74 ದೇಶಗಳಲ್ಲಿ ನಿಷೇಧಕ್ಕೊಳಗಾದ ಮಾರಕ ಕಳೆನಾಶಕ ‘ಪ್ಯಾರಾಕ್ವಾಟ್’ ಭಾರತದಲ್ಲಿ ಮುಕ್ತ ಚಲಾವಣೆ: ಪ್ರತಿವಿಷವಿಲ್ಲದ ವಿಷಕ್ಕೆ ಪರಿಸರವಾದಿಗಳಿಂದ ತೀವ್ರ ಕಳವಳ!

ನ್ಯೂಯಾರ್ಕ್/ನವದೆಹಲಿ: ಜಗತ್ತಿನಾದ್ಯಂತ ಅತ್ಯಂತ ಅಪಾಯಕಾರಿ ಕೃಷಿ ರಾಸಾಯನಿಕಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ‘ಪ್ಯಾರಾಕ್ವಾಟ್ ಡೈಕ್ಲೋರೈಡ್’ (Paraquat Dichloride) ಕಳೆನಾಶಕವು ಭಾರತದಲ್ಲಿ ಇಂದಿಗೂ ಕಾನೂನುಬದ್ಧವಾಗಿ ಬಳಕೆಯಲ್ಲಿದೆ.

ಮಾನವನ ಆರೋಗ್ಯಕ್ಕೆ ತೀವ್ರ ಮಾರಕವಾಗಿರುವ ಹಿನ್ನೆಲೆಯಲ್ಲಿ ಜಗತ್ತಿನ ಬರೋಬ್ಬರಿ 74 ದೇಶಗಳು ಈಗಾಗಲೇ ಈ ರಾಸಾಯನಿಕವನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಭಾರತದಲ್ಲಿ ಇದರ ಮುಕ್ತ ಬಳಕೆ ಮುಂದುವರಿದಿರುವುದು ಪರಿಸರವಾದಿಗಳು ಹಾಗೂ ಆರೋಗ್ಯ ತಜ್ಞರಲ್ಲಿ ತೀವ್ರ ಆತಂಕ ಮೂಡಿಸಿದೆ. ಅತ್ಯಂತ ಆಘಾತಕಾರಿ ವಿಷಯವೆಂದರೆ, ಈ ವಿಷಕ್ಕೆ ಜಗತ್ತಿನ ಯಾವುದೇ ಮೂಲೆಯಲ್ಲೂ ನಿರ್ದಿಷ್ಟ ಪ್ರತಿವಿಷ (Antidote) ಲಭ್ಯವಿಲ್ಲದಿರುವುದು ಇದರ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಒಂದು ಕಾಲದಲ್ಲಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಪ್ರಮುಖ ಸಾಧನವಾಗಿ ಬಳಸಲಾಗುತ್ತಿದ್ದ ಈ ರಾಸಾಯನಿಕವನ್ನು, ಪ್ರಸ್ತುತ ಪರಿಸರ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಎದುರಾಗಿರುವ ದೊಡ್ಡ ಗಂಡಾಂತರ ಎಂದು ಪರಿಗಣಿಸಲಾಗಿದೆ. ವಿಶೇಷವೆಂದರೆ, ಈ ಮಂದನ್ನು ಯಾವ ದೇಶಗಳು ಅಭಿವೃದ್ಧಿಪಡಿಸಿದ್ದವೋ, ಆ ಎಲ್ಲಾ ದೇಶಗಳೂ ಇದರ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿವೆ. ಆಸ್ಟ್ರಿಯಾ 1993 ರಲ್ಲೇ ಇದಕ್ಕೆ ನಿಷೇಧ ಹೇರಿದ್ದರೆ, ಸ್ವಿಟ್ಜರ್ಲಾಂಡ್ 1989 ರಲ್ಲಿ ಮತ್ತು ಬ್ರಿಟನ್ 2007 ರಲ್ಲಿ ಇದರ ಬಳಕೆಯನ್ನು ನಿಲ್ಲಿಸಿದವು.

ಆ ನಂತರ ಫ್ರಾನ್ಸ್, ಜರ್ಮನಿ, ಇಟಲಿ, ಸ್ಪೇನ್ ಸೇರಿದಂತೆ ಯುರೋಪಿಯನ್ ಒಕ್ಕೂಟದ ದೇಶಗಳು ನಿಷೇಧ ಜಾರಿಗೊಳಿಸಿದವು. ಮುಂದುವರಿದು ಬ್ರೆಜಿಲ್, ಥೈಲ್ಯಾಂಡ್, ಮಲೇಷ್ಯಾ ದೇಶಗಳು 2020 ರಲ್ಲಿ ಹಾಗೂ ಕೆನಡಾ 2023 ರಲ್ಲಿ ಇದಕ್ಕೆ ಬ್ರೇಕ್ ಹಾಕಿದವು. ವಿಯೆಟ್ನಾಂ ಮತ್ತು ದಕ್ಷಿಣ ಕೊರಿಯಾ ದೇಶಗಳೂ ಸಹ ಈ ನಿಷೇಧಿತ ಪಟ್ಟಿಯಲ್ಲಿದ್ದು, ಇವೆಲ್ಲವೂ ಪರ್ಯಾಯ ಕೃಷಿ ಪದ್ಧತಿ ಹಾಗೂ ಇತರ ಸುರಕ್ಷಿತ ಕಳೆನಾಶಕಗಳ ಮೂಲಕ ಕೃಷಿ ಇಳುವರಿಗೆ ಧಕ್ಕೆಯಾಗದಂತೆ ಯಶಸ್ವಿಯಾಗಿ ಮುನ್ನಡೆಯುತ್ತಿವೆ.

ಭಾರತದಲ್ಲಿ ಪ್ಯಾರಾಕ್ವಾಟ್ ಇತಿಹಾಸ ಮತ್ತು ಪ್ರಸ್ತುತ ಸ್ಥಿತಿ: ಭಾರತದಲ್ಲಿ ಹಸಿರು ಕ್ರಾಂತಿಯ (Green Revolution) ಅವಧಿಯಲ್ಲಿ ಪ್ಯಾರಾಕ್ವಾಟ್ ಬಳಕೆ ಆರಂಭವಾಯಿತು. ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಕೃಷಿ ಕಾರ್ಮಿಕರ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಅಂದು ಇದನ್ನು ವ್ಯಾಪಕವಾಗಿ ಉತ್ತೇಜಿಸಲಾಯಿತು. ಪ್ರ

ಸ್ತುತ ಕೇಂದ್ರ ಕೀಟನಾಶಕಗಳ ಮಂಡಳಿಯು (CIB&RC) ಕೇವಲ ಒಂಬತ್ತು ಪ್ರಮುಖ ಬೆಳೆಗಳಿಗೆ ಮಾತ್ರ ಇದನ್ನು ಬಳಸಲು ಅನುಮತಿ ನೀಡಿದೆ. ಅವುಗಳೆಂದರೆ ಚಹಾ, ಆಲೂಗಡ್ಡೆ, ಹತ್ತಿ, ರಬ್ಬರ್, ಕಾಫಿ, ಭತ್ತ, ಗೋಧಿ, ಮೆಕ್ಕೆಜೋಳ ಮತ್ತು ದ್ರಾಕ್ಷಿ.

ವಿಶ್ವದ ಹಲವು ದೇಶಗಳಲ್ಲಿ ನಿಷೇಧಿಸಲ್ಪಟ್ಟು, ಭಾರತದಲ್ಲಿ ಮಾತ್ರ ಬಳಕೆಯಲ್ಲಿದ್ದ 66 ಕೀಟನಾಶಕಗಳ ಕುರಿತು ಮರುಪರಿಶೀಲನೆ ನಡೆಸಲು ಕೇಂದ್ರ ಕೃಷಿ ಸಚಿವಾಲಯವು 2013 ರಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಕೃಷಿ ವಲಯದ ಮಾಜಿ ಹಿರಿಯ ವಿಜ್ಞಾನಿ ಡಾ. ಅನುಪಮ್ ವರ್ಮಾ ನೇತೃತ್ವದ ಈ ಸಮಿತಿಯು 2015 ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು.

ಈ ಸಮಿತಿಯು ಪ್ಯಾರಾಕ್ವಾಟ್ ಮೇಲೆ ಸಂಪೂರ್ಣ ನಿಷೇಧ ಹೇರುವ ಬದಲು, ಕಟ್ಟುನಿಟ್ಟಾದ ಸುರಕ್ಷತಾ ಮಾನದಂಡಗಳು, ವಿಶೇಷ ಪ್ಯಾಕೇಜಿಂಗ್ ಮತ್ತು ವೈದ್ಯಕೀಯ ಸೌಲಭ್ಯಗಳ ಸಜ್ಜುಗೊಳಿಸುವಿಕೆಯಂತಹ ಕಠಿಣ ಷರತ್ತುಗಳೊಂದಿಗೆ ಇದರ ಬಳಕೆಯನ್ನು ಮುಂದುವರಿಸಲು ಹಸಿರು ನಿಶಾನೆ ತೋರಿಸಿತ್ತು.

ಶಿಫಾರಸುಗಳ ಅನುಷ್ಠಾನದಲ್ಲಿ ಭಾರಿ ನಿರ್ಲಕ್ಷ್ಯ: ಡಾ. ಅನುಪಮ್ ವರ್ಮಾ ಸಮಿತಿಯು ಸೂಚಿಸಿದ್ದ ಕಟ್ಟುನಿಟ್ಟಾದ ಸುರಕ್ಷತಾ ನಿಯಮಗಳು ದುರದೃಷ್ಟವಶಾತ್ ಗ್ರಾಮೀಣ ಮಟ್ಟದಲ್ಲಿ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿವರ್ಷ 100 ಮೆಟ್ರಿಕ್ ಟನ್‌ಗಿಂತಲೂ ಹೆಚ್ಚು ಪ್ಯಾರಾಕ್ವಾಟ್ ಬಳಕೆ ಮಾಡಲಾಗುತ್ತಿದೆ.

ಮುಖ್ಯವಾಗಿ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ರೈತರು ಹೆಸರು ಬೇಳೆ (Moong) ಬೆಳೆಯನ್ನು ಕಟಾವಿಗೆ ಮುನ್ನ ಬೇಗನೆ ಒಣಗಿಸುವ ಉದ್ದೇಶಕ್ಕಾಗಿ ಪ್ಯಾರಾಕ್ವಾಟ್ ಅನ್ನು ನಿಯಮಬಾಹಿರವಾಗಿ ಸಿಂಪಡಿಸುತ್ತಿದ್ದಾರೆ. ಈ ಅಪಾಯಕಾರಿ ಧೋರಣೆಯಿಂದಾಗಿ ರಾಸಾಯನಿಕದ ವಿಷಕಾರಿ ಅವಶೇಷಗಳು ನೇರವಾಗಿ ನಮ್ಮ ಆಹಾರ ಸರಪಳಿಯನ್ನು (Food Chain) ಸೇರುತ್ತಿದ್ದು, ಸಾರ್ವಜನಿಕರಲ್ಲಿ ಭೀಕರ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.

ಪ್ರತಿವಿಷವಿಲ್ಲದ ಆತಂಕ: ಪ್ಯಾರಾಕ್ವಾಟ್ ವಿಷಪೂರಿತಕ್ಕೆ ಪ್ರಸ್ತುತ ವೈದ್ಯಕೀಯ ಲೋಕದಲ್ಲಿ ಯಾವುದೇ ನಿರ್ದಿಷ್ಟ ಆ್ಯಂಟಿಡೋಟ್ ಇಲ್ಲದಿರುವುದು ಅತ್ಯಂತ ಗಂಭೀರ ವಿಚಾರವಾಗಿದೆ. ಈ ರಾಸಾಯನಿಕವು ಅಕಸ್ಮಾತ್ ಆಗಿ ದೇಹದೊಳಗೆ ಪ್ರವೇಶಿಸಿದರೆ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಚರ್ಮಕ್ಕೆ ತಗುಲಿದರೆ ತೀವ್ರ ಸ್ವರೂಪದ ಅಂಗಾಂಗ ವೈಫಲ್ಯ (Organ Failure) ಉಂಟಾಗಿ ಸಾವು ಸಂಭವಿಸುವ ಸಾಧ್ಯತೆಗಳು ತೀರಾ ಹೆಚ್ಚಿರುತ್ತವೆ.

ಈ ಹಿನ್ನೆಲೆಯಲ್ಲಿ ಭಾರತದ ಕೀಟನಾಶಕಗಳ ನಿಯಂತ್ರಣ ವ್ಯವಸ್ಥೆ ಮತ್ತು ಸಾರ್ವಜನಿಕ ಆರೋಗ್ಯ ರಕ್ಷಣೆಯ ಮೇಲ್ವಿಚಾರಣೆಯ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ. ಜಗತ್ತಿನ ಬಹುತೇಕ ರಾಷ್ಟ್ರಗಳು ಅತ್ಯಂತ ಭೀಕರ ಎಂದು ಘೋಷಿಸಿರುವ ಈ ರಾಸಾಯನಿಕವನ್ನು ಭಾರತೀಯ ಕೃಷಿ ವಲಯದಲ್ಲಿ ಇನ್ನೂ ಏಕೆ ಮುಂದುವರಿಸಲಾಗಿದೆ ಎಂಬ ವಿಷಯದ ಕುರಿತು ಸರ್ಕಾರ ತಕ್ಷಣವೇ ಮರುಪರಿಶೀಲನೆ ನಡೆಸಬೇಕು ಎಂದು ಪರಿಸರವಾದಿಗಳು ಮತ್ತು ಆರೋಗ್ಯ ಕಾರ್ಯಕರ್ತರು ಬಲವಾಗಿ ಒತ್ತಾಯಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು