ಹಾಸನ: ಮಗಳ ಪ್ರೀತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದ ತಂದೆಯೇ ದಾರುಣವಾಗಿ ಕೊಲೆಯಾದ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಹೊಸಳ್ಳಿಯಲ್ಲಿ (ಬೆಳ್ಳಾವರ) ನಡೆದಿದೆ.
ಅನಿಲ್(45) ಕೊಲೆಯಾದ ದುರ್ದೈವಿ.
ಘಟನೆ ವಿವರ
ಬಿಕ್ಕೋಡಿನ ಅನಿಲ್ ಎಂಬಾತನ ಮಗಳು ಕಳೆದ ಆರೇಳು ತಿಂಗಳ ಹಿಂದೆ ಅರೇಹಳ್ಳಿ ಹೋಬಳಿ ಹೊಸಳ್ಳಿ (ಬೆಳ್ಳಾವರ) ಗ್ರಾಮದ ರಾಜೇಶ್ ಎಂಬಾತನ ಜೊತೆ ಮನೆ ಬಿಟ್ಟು ಹೋಗಿದ್ದಳು. ಇವರಿಬ್ಬರ ಪ್ರೀತಿಗೆ ಅನಿಲ್ ಅಡ್ಡಿಪಡಿಸಿದ್ದರು. ಈ ಸಂಬಂಧ ಮುಂಚೆಯೂ ಗಲಾಟೆ ನಡೆದಿತ್ತು. ಆದರೆ ಜ.15 ರಂದು ಅನಿಲ್ ಮಧ್ಯಾಹ್ನದ ವೇಳೆ ಮಾರಕಾಸ್ತ್ರ ಹಿಡಿದು ಹೊಸಳ್ಳಿ ಗ್ರಾಮಕ್ಕೆ ಬಂದು ರಾಜೇಶ್‌ನ ಮೇಲೆ ಹಲ್ಲೆ ಮಾಡಲು ಮುಂದಾದಾಗ, ರಾಜೇಶ್ ತಪ್ಪಿಸಿಕೊಂಡು ಅದೇ ಮಾರಕಾಸ್ತ್ರದಿಂದ ಅನಿಲ್‌ನ ಹೊಟ್ಟೆ ಭಾಗಕ್ಕೆ ಬಲವಾಗಿ ಚುಚ್ಚಿದ್ದಾನೆ.
ಗಂಭೀರವಾಗಿ ಗಾಯಗೊಂಡ ಅನಿಲ್‌ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜ.17 ರಂದು ಮೃತಪಟ್ಟಿದ್ದಾನೆ. ಈ ವೇಳೆ ಹಲ್ಲೆಗೊಳಗಾದ ರಾಜೇಶ್‌ನನ್ನು ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಇನ್ನೂ ಘಟನಾ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
