“ಗಣೇಶ ವಿಗ್ರಹ ತಂದದ್ದು ಬಿಜೆಪಿ ಶಾಸಕ, ಪ್ರಧಾನಿಗೆ ಕೊಟ್ಟದ್ದು ಡಿಸಿಎಂ ಡಿ ಕೆ ಶಿವಕುಮಾರ್” ಎಂಬ ಸಾರಾಂಶ ಹೊತ್ತು “ವಿಜಯವಾಣಿ” ಪತ್ರಿಕೆಯಲ್ಲಿ ಪ್ರಕಟವಾದ ಒಂದು ಸುದ್ದಿ ಮಂಗಳವಾರ ಇಡೀ ದಿನ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಒಳಗಾಗಿತ್ತು. ಈ ಬಗ್ಗೆ ಇಂದು ಮಧ್ಯಾಹ್ನವೇ ಡಿಸಿಎಂ ಡಿಕೆ ಶಿವಕುಮಾರ್ ಅವರ ಮಾಧ್ಯಮ ಸಲಹೆಗಾರ ತ್ಯಾಗರಾಜ್ ಪುಟ್ಟಪ್ಪ ಅವರು ಸ್ಪಷ್ಟನೆ ನೀಡಿದ್ದರು.
ಆ ನಂತರ ಈಗ ಡಿಸಿಎಂ ಡಿಕೆ ಶಿವಕುಮಾರ್ ಕೂಡ ತಮ್ಮ ಜಾಲತಾಣದ ಮೂಲಕ ತಿರುಗೇಟು ನೀಡಿ, ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ತಿರುಗಿ ನಿಂತಿದ್ದಾರೆ.
ಸತ್ಯ, ಅಸತ್ಯ ನೋಡದೇ, ತಲೆಬುಡ ಸೋಸದೇ “ಡಿಸಿಎಂ ಗುರಿ”ಕಾರರು ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಬಾಯಿಗೆ ಬಂದಂತೆ ಟೀಕೆ ಮಾಡಿದ್ದಾರೆ ಎಂದು ತ್ಯಾಗರಾಜ್ ಪುಟ್ಟಪ್ಪ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ವಾಸ್ತವವಾಗಿ ಡಿಸಿಎಂ ಅವರೇ ಈ ಬೆಳ್ಳಿ ಗಣಪತಿ ವಿಗ್ರಹವನ್ನು ಅವರ ಮನೆಯಿಂದ ತೆಗೆದುಕೊಂಡು ಬಂದದ್ದು, ಅವರ ಕಚೇರಿ ಸಿಬ್ಬಂದಿಯೇ ಪ್ರಧಾನಿ ಭದ್ರತೆ ಹೊಣೆ ಹೊತ್ತ ಎಸ್ಪಿಜಿಯವರಿಗೆ ಕೊಟ್ಟು ತಪಾಸಣೆ ನಡೆಸಿದ್ದು, ಎಸ್ಪಿಜಿ ಸಿಬ್ಬಂದಿಯೇ ಈ ವಿಗ್ರಹವನ್ನು ಪ್ರಧಾನಿ ಅವರಿಗೆ ಡಿಸಿಎಂ ಅವರು ನೀಡಲು ನೆರವಾದದ್ದು!! ಡಿಸಿಎಂ ಡಿ ಕೆ ಶಿವಕುಮಾರ್ ಅವರ ಮಾಧ್ಯಮ ಸಲಹೆಗಾರನಾಗಿ ಈ ಎಲ್ಲಕ್ಕೂ ನಾನು ಪ್ರತ್ಯಕ್ಷ ಸಾಕ್ಷಿ” ಎಂದು ತ್ಯಾಗರಾಜ್ ಪುಟ್ಟಪ್ಪ ಸ್ಪಷ್ಟನೆ ನೀಡಿದ್ದಾರೆ.
ಎಲ್ಲಕ್ಕಿಂತ ಮಿಗಿಲಾಗಿ ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಎಂ. ಕೃಷ್ಣಪ್ಪ ಅವರೇ ನನಗೆ ದೂರವಾಣಿ ಕರೆ ಮಾಡಿ, “ಪೇಪರ್ ನಲ್ಲಿ ಸುಳ್ಳು ಸುದ್ದಿ ಹಾಕಿದ್ದಾರೆ. ನಾನು ಯಾರಿಗೂ ಈ ರೀತಿ ಹೇಳಿಲ್ಲ. ನಾನು ಸ್ಟೇಜ್ ಮೇಲೆ ಹೋಗೋಕೇ ಅವಕಾಶ ಇರಲಿಲ್ಲ. ಇನ್ನು ಪ್ರಧಾನಿಗೆ ಗಣೇಶ ವಿಗ್ರಹ ಹೇಗೆ ಕೊಡಲಿ? ಈ ಬಗ್ಗೆ ಪತ್ರಿಕೆಯವರಿಗೆ ಸ್ಪಷ್ಟನೆ ಕೊಡ್ತೇನೆ” ಅಂತ ಹೇಳಿದ್ರು.
ಹಾಗಾದರೆ ಈ ಸುದ್ದಿ ಸೃಷ್ಟಿಯಾದದ್ದು ಹೇಗೆ? ವರದಿ ಬರೆದ ಬೃಹಸ್ಪತಿಗೆ ಈ ಸುದ್ದಿ ಕೊಟ್ಟವರು ಯಾರು? ಸುದ್ದಿ ಕೆತ್ತುವ ಮುನ್ನ ಖಚಿತ ಮಾಡಿಕೊಳ್ಳಬೇಕು ಎನ್ನುವ ಸಾಮಾನ್ಯ ಪರಿಜ್ಞಾನ ಬೇಡವೇ?! ಸುದ್ದಿ ಸಣ್ಣದು, ಸುಳ್ಳು ದೊಡ್ಡದು, ಪ್ರಭಾವ ಕೆಟ್ಟದ್ದು”. ಪತ್ರಿಕೆಯವರಿಗೆ ಸ್ಪಷ್ಟನೆ ನೀಡಬಹುದು. ಆದರೆ ಸಾಮಾಜಿಕ ಜಾಲತಾಣದವರಿಗೆ? ಎಂದು ತ್ಯಾಗರಾಜ್ ಪುಟ್ಟಪ್ಪ ಹೇಳಿದ್ದಾರೆ.
ಸಧ್ಯ ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಕೂಡ ತಮ್ಮ ಜಾಲತಾಣದ ಮೂಲಕ ಹೇಳಿಕೆ ನೀಡಿದ್ದು, “ಬೇರೆಯವರ ಉಡುಗೊರೆಯನ್ನು ಮತ್ತೊಬ್ಬರಿಗೆ ನೀಡುವ ದುಸ್ಥಿತಿ ಬಂದಿಲ್ಲ!” ಎಂದು ಸುಳ್ಳು ಸುದ್ದಿ ಹಬ್ಬಿಸಿದ ವಿಜಯವಾಣಿ ವಿರುದ್ಧ ಚಾಟಿ ಬೀಸಿದ್ದಾರೆ.
“ಬೆಂಗಳೂರಿನ ಆರ್ ವಿ ರಸ್ತೆ ಮತ್ತು ಬೊಮ್ಮಸಂದ್ರ ನಡುವಣ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಪೂರ್ವಕವಾಗಿ ನೀಡಿದ ಬೆಳ್ಳಿ ಗಣೇಶ ಪ್ರತಿಮೆ ಸ್ವಂತದ್ದು. ಅಂದಿನ ಸಮಾರಂಭದಲ್ಲಿ ನಾನು ಪ್ರಧಾನಿ ಅವರಿಗೆ ನೀಡಿದ ಪ್ರತಿಮೆ ಬಿಜೆಪಿ ಶಾಸಕ ಎಂ ಕೃಷ್ಣಪ್ಪ ಅವರು ತಂದದ್ದು ಎಂಬ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ವರದಿ ಸತ್ಯಕ್ಕೆ ದೂರವಾದದ್ದು ಹಾಗೂ ಸಂಪೂರ್ಣ ಸುಳ್ಳು. ಆ ಪ್ರತಿಮೆಯನ್ನು ನನ್ನ ಸ್ವಂತ ಹಣದಿಂದ ಖರೀದಿಸಿದ್ದಾಗಿದೆ. ಇದಕ್ಕೆ ಇಲಾಖೆಯ ಹಣವನ್ನೂ ಬಳಸಿಲ್ಲ. ಮನೆಯಿಂದ ತೆಗೆದುಕೊಂಡು ಹೋಗಿ, ಕಚೇರಿ ಸಿಬ್ಬಂದಿ ಮೂಲಕ ಎಸ್‌ಪಿಜಿ ತಪಾಸಣೆಗೆ ಒಳಪಡಿಸಿ ಪ್ರಧಾನಿಯವರಿಗೆ ನೀಡಲಾಯಿತು” ಎಂದು ಪೋಸ್ಟ್ ಮಾಡಿದ್ದಾರೆ.