ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ 48 ಶಾಸಕರು ಹನಿಟ್ರ್ಯಾಪ್ ಗೆ ಒಳಗಾಗಿದ್ದಾರೆ, ಸರ್ಕಾರದ ಸಚಿವರಿಗೇ ರಕ್ಷಣೆ ಇಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಡಿಸಿಎಂ ಡಿಕೆ ಶಿವಕುಮಾರ್ ಲಘುವಾಗಿ ಮಾತನಾಡಿದ್ದಾರೆ. ‘ಸುಮ್ಮನೆ ಹನಿಟ್ರ್ಯಾಪ್ ಮಾಡುವವರು ಅವರ ಬಳಿ ಬರುತ್ತಾರೆಯೇ? ಇವರು ಹಲೋ ಎಂದರೆ ಅವರು ಹಲೋ ಅಂತಾರೆ. ನೀವು ಪ್ರತಿಕ್ರಿಯೆ ನೀಡಲಿಲ್ಲ ಎಂದರೆ ಯಾರಾದರೂ ಮಾತನಾಡಿಸುತ್ತಾರಾ?’ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಹನಿಟ್ರಾಪ್ ಪ್ರಕರಣದ ಬಗ್ಗೆ ಡಿಕೆ ಶಿವಕುಮಾರ್ ಮೇಲೆಯೇ ಬಿಜೆಪಿ ಶಾಸಕ ಮುನಿರತ್ನ ಮಾಡಿರುವ ಗಂಭೀರ ಆರೋಪ ತೆರೆಮರೆಯಲ್ಲಿ ಕೇಳಿ ಬರುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ “ವಿಧಾನಸೌಧದಲ್ಲಿ ಅವರು ಏನೆಲ್ಲಾ ಮಾಡಿದ್ದರು ಎನ್ನುವುದು ಪೊಲೀಸ್ ದೂರಿನಲ್ಲಿ ಇದೆಯಲ್ಲವೇ? ಆರ್.ಅಶೋಕ್ ಗೆ, ಯಡಿಯೂರಪ್ಪ ಅವರಿಗೆ ಏನೋ ಆಯಿತು ಎಂದು ಬಿಜೆಪಿಯವರೇ ಮಾತನಾಡುತ್ತಿದ್ದರಲ್ಲವೇ? ಅವರ ನೋವನ್ನು ಅವರು ಹೇಳಿಕೊಂಡಿದ್ದಾರೆ. ಮಾಡಿದ್ದುಣ್ಣೋ ಮಾರಾಯ ಎಂದು ಹೇಳಿದ್ದಾರೆ.
ಹನಿ ಟ್ರಾಪ್ ನಂತಹ ಪ್ರಕರಣ ಆಗಬಾರದು. ಆದರೆ ರಾಜ್ಯದಲ್ಲಿ ನಡೀತಿದೆ. ಈ ಬಗ್ಗೆ ದೂರು ದಾಖಲಿಸಬೇಕು ಎಂದು ನಿನ್ನೆಯೇ ಪೊಲೀಸರಿಗೆ ದೂರು ನೀಡಲಿ ಎಂದು ಸಲಹೆ ನೀಡಿದ್ದೆ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲು ತಡ ಮಾಡಬಾರದು. ಇದರ ಬಗ್ಗೆ ಶೀಘ್ರ ತನಿಖೆಯಾಗಬೇಕು ಎಂದು ನಾನೂ ಒತ್ತಾಯ ಮಾಡುತ್ತಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.