ಬೆಂಗಳೂರು : ದೀಪಾವಳಿ ಹಬ್ಬಕ್ಕೂ ಮೊದಲೇ ರಾಜ್ಯ ಸರ್ಕಾರಿ ನೌಕರರಿಗೆ (Government employees) ಭರ್ಜರಿ ಸುದ್ದಿಯೊಂದು ಸಿಕ್ಕಿದೆ. ಕರ್ನಾಟಕ ರಾಜ್ಯ ಸರ್ಕಾರ ಇದೀಗ ನೌಕರರಿಗೆ ಮತ್ತು ನಿವೃತ್ತಿ ವೇತನದಾರರಿಗೆ ಸಂತಸದ ಸುದ್ದಿ ಕೊಟ್ಟಿದ್ದು, ತುಟ್ಟಿಭತ್ಯೆ (TADA) ದರ ಶೇಕಡಾ 12.25 ರಿಂದ ಶೇಕಡಾ 14.25ಕ್ಕೆ ಹೆಚ್ಚಳ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. 2025ರ ಜುಲೈ 1 ರಿಂದ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಿರುವ ಸರ್ಕಾರ, ದೀಪಾವಳಿ ಹಬ್ಬದ (Deepavali festival) ಸಮಯದಲ್ಲೇ ಸಿಹಿ ಸಂದೇಶವನ್ನು ನೌಕರರಿಗೆ ನೀಡಿದೆ.
ರಾಜ್ಯದ ಸರ್ಕಾರಿ ನೌಕರರು ಮತ್ತು ನಿವೃತ್ತಿ ವೇತನದಾರರು ಸೇರಿದಂತೆ ಕುಟುಂಬ ನಿವೃತ್ತಿ ವೇತನದಾರರ ಜೊತೆಗೆ ಸರ್ಕಾರದಿಂದ ಸಹಾಯಧನ ಪಡೆಯುವ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಕೂಡ ಈ ಆದೇಶದಿಂದ ಪ್ರಯೋಜನ ಸಿಗಲಿದೆ. ಹಲವು ದಿನಗಳಿಂದ ಕರ್ನಾಟಕ ಸರ್ಕಾರಿ ನೌಕರರು ತುಟ್ಟಿಭತ್ಯೆ (ಡಿಎ) ಹೆಚ್ಚಳಕ್ಕೆ ಕಾಯುತ್ತಾ ಕೂತಿದ್ದರು. ಈ ಬಗ್ಗೆ ಸರ್ಕಾರ ಕೂಡ ಹಲವು ಸುತ್ತಿನ ಸಭೆಗಳನ್ನು ನಡೆಸಿತ್ತು.
ಇದೀಗ ಅಂತಿಮ ನಿರ್ಧಾರದಲ್ಲಿ ತುಟ್ಟಿಭತ್ಯೆ (ಡಿಎ) ದರವನ್ನು ಶೇಕಡಾ 12.25 ರಿಂದ ಶೇಕಡಾ 14.25ಕ್ಕೆ ಹೆಚ್ಚಳ ಮಾಡಲಾಗಿದೆ. ಇದು ಸರ್ಕಾರಿ ನೌಕರರಿಗೆ ಸಂತಸ ತಂದಿದೆ. ಕೇಂದ್ರ ಸರ್ಕಾರ ಕೂಡ ವೇತನ ಹೆಚ್ಚಳ ವಿಚಾರದಲ್ಲಿ ಕೆಲವು ದಿನಗಳ ಹಿಂದೆ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡಿತ್ತು, ಇದೀಗ ರಾಜ್ಯ ಸರ್ಕಾರಿ ನೌಕರರ ಪಾಲಿಗೂ ದೀಪಾವಳಿ ಸಿಹಿಯಾಗಲಿದೆ.