ದಾವಣಗೆರೆ: ಮಾಜಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಮತ್ತು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಮಾಜಿ ಉಪಾಧ್ಯಕ್ಷ ಮೊಹಮ್ಮದ್ ಸಿರಾಜ್ ನಡುವೆ ನಡೆದಿದೆ ಎನ್ನಲಾದ ಕೃತಕ ಆಡಿಯೋ ಸಂಭಾಷಣೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಸಂಬಂಧ ಮೊಹಮ್ಮದ್ ಸಿರಾಜ್ ನೀಡಿರುವ ದೂರಿನ ಅನ್ವಯ ದಾವಣಗೆರೆಯ ಸೈಬರ್, ಆರ್ಥಿಕ ಮತ್ತು ನಾರ್ಕೋಟಿಕ್ಸ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಆಡಿಯೋ ಕ್ಲಿಪ್ ಸಂಪೂರ್ಣವಾಗಿ ನಕಲಿ ಮತ್ತು ಕಟ್ಟುಕಥೆಯಾಗಿದೆ. ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ನಡೆದಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮುಸ್ಲಿಂ ಮತದಾರರು ಎಸ್‌ಡಿಪಿಐ (SDPI) ಪಕ್ಷವನ್ನು ಬೆಂಬಲಿಸುವಂತೆ ಜಮೀರ್ ಅಹ್ಮದ್ ಖಾನ್ ಅವರು ತಮಗೆ ಸೂಚಿಸುತ್ತಿದ್ದಾರೆ ಎಂಬಂತೆ ಈ ಆಡಿಯೋವನ್ನು ಸೃಷ್ಟಿಸಲಾಗಿದೆ. ಇದು ತಮ್ಮ ಹಾಗೂ ಜಮೀರ್ ಅಹ್ಮದ್ ಖಾನ್ ಅವರ ರಾಜಕೀಯ ವರ್ಚಸ್ಸಿಗೆ ಧಕ್ಕೆ ತರಲು ನಡೆಸಿರುವ ವ್ಯವಸ್ಥಿತ ರಾಜಕೀಯ ಪಿತೂರಿಯಾಗಿದೆ ಎಂದು ಸಿರಾಜ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಇತ್ತೀಚೆಗಷ್ಟೇ ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಂಡಿರುವ ಮೊಹಮ್ಮದ್ ಸಿರಾಜ್, ಸಾರ್ವಜನಿಕರನ್ನು ದಾರಿ ತಪ್ಪಿಸಲು ಈ ನಕಲಿ ಆಡಿಯೋವನ್ನು ಉದ್ದೇಶಪೂರ್ವಕವಾಗಿ ಹರಿಬಿಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಕಲಿ ವಿಡಿಯೋ ಅಥವಾ ಆಡಿಯೋ ಸೃಷ್ಟಿಯ ಹಿಂದೆ ಇರುವ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಪೊಲೀಸರನ್ನು ಒತ್ತಾಯಿಸಿದ್ದಾರೆ.
ದೂರಿನ ಆಧಾರದ ಮೇಲೆ ಪ್ರಾಥಮಿಕ ವಿಚಾರಣೆ ನಡೆಸಿರುವ ಸಿಇಎನ್ ಪೊಲೀಸರು ಸದ್ಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
