Home ರಾಜಕೀಯ ದಲಿತರು ಸಿಎಂ ಆಗದಂತೆ ತಡೆದಿದ್ದೇ ಸಿದ್ದರಾಮಯ್ಯ: ಎಚ್‌ಡಿಕೆ ಗಂಭೀರ ಆರೋಪ

ದಲಿತರು ಸಿಎಂ ಆಗದಂತೆ ತಡೆದಿದ್ದೇ ಸಿದ್ದರಾಮಯ್ಯ: ಎಚ್‌ಡಿಕೆ ಗಂಭೀರ ಆರೋಪ

0

ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿಯಾಗುವುದನ್ನು ತಡೆದಿದ್ದೇ ಸಿದ್ದರಾಮಯ್ಯ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಜಿ. ಪರಮೇಶ್ವರ್ ಅವರು ಬಹಳ ಹಿಂದೆಯೇ ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ಸಿದ್ದರಾಮಯ್ಯ ಅವರು ಖರ್ಗೆ ಅವರನ್ನು ದೆಹಲಿಗೆ ಕಳುಹಿಸಿದರು ಮತ್ತು 2013ರಲ್ಲಿ ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಅವರು ಚುನಾವಣೆಯಲ್ಲಿ ಸೋಲುವಂತೆ ಪಿತೂರಿ ಮಾಡಲಾಯಿತು ಎಂದು ದೂರಿದ್ದಾರೆ.

ದಲಿತರು ಬಹಳ ಹಿಂದೆಯೇ ಮುಖ್ಯಮಂತ್ರಿಯಾಗುವ ಅವಕಾಶವಿತ್ತು, ಆದರೆ 75 ವರ್ಷಗಳ ನಂತರವೂ ಅದು ಏಕೆ ಸಾಧ್ಯವಾಗಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಸಚಿವ ಪರಮೇಶ್ವರ್ ಅವರೊಂದಿಗಿನ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಕೇವಲ ವೈಯಕ್ತಿಕ ಭೇಟಿಯಾಗಿದ್ದು ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಸಿದ್ದರಾಮಯ್ಯ ಅವರ ‘ಬೆನ್ನಿಗೆ ಚೂರಿ ಹಾಕುವ’ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರೇ ದೇವೇಗೌಡರ ಬೆನ್ನಿಗೆ ಚೂರಿ ಹಾಕಲು ಯತ್ನಿಸಿ ಪಕ್ಷ ಬಿಟ್ಟವರು. ಸಿದ್ದರಾಮಯ್ಯ ಅವರಿಗೆ ಇಂದಿಗೂ ಮಾನಸಿಕ ಸ್ಥಿಮಿತ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಅವರು ಜಾತಿ ಕಾರ್ಡ್ ಬಳಸುತ್ತಿದ್ದಾರೆ ಎಂದು ಆರೋಪಿಸಿದ ಕುಮಾರಸ್ವಾಮಿ, ನಾನು ನನ್ನ ಒಕ್ಕಲಿಗ ಸಮುದಾಯವನ್ನು ಯಾವತ್ತೂ ದಂಗೆಗೆ ಪ್ರಚೋದಿಸಿಲ್ಲ ಅಥವಾ ಜಾತಿಯ ಹೆಸರಿನಲ್ಲಿ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸಿಲ್ಲ ಎಂದು ಹೇಳಿದ್ದಾರೆ.

You cannot copy content of this page

Exit mobile version