ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭಾರತ ವಿರೋಧಿ ಶಕ್ತಿಗಳೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಅವರು ದೇಶದ ಭದ್ರತೆಗೆ ಅಪಾಯಕಾರಿಯಾಗಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಬುಧವಾರ ಗಂಭೀರವಾಗಿ ಆರೋಪಿಸಿದ್ದಾರೆ.
ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಿಜಿಜು, ರಾಹುಲ್ ಗಾಂಧಿ ಅವರು ದೇಶದ ಭದ್ರತೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ವ್ಯಕ್ತಿಯಾಗಿ ಬದಲಾಗಿದ್ದಾರೆ ಎಂದು ಟೀಕಿಸಿದ್ದಾರೆ. ಅವರು ದೇಶದ ಒಳಗಿರುವ ನಕ್ಸಲೈಟ್ ಮತ್ತು ಉಗ್ರಗಾಮಿ ಸಿದ್ಧಾಂತ ಪ್ರತಿಪಾದಿಸುವವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂದು ಅವರು ದೂರಿದ್ದಾರೆ. ಅಲ್ಲದೆ, ತಮ್ಮ ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ ರಾಹುಲ್ ಅವರು ವಿವಾದಿತ ವ್ಯಕ್ತಿ ಜಾರ್ಜ್ ಸೊರೊಸ್ ಅವರನ್ನೂ ಭೇಟಿಯಾಗುತ್ತಾರೆ ಎಂದು ರಿಜಿಜು ವಾಗ್ದಾಳಿ ನಡೆಸಿದ್ದಾರೆ.
