Home ಬೆಂಗಳೂರು ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್, ಪವಿತ್ರಾ ಸೇರಿ ಇತರ ಆರೋಪಿಗಳಿಗೆ ಮನೆ ಊಟ ಇಲ್ಲ

ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್, ಪವಿತ್ರಾ ಸೇರಿ ಇತರ ಆರೋಪಿಗಳಿಗೆ ಮನೆ ಊಟ ಇಲ್ಲ

0

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಕನ್ನಡ ಚಿತ್ರನಟ ದರ್ಶನ್ ತೂಗುದೀಪ, ಅವರ ಸ್ನೇಹಿತೆ ಪವಿತ್ರಾ ಗೌಡ ಮತ್ತು ಇತರರಿಗೆ ಮನೆಯಿಂದ ಊಟ ಒದಗಿಸುವಂತೆ ಬೆಂಗಳೂರು ಜೈಲು ಅಧೀಕ್ಷಕರಿಗೆ ವಿಚಾರಣಾ ನ್ಯಾಯಾಲಯ (ಟ್ರಯಲ್ ಕೋರ್ಟ್) ನೀಡಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ.

ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಈ ಆದೇಶ ಹೊರಡಿಸಿದ್ದಾರೆ.

“ಮುಂದಿನ ವಿಚಾರಣೆಯ ದಿನಾಂಕದವರೆಗೆ ಡಿಸೆಂಬರ್ 29, 2025 ಮತ್ತು ಜನವರಿ 12, 2026ರ ಆದೇಶಗಳಿಗೆ ತಡೆ ನೀಡುವುದು ಸೂಕ್ತ ಎಂದು ನಾನು ಭಾವಿಸುತ್ತೇನೆ. ಪ್ರತಿವಾದಿಗಳಿಗೆ (ಪವಿತ್ರಾ ಗೌಡ ಮತ್ತು ಇತರ ಇಬ್ಬರು) ಜೈಲು ಅಧೀಕ್ಷಕರ ಮೂಲಕ ತುರ್ತು ನೋಟಿಸ್ ಜಾರಿ ಮಾಡಬೇಕು,” ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಹೇಳಿದರು. ವಿಚಾರಣಾ ನ್ಯಾಯಾಲಯವು ಜೈಲು ನಿಯಮಾವಳಿಗಳಲ್ಲಿ ನಿಗದಿಪಡಿಸಿದ ಪ್ರಕ್ರಿಯೆಯನ್ನು ಅನುಸರಿಸಿಲ್ಲ ಮತ್ತು ಆರೋಪಿಗಳ ಜಾಮೀನು ರದ್ದುಗೊಳಿಸುವಾಗ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶಕ್ಕೆ ಇದು ವಿರುದ್ಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ವಿಚಾರಣೆಯ ಸಂದರ್ಭದಲ್ಲಿ, ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು ವಾದ ಮಂಡಿಸಿ, ಡಿಸೆಂಬರ್ 29, 2025 ರಂದು ಕೊಲೆ ಪ್ರಕರಣದ ವಿಚಾರಣೆಯ ವೇಳೆ ಮೂವರು ಆರೋಪಿಗಳಾದ ಪವಿತ್ರಾ ಗೌಡ (ಆರೋಪಿ-1), ಆರ್. ನಾಗರಾಜ (ಆರೋಪಿ-11) ಮತ್ತು ಎಂ. ಲಕ್ಷ್ಮಣ್ (ಆರೋಪಿ-12) ಮೌಖಿಕ ಮನವಿ ಮಾಡಿದ್ದರು ಎಂದು ತಿಳಿಸಿದರು. ಅವರು ತಮ್ಮ ಮನೆಗಳಿಂದ ಊಟ ತರಿಸಿಕೊಳ್ಳಲು ಅನುಮತಿ ಕೋರಿದ್ದರು. ಈ ಮೌಖಿಕ ಮನವಿಯನ್ನು ಪರಿಗಣಿಸಿದ ವಿಚಾರಣಾ ನ್ಯಾಯಾಲಯವು ಮನೆ ಊಟ ಒದಗಿಸಲು ಜೈಲು ಅಧಿಕಾರಿಗಳಿಗೆ ಸೂಚಿಸಿತ್ತು.

ಆರೋಪಿಗಳಿಗೆ, ವಿಶೇಷವಾಗಿ ಈ ಪ್ರಕರಣದಲ್ಲಿ ಯಾವುದೇ ವಿಶೇಷ ಸತ್ಕಾರ ನೀಡುವುದನ್ನು ಸುಪ್ರೀಂ ಕೋರ್ಟ್ ಖಂಡಿಸಿದೆ ಎಂದು ಜಗದೀಶ್ ಬೆಟ್ಟು ಮಾಡಿದರು.

ಜನವರಿ 5, 2026 ರಂದು ಬೆಂಗಳೂರು ಕೇಂದ್ರ ಕಾರಾಗೃಹದ ಅಧಿಕಾರಿಗಳು ಆದೇಶದ ಸ್ಪಷ್ಟೀಕರಣ ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು ಎಂದು ರಾಜ್ಯ ಸರ್ಕಾರದ ಅರ್ಜಿಯಲ್ಲಿ ತಿಳಿಸಲಾಗಿದೆ.

ಜನವರಿ 12, 2026 ರಂದು ವಿಚಾರಣಾ ನ್ಯಾಯಾಲಯವು ವಿವರವಾದ ಆದೇಶವನ್ನು ಹೊರಡಿಸಿ, ಮೂವರು ಆರೋಪಿಗಳಿಗೆ (ಆರೋಪಿ 1, 11 ಮತ್ತು 12) ವಾರಕ್ಕೊಮ್ಮೆ ಮನೆಯ ಊಟ ಪಡೆಯಲು ಅನುಮತಿಸುವಂತೆ ಮತ್ತು ಇತರ ಸಂದರ್ಭಗಳಲ್ಲಿ, ವೈದ್ಯರು ಸಲಹೆ ನೀಡಿದಾಗ ಇತರ ಆರೋಪಿಗಳಿಗೂ ಅದನ್ನು ಒದಗಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ವೈದ್ಯಾಧಿಕಾರಿಗಳು ಶಿಫಾರಸು ಮಾಡದ ಹೊರತು ರಾಜ್ಯದ ಯಾವುದೇ ಕೈದಿಗೆ ಮನೆಯ ಊಟ ಪಡೆಯಲು ವಿನಾಯಿತಿ ನೀಡಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಅಲ್ಲದೆ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ಜೈಲು ಊಟಕ್ಕೆ 4-ಸ್ಟಾರ್ ರೇಟಿಂಗ್ ಪ್ರಮಾಣಪತ್ರವನ್ನು ನೀಡಿದೆ ಎಂದು ಉಲ್ಲೇಖಿಸಲಾಗಿದೆ.

ವಿಚಾರಣಾ ನ್ಯಾಯಾಲಯವು ಸುಪ್ರೀಂ ಕೋರ್ಟ್ ಆದೇಶವನ್ನು ಸಂಪೂರ್ಣವಾಗಿ ಕಡೆಗಣಿಸಿ ಈ ಆದೇಶ ಹೊರಡಿಸಿದೆ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಗಮನಿಸಿದರು. ಅಲ್ಲದೆ, ನ್ಯಾಯಾಲಯದ ನಿರ್ದೇಶನದಂತೆ ಊಟವನ್ನೇಕೆ ಒದಗಿಸಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿರುವುದನ್ನೂ ಅವರು ಪ್ರಸ್ತಾಪಿಸಿದರು.

“ಜೈಲಿನಲ್ಲಿ ಆರೋಪಿಗಳಿಗೆ ಯಾವುದಾದರೂ ವಿಶೇಷ ಅಥವಾ 5-ಸ್ಟಾರ್ ಸತ್ಕಾರ ನೀಡಲಾಗುತ್ತಿದೆ ಎಂಬುದು ತಿಳಿದುಬಂದ ದಿನವೇ, ಮೊದಲ ಹಂತವಾಗಿ ಜೈಲು ಅಧೀಕ್ಷಕರು ಮತ್ತು ಈ ದುರ್ವರ್ತನೆಯಲ್ಲಿ ಭಾಗಿಯಾದ ಇತರ ಎಲ್ಲ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವಿಚಾರಣಾಧೀನ ಕೈದಿಗಳಾಗಿದ್ದರೂ, ಕೆಲವರಿಗೆ ವಿಶೇಷ ಆಹಾರ ಒದಗಿಸುವುದು ದುರ್ವರ್ತನೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ,” ಎಂದು ನ್ಯಾಯಮೂರ್ತಿ ನಾಗಪ್ರಸನ್ನ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ವಿಶೇಷ ಸಂದರ್ಭಗಳಲ್ಲಿ ಮನೆಯಿಂದ ಊಟ ಒದಗಿಸಬಹುದಾಗಿದ್ದು, ಇದಕ್ಕಾಗಿ ಜೈಲು ನಿಯಮಾವಳಿಗಳಲ್ಲಿ ವಿಸ್ತೃತ ಪ್ರಕ್ರಿಯೆಯನ್ನು ನಿಗದಿಪಡಿಸಲಾಗಿದೆ ಎಂದು ನ್ಯಾಯಾಲಯವು ಇದೇ ವೇಳೆ ಸ್ಪಷ್ಟಪಡಿಸಿದೆ.

“ಕೈದಿ ಎಂದರೆ ಕೈದಿಯೇ, ಅವರು ವಿಚಾರಣಾಧೀನ ಕೈದಿಯಾಗಿರಲಿ ಅಥವಾ ಇತರರೇ ಆಗಿರಲಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೆಲವರಿಗೆ ವಿಶೇಷ ಉಪಚಾರ ಮತ್ತು ಕೆಲವರಿಗೆ ಸಾಮಾನ್ಯ ಉಪಚಾರ ನೀಡುವುದು ಕಾನೂನಿನ ಉಲ್ಲಂಘನೆಯಾಗುತ್ತದೆ. ಆದರೆ ಸಂಬಂಧಪಟ್ಟ ನ್ಯಾಯಾಲಯ ಈಗ ಅದನ್ನೇ ನಿರ್ದೇಶಿಸಿದೆ,” ಎಂದು ಹೈಕೋರ್ಟ್ ಹೇಳಿದೆ. ಅಲ್ಲದೆ, ಪವಿತ್ರಾ ಗೌಡ ಮತ್ತು ಇತರ ಇಬ್ಬರಿಗೆ ಜೈಲು ಅಧೀಕ್ಷಕರ ಮೂಲಕ ತುರ್ತು ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದೆ.

You cannot copy content of this page

Exit mobile version