ ಮತ್ತು ಮಲೇರಿಯಾ ಪ್ರಕರಣಗಳು ವರದಿಯಾಗಿದ್ದರೆ, ಒಡಿಶಾದಲ್ಲಿ 288, ಕೇರಳದ ಎರ್ನಾಕುಲಂನಲ್ಲಿ 4 ಪ್ರಕರಣಗಳು ವರದಿಯಾಗಿವೆ.