ಹೆಚ್.ಡಿ.ಕುಮಾರಸ್ವಾಮಿ ಮತ್ತು ಬಿಎಸ್ ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ನಡೆದಿದೆ ಎನ್ನಲಾದ ಗಂಗೇನಹಳ್ಳಿ ಡಿ-ನೋಟಿಫಿಕೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಲೋಕಾಯುಕ್ತ ಅಧಿಕಾರಿಗಳು ತುರ್ತು ಹಾಜರಿಗೆ ಸೂಚಿಸಿದ ನೋಟಿಸ್ ಗೆ ಸಂಸದ ಹೆಚ್.ಡಿ.ಕುಮಾರಸ್ವಾಮಿ ಇದೀಗಷ್ಟೇ ಲೋಕಾಯುಕ್ತ ಕಛೇರಿಗೆ ಹಾಜರಾಗಿದ್ದಾರೆ.
ಬೆಂಗಳೂರಿನ ಗಂಗೇನಹಳ್ಳಿಯಲ್ಲಿನ 1 ಎಕರೆ 11 ಗುಂಟೆ ಭೂಮಿಯನ್ನು ಸತ್ತವರ ಹೆಸರಿನಲ್ಲಿ ಅಕ್ರಮವಾಗಿ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಜಂಟಿಯಾಗಿ ಡಿನೋಟಿಫಿಕೇಷನ್ ಮಾಡಿದ ಪ್ರಕರಣ ಮರುಜೀವ ಸಿಗುತ್ತಿದ್ದಂತೆ ಈಗ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಒಬ್ಬರಾದ ಮೇಲೆ ಒಬ್ಬರಂತೆ ಲೋಕಾಯುಕ್ತ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕೈಗೆತ್ತಿಕೊಂಡಿದ್ದ ಡಿನೋಟಿಫಿಕೇಷನ್ ಪ್ರಕ್ರಿಯೆಯನ್ನು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮುಕ್ತಾಯಗೊಳಿಸಲಾಗಿತ್ತು. ಅಕ್ರಮವಾಗಿ ಡಿ-ನೋಟಿಫೈ ಮಾಡಿಸಿದ್ದ ಆರೋಪದಲ್ಲಿ ಯಡಿಯೂರಪ್ಪ ಎ 1 ಆರೋಪಿಯಾಗಿದ್ದರೆ, ಹೆಚ್ ಡಿ ಕುಮಾರಸ್ವಾಮಿ ಎ2 ಆರೋಪಿಯಾಗಿದ್ದಾರೆ.
2007ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರಿಂದ ನಿಯಮ 164ರ ಅಡಿಯಲ್ಲಿ ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸೆಪ್ಟೆಂಬರ್ 21 ರಂದು ಇದೇ ರೀತಿ ಯಡಿಯೂರಪ್ಪ ಅವರನ್ನೂ ಲೋಕಾಯುಕ್ತ ಅಧಿಕಾರಿಗಳು ಕರೆಸಿಕೊಂಡು ಹೇಳಿಕೆ ದಾಖಲಿಸಿದ್ದಾರೆ.
ಇದೇ ಪ್ರಕರಣದ ಅಡಿಯಲ್ಲಿ ಈಗ ಸಂಸದ ಹೆಚ್ ಡಿ ಕುಮಾರಸ್ವಾಮಿಗೂ ತುರ್ತು ನೋಟಿಸ್ ಜಾರಿ ಒಂದು ಗಂಟೆಗೂ ಹೆಚ್ಚು ಸಮಯದಿಂದ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಬಹುತೇಕ ಮರೆತೇ ಹೋಗಿದ್ದ ಪ್ರಕರಣ ಈಗ ಮರುಜೀವ ಪಡೆದುಕೊಂಡಿದ್ದು ಈಗ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಇಬ್ಬರಿಗೂ ಆತಂಕ ಹೆಚ್ಚಾಗಿದೆ.