Home ರಾಜಕೀಯ ರಾಜ್ಯ ಬಜೆಟ್ 2026: ಮಹಿಳೆಯರಿಗೆ ಹೆಚ್ಚಿದ ಧನಶ್ರೀ, ಬೆಂಗಳೂರಿಗೆ ಭಾರಿ ಯೋಜನೆಗಳು – ಸಿಎಂ ಸಿದ್ದರಾಮಯ್ಯ...

ರಾಜ್ಯ ಬಜೆಟ್ 2026: ಮಹಿಳೆಯರಿಗೆ ಹೆಚ್ಚಿದ ಧನಶ್ರೀ, ಬೆಂಗಳೂರಿಗೆ ಭಾರಿ ಯೋಜನೆಗಳು – ಸಿಎಂ ಸಿದ್ದರಾಮಯ್ಯ ಘೋಷಣೆ

0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026–27ನೇ ಸಾಲಿನ ರಾಜ್ಯ ಬಜೆಟ್ ಮಂಡಿಸುವ ಮುನ್ನ ವಿಧಾನಸೌಧದಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಿ ಬಜೆಟ್‌ಗೆ ಅನುಮೋದನೆ ಪಡೆದರು. ಬಳಿಕ ವಿಧಾನಸಭೆಯಲ್ಲಿ ಬಜೆಟ್ ಭಾಷಣ ಆರಂಭಿಸಿ ಹಲವು ಪ್ರಮುಖ ಯೋಜನೆಗಳು ಹಾಗೂ ಅನುದಾನಗಳನ್ನು ಘೋಷಿಸಿದರು.

ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 13,000 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಮಹಿಳಾ ಕಲ್ಯಾಣಕ್ಕೆ ವಿಶೇಷ ಘೋಷಣೆ
ಬಜೆಟ್‌ನಲ್ಲಿ ಮಹಿಳೆಯರಿಗೆ ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ. ಧನಶ್ರೀ ಯೋಜನೆ ಫಲಾನುಭವಿಗಳಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹಧನವನ್ನು 30,000 ರೂ.ಗಳಿಂದ 45,000 ರೂ.ಗೆ ಹೆಚ್ಚಿಸಲಾಗಿದೆ. ಜೊತೆಗೆ ಜಿಲ್ಲಾಮಟ್ಟದಲ್ಲಿ 20 ಹೊಸ ಶಿಶು ಪಾಲನಾ ಕೇಂದ್ರಗಳನ್ನು ಸ್ಥಾಪಿಸಲು 1 ಕೋಟಿ ರೂ. ಮೀಸಲಿಡಲಾಗಿದೆ.

ಬೆಂಗಳೂರಿಗೆ ಭಾರಿ ಅನುದಾನ
ರಾಜಧಾನಿ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಘೋಷಿಸಲಾಗಿದೆ.
* ಐದು ನಗರ ಪಾಲಿಕೆಗಳಿಗೆ 1,233 ಕೋಟಿ ರೂ. ರಸ್ತೆ ಅಭಿವೃದ್ಧಿಗೆ ಮೀಸಲು
* 1,800 ಕೋಟಿ ವೆಚ್ಚದಲ್ಲಿ 158 ಕಿಮೀ ವೈಟ್‌ಟಾಪಿಂಗ್ ರಸ್ತೆ ನಿರ್ಮಾಣ
* ಉಪಮುಖ್ಯ ರಸ್ತೆಗಳ ಅಭಿವೃದ್ಧಿಗೆ 1,836 ಕೋಟಿ ರೂ.
* ರಾಜಕಾಲುವೆಗಳ ಮೇಲ್ದರ್ಜೆಗೇರಿಸಲು 273 ಕೋಟಿ ರೂ.

ಇದೇ ವೇಳೆ ಕೆ.ಆರ್.ಪುರಂನಿಂದ ಮೈಸೂರು ರಸ್ತೆವರೆಗೆ ಸುಮಾರು 40 ಕಿಮೀ ಉದ್ದದ ಸುರಂಗಮಾರ್ಗ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುಮೋದನೆ ನೀಡಲಾಗಿದೆ. ಈ ಯೋಜನೆಗೆ ಸುಮಾರು 40,000 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಮೊದಲ ಹಂತದಲ್ಲಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗೆ 17 ಕಿಮೀ ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ 17,780 ಕೋಟಿ ರೂ. ಟೆಂಡರ್ ಕರೆಯಲಾಗಿದೆ.

ಸಾಮಾಜಿಕ ಮಾಧ್ಯಮ ಬಳಕೆ ಕುರಿತು ಘೋಷಣೆ
16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಮಾಧ್ಯಮ ಬಳಸುವುದನ್ನು ನಿಯಂತ್ರಿಸುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಘೋಷಿಸಿದರು.

ಪೊಲೀಸ್ ಠಾಣೆಗಳು ಮತ್ತು ಕೈಗಾರಿಕಾ ತರಬೇತಿ
ರಾಜ್ಯದ 11 ಜಿಲ್ಲೆಗಳಲ್ಲಿ 12 ಹೊಸ ಪೊಲೀಸ್ ಠಾಣೆಗಳು ಆರಂಭಿಸಲಾಗುತ್ತವೆ. ಜೊತೆಗೆ 60 ಕೋಟಿ ರೂ. ವೆಚ್ಚದಲ್ಲಿ 10 GTTC ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.

ಉದ್ಯೋಗ ಮತ್ತು ನೇಮಕಾತಿ
ರಾಜ್ಯದ ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ 56,432 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕೃಷಿ ಕ್ಷೇತ್ರಕ್ಕೆ ಉತ್ತೇಜನ
ರೈತರಿಗೆ ಹಲವು ಯೋಜನೆಗಳನ್ನು ಘೋಷಿಸಲಾಗಿದೆ.
* 7 ಲಕ್ಷ ರೈತರಿಗೆ ಹನಿ ನೀರಾವರಿ ವ್ಯವಸ್ಥೆ
* 3 ಲಕ್ಷ ರೈತರಿಗೆ ಕೃಷಿ ಯಂತ್ರೋಪಕರಣ ವಿತರಣೆ
* 363 ಕೋಟಿ ವೆಚ್ಚದಲ್ಲಿ ಕೃಷಿ ಹೊಂಡ ನಿರ್ಮಾಣ
* 468 ಕೋಟಿ ರೂ. ವೆಚ್ಚದಲ್ಲಿ ಬಿತ್ತನೆ ಬೀಜ ವಿತರಣೆ
ಇದೇ ವೇಳೆ ಬೆಳಗಾವಿ ಮತ್ತು ಕಲ್ಬುರ್ಗಿಯಲ್ಲಿ ಕುರಿ ಸಾಕಾಣಿಕೆಗೆ ಉತ್ತೇಜನ, ಹಸು–ಎಮ್ಮೆ ಖರೀದಿಗೆ 40 ಕೋಟಿ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ.

ಬೆಂಗಳೂರು ಪರಿಸರ ಮತ್ತು ವನ್ಯಜೀವಿ ರಕ್ಷಣೆ
ಬೆಂಗಳೂರು ನಗರದಲ್ಲಿ ಚಿರತೆ ಹಾವಳಿ ನಿಯಂತ್ರಿಸಲು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ 5 ಕೋಟಿ ವೆಚ್ಚದಲ್ಲಿ ಚಿರತೆ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗುತ್ತದೆ.

ಇತರೆ ಪ್ರಮುಖ ಘೋಷಣೆಗಳು
* ಪ್ರತಿ ತಾಲೂಕಿನಲ್ಲಿ MSIL ಮೂಲಕ ರೈತರ ಮಾಲ್ ಸ್ಥಾಪನೆ
* ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂ. ಮೀಸಲು
* ರಾಜ್ಯದಲ್ಲಿ ಐದು ರೇಷ್ಮೆ ಪಾರ್ಕ್‌ಗಳ ನಿರ್ಮಾಣ
* ಮಿಲೆಟ್ ಹಬ್‌ಗೆ ಏಕವಾಕ್ಯ ವ್ಯವಸ್ಥೆ ಜಾರಿ
* ಧಾರ್ಮಿಕ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ
ಪ್ರಮುಖ ದೇವಾಲಯಗಳ ಅಭಿವೃದ್ಧಿಗೂ ಸರ್ಕಾರ ಗಮನ ಹರಿಸಿದೆ.
* ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪ್ರಾಧಿಕಾರ ರಚನೆ
* ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಪ್ರಾಧಿಕಾರ ರಚನೆ
* ವಾರಣಾಸಿಯಲ್ಲಿ ಹೊಸ ಛತ್ರ ನಿರ್ಮಾಣ
* ಶ್ರೀಶೈಲ ದೇವಸ್ಥಾನದಲ್ಲಿ ಹೊಸ ಯಾತ್ರಿನಿವಾಸ ನಿರ್ಮಾಣ

ಮಣ್ಣಿನ ಗುಣಮಟ್ಟ ಹೆಚ್ಚಿಸಲು ‘ವಸುಧಾಮೃತ ಯೋಜನೆ’ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಘೋಷಿಸಿದರು.

You cannot copy content of this page

Exit mobile version