ಬೆಂಗಳೂರು: ನಟಿ ರಮ್ಯಾ ನೀಡಿರುವ ದೂರಿನ ಸಂಬಂಧ ಸಿಸಿಬಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿಸಿಪಿ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಸಿಬಿ ಸೈಬರ್ ಠಾಣೆಗೆ ವರ್ಗಾಯಿಸಲಾಗಿದೆ. ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರ ಉಸ್ತುವಾರಿಯಲ್ಲಿ ಡಿಸಿಪಿ ಮಟ್ಟದ ಅಧಿಕಾರಿ ತನಿಖೆ ನಡೆಸುತ್ತಿದ್ದಾರೆ” ಎಂದು ಹೇಳಿದರು. ನಟಿ ರಮ್ಯಾ ಅವರು ನಿನ್ನೆ ಸಂಜೆ ತಮ್ಮ ಕಚೇರಿಗೆ ಬಂದು ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಆದಷ್ಟು ಶೀಘ್ರದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ನಟ ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ನಿನ್ನೆ ದೂರು ನೀಡಿದ್ದರು.
ಡ್ರಗ್ಸ್ ನಿರ್ಮೂಲನೆಗೆ ಪಣ: ಆಯುಕ್ತರ ಹೇಳಿಕೆ
ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆಯಾಗಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು, “ಬೆಂಗಳೂರು ನಗರದಲ್ಲಿ ಆ ರೀತಿಯ ಫ್ಯಾಕ್ಟರಿ ಯಾವುದಾದರೂ ಇದೆಯೇ ಎಂದು ನಾವು ಅಲರ್ಟ್ ಆಗಿದ್ದೇವೆ. ಡ್ರಗ್ಸ್ ನಿರ್ಮೂಲನೆಗೆ ಪಣತೊಟ್ಟಿದ್ದು, ಎಲ್ಲಾ ಕಡೆ ಕಾರ್ಯಾಚರಣೆ ನಡೆಸುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದರು.
ನಾಗರಿಕರಿಂದ ಉತ್ತಮ ಬೆಂಬಲ
“ನೂತನವಾಗಿ ಜಾರಿಗೆ ತಂದಿರುವ ‘ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮಕ್ಕೆ ನಾಗರಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಪೊಲೀಸರು ಮತ್ತು ಸಾರ್ವಜನಿಕರ ಮಧ್ಯೆ ಉತ್ತಮ ಬಾಂಧವ್ಯ ಬೆಳೆಯುತ್ತಿದೆ. ಮಾಧ್ಯಮಗಳೂ ಸಹ ಹೆಚ್ಚಿನ ಪ್ರಚಾರ ನೀಡುವ ಮೂಲಕ ಸಾರ್ವಜನಿಕರು ಸ್ಪಂದಿಸುವಂತೆ ಮಾಡಬೇಕು” ಎಂದು ಆಯುಕ್ತರು ಮನವಿ ಮಾಡಿದರು.