Home ದೆಹಲಿ 2024-25ರಲ್ಲಿ ಬಿಜೆಪಿ ಚುನಾವಣೆಗಾಗಿ ವ್ಯಯಿಸಿದ ಮೊತ್ತ 3,335 ಕೋಟಿ ರೂ.!: ಪಕ್ಷದ ವಾರ್ಷಿಕ ಆಡಿಟ್ ವರದಿಯಲ್ಲಿ...

2024-25ರಲ್ಲಿ ಬಿಜೆಪಿ ಚುನಾವಣೆಗಾಗಿ ವ್ಯಯಿಸಿದ ಮೊತ್ತ 3,335 ಕೋಟಿ ರೂ.!: ಪಕ್ಷದ ವಾರ್ಷಿಕ ಆಡಿಟ್ ವರದಿಯಲ್ಲಿ ಬಹಿರಂಗ

0

ದೆಹಲಿ, ಜನವರಿ 20: ಲೋಕಸಭೆ ಹಾಗೂ ಇತರೆ ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆದ 2024-25ರ ಸಾಲಿನಲ್ಲಿ, ಬಿಜೆಪಿ ಚುನಾವಣಾ ಪ್ರಚಾರಕ್ಕಾಗಿ ಬರೋಬ್ಬರಿ 3,335.36 ಕೋಟಿ ರೂ. ಖರ್ಚು ಮಾಡಿದೆ ಎಂದು ಪಕ್ಷದ ವಾರ್ಷಿಕ ಲೆಕ್ಕಪರಿಶೋಧನಾ ವರದಿ ಬಹಿರಂಗಪಡಿಸಿದೆ.

ಬಿಜೆಪಿ ಈ ವರದಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. 2019-20ರಲ್ಲಿ ನಡೆದ 17ನೇ ಲೋಕಸಭೆ ಮತ್ತು ಏಳು ವಿಧಾನಸಭಾ ಚುನಾವಣೆಗಳಿಗಾಗಿ 1,352.92 ಕೋಟಿ ರೂ. ಖರ್ಚು ಮಾಡಿದ್ದ ಬಿಜೆಪಿ, ಅದಕ್ಕಿಂತ ಎರಡೂವರೆ ಪಟ್ಟು ಹೆಚ್ಚು ಹಣವನ್ನು 2024-25ರ (18ನೇ ಲೋಕಸಭೆ) ಚುನಾವಣೆಗಾಗಿ ಖರ್ಚು ಮಾಡಿದೆ.

ಚುನಾವಣಾ ಆಯೋಗವು 2024ರ ಲೋಕಸಭೆ ಚುನಾವಣೆಯನ್ನು ಆ ವರ್ಷದ ಮಾರ್ಚ್ 16ರಂದು ಘೋಷಿಸಿತ್ತು, ಆದರೆ ಪ್ರಚಾರ ಕಾರ್ಯಗಳು ಹಿಂದಿನ ಆರ್ಥಿಕ ವರ್ಷದಿಂದಲೇ ಆರಂಭವಾಗಿದ್ದವು. 2024ರ ಏಪ್ರಿಲ್ 19ರಿಂದ ಜೂನ್ 1ರವರೆಗೆ 44 ದಿನಗಳ ಕಾಲ ಮತದಾನ ಪ್ರಕ್ರಿಯೆ ನಡೆದಿತ್ತು. ಚುನಾವಣೆಗೂ ಮುನ್ನ, 2023-24ರ ಆರ್ಥಿಕ ವರ್ಷದಲ್ಲಿ ಚುನಾವಣೆ ಮತ್ತು ಸ್ವಂತ ಪ್ರಚಾರಕ್ಕಾಗಿ ಬಿಜೆಪಿ 1,754.06 ಕೋಟಿ ರೂ. ವ್ಯಯಿಸಿತ್ತು.

ಕಳೆದ ಚುನಾವಣೆಗಿಂತ ದುಪ್ಪಟ್ಟು ವೆಚ್ಚ

18ನೇ ಲೋಕಸಭೆ ಚುನಾವಣೆ ಮತ್ತು 8 ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯುವ ಮುನ್ನಿನ ವರ್ಷ ಹಾಗೂ ಚುನಾವಣೆ ನಡೆದ ವರ್ಷದಲ್ಲಿ – ಚುನಾವಣೆ ಮತ್ತು ಸಾಮಾನ್ಯ ಪ್ರಚಾರಕ್ಕಾಗಿ ಬಿಜೆಪಿ ಮಾಡಿದ ಒಟ್ಟು ವೆಚ್ಚ 5,089.42 ಕೋಟಿ ರೂ.

17ನೇ ಲೋಕಸಭೆ ಚುನಾವಣೆ ಮತ್ತು 7 ವಿಧಾನಸಭಾ ಚುನಾವಣೆಗಳು ನಡೆಯುವ ಹಿಂದಿನ ಎರಡು ವರ್ಷಗಳಲ್ಲಿ ಖರ್ಚು ಮಾಡಲಾದ 2,145.31 ಕೋಟಿ ರೂ.ಗೆ ಹೋಲಿಸಿದರೆ ಇದು ಎರಡರಷ್ಟಕ್ಕಿಂತ ಹೆಚ್ಚಾಗಿದೆ. ಬಿಜೆಪಿ 2025ರ ಡಿಸೆಂಬರ್ 27ರಂದು ಚುನಾವಣಾ ಆಯೋಗಕ್ಕೆ ತನ್ನ ವಾರ್ಷಿಕ ಲೆಕ್ಕಪರಿಶೋಧನಾ ವರದಿಯನ್ನು ಸಲ್ಲಿಸಿದ್ದು, ಆಯೋಗವು ಈ ವಾರ ಅದನ್ನು ಪ್ರಕಟಿಸಿದೆ. 2024-25ರಲ್ಲಿ ಬಿಜೆಪಿ ಮಾಡಿದ ಒಟ್ಟು 3,774.58 ಕೋಟಿ ರೂ. ವೆಚ್ಚದಲ್ಲಿ ಶೇ. 88ರಷ್ಟು ಹಣವನ್ನು ಚುನಾವಣೆಗಾಗಿಯೇ ಖರ್ಚು ಮಾಡಲಾಗಿದೆ ಎಂಬುದು ತಿಳಿದುಬಂದಿದೆ. ಚುನಾವಣೆ ಮತ್ತು ಸಾಮಾನ್ಯ ಪ್ರಚಾರಕ್ಕಾಗಿ ಆದ ಒಟ್ಟು ವೆಚ್ಚದಲ್ಲಿ ಶೇ. 68ರಷ್ಟು, ಅಂದರೆ 2,257.05 ಕೋಟಿ ರೂ.ಗಳನ್ನು ಜಾಹೀರಾತು ಮತ್ತು ಪ್ರಚಾರಕ್ಕಾಗಿ ಬಿಜೆಪಿ ಬಳಸಿದೆ.

ಎಲೆಕ್ಟ್ರಾನಿಕ್ ಮಾಧ್ಯಮಗಳಿಗಾಗಿ ಅತಿ ಹೆಚ್ಚು 1,124.96 ಕೋಟಿ ರೂ. ಖರ್ಚು ಮಾಡಲಾಗಿದ್ದು, ನಂತರದ ಸ್ಥಾನದಲ್ಲಿ ಜಾಹೀರಾತುಗಳಿಗಾಗಿ 897.42 ಕೋಟಿ ರೂ. ವ್ಯಯಿಸಲಾಗಿದೆ. ಇದಲ್ಲದೆ, ಚುನಾವಣಾ ಪ್ರಚಾರಕ್ಕಾಗಿ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಬಳಕೆಗೆ 583.08 ಕೋಟಿ ರೂ. ಖರ್ಚಾಗಿದೆ ಎಂದು ಬಿಜೆಪಿ ತನ್ನ ವರದಿಯಲ್ಲಿ ತಿಳಿಸಿದೆ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ 312.90 ಕೋಟಿ ರೂ. ಆರ್ಥಿಕ ನೆರವು ನೀಡಿರುವುದಾಗಿಯೂ ಬಿಜೆಪಿ ವರದಿಯಲ್ಲಿ ಬಹಿರಂಗಪಡಿಸಿದೆ. ಇತರೆ ಪಕ್ಷಗಳ ವಿಷಯಕ್ಕೆ ಬರುವುದಾದರೆ, 2024-25ರ ಸಾಲಿನಲ್ಲಿ ಕಾಂಗ್ರೆಸ್ ಪಕ್ಷವು ಚುನಾವಣೆಗಾಗಿ 896.22 ಕೋಟಿ ರೂ. ಖರ್ಚು ಮಾಡಿದೆ. 2023-24ರಲ್ಲಿ 619.67 ಕೋಟಿ ರೂ. ಖರ್ಚು ಮಾಡಿರುವುದಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಕಾಂಗ್ರೆಸ್‌ನ ಲೆಕ್ಕಪರಿಶೋಧನಾ ವರದಿ ತಿಳಿಸಿದೆ.

ಪಕ್ಷದ ಆದಾಯದಲ್ಲಿ ಏರಿಕೆ

ಕಳೆದ ಎರಡು ವರ್ಷಗಳಲ್ಲಿ ಬಿಜೆಪಿಯ ವಾರ್ಷಿಕ ಆದಾಯ ಬಹಳ ವೇಗವಾಗಿ ಬೆಳೆದಿದೆ. 2023-24ರಲ್ಲಿ 4,340.47 ಕೋಟಿ ರೂ. ಇದ್ದ ಬಿಜೆಪಿಯ ಒಟ್ಟು ಆದಾಯ, 2024-25ರಲ್ಲಿ 6,769.17 ಕೋಟಿ ರೂ.ಗೆ ಏರಿಕೆಯಾಗಿದೆ. ಸ್ವಯಂಪ್ರೇರಿತ ದೇಣಿಗೆಗಳ ಮೂಲಕ 6,124.85 ಕೋಟಿ ರೂ. ಲಭ್ಯವಾಗಿದ್ದು, ಉಳಿದ ಆದಾಯವು ಸದಸ್ಯತ್ವ ಶುಲ್ಕ, ಬ್ಯಾಂಕ್ ಬಡ್ಡಿ ಮತ್ತು ಇತರ ಮೂಲಗಳಿಂದ ಬಂದಿದೆ ಎಂದು ತಿಳಿಸಲಾಗಿದೆ. ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದ ನಂತರ ಬಂದ ಮೊದಲ ಆರ್ಥಿಕ ವರ್ಷ 2024-25 ಆಗಿರುವುದು ಗಮನಾರ್ಹ. ಸುಪ್ರೀಂ ಕೋರ್ಟ್ ತೀರ್ಪು ಜಾರಿಗೆ ಬಂದ ನಂತರವೂ, ಬಿಜೆಪಿಯ ವಾರ್ಷಿಕ ಆದಾಯವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 54ರಷ್ಟು ಹೆಚ್ಚಾಗಿರುವುದು ವಿಶೇಷವಾಗಿದೆ.

You cannot copy content of this page

Exit mobile version