ಬೆಂಗಳೂರು: ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳ (ಎಸ್‌ಸಿ) ಒಳಮೀಸಲಾತಿ ವರದಿಯನ್ನು ಸ್ವೀಕರಿಸಿದ್ದು, ಈ ಕುರಿತು ಚರ್ಚಿಸಲು ಆಗಸ್ಟ್ 16 ರಂದು ವಿಶೇಷ ಸಂಪುಟ ಸಭೆಯನ್ನು ಕರೆದಿದೆ. ಅಲ್ಲದೆ, ಮತ್ತೊಮ್ಮೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ನಡೆಸಲು ನಿರ್ಧರಿಸಿದೆ.
ಪರಿಶಿಷ್ಟ ಜಾತಿ ಒಳಮೀಸಲಾತಿ ವರದಿ ಸ್ವೀಕಾರ
ರಾಜ್ಯ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ ಅವರ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತು ಆಯೋಗವನ್ನು ನೇಮಿಸಿತ್ತು. ಈ ಆಯೋಗವು ಶೇ 95 ರಷ್ಟು ಸಮುದಾಯದ ಜನಸಂಖ್ಯೆಯನ್ನು ಸಮೀಕ್ಷೆ ಮಾಡಿ, ವೈಜ್ಞಾನಿಕ ವರದಿಯನ್ನು ಸಲ್ಲಿಸಿದೆ. ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರು ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, “ಸದರಿ ವರದಿಯನ್ನು ಎಲ್ಲ ಸಚಿವರಿಗೆ ನೀಡಲಾಗಿದೆ. ಸಂಪುಟ ವರದಿಯನ್ನು ಸ್ವೀಕರಿಸಿದೆ. ಈ ಬಗ್ಗೆ ಅಧ್ಯಯನ ಮಾಡಿ ಆಗಸ್ಟ್ 16 ರಂದು ವಿಶೇಷ ಸಂಪುಟ ಸಭೆಯನ್ನು ಕರೆದು ಚರ್ಚಿಸಿ ನಿರ್ಣಯವನ್ನು ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.
ಮತ್ತೊಮ್ಮೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ)
ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ, 2015 ರಲ್ಲಿ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು (ಜಾತಿ ಗಣತಿ) ನಡೆಸಲಾಗಿತ್ತು. ಆದರೆ, ಆ ವರದಿಯನ್ನು ಈವರೆಗೆ ಬಹಿರಂಗಪಡಿಸಿಲ್ಲ. ಇದೀಗ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಮತ್ತೊಮ್ಮೆ ಸಮೀಕ್ಷೆ ಕೈಗೊಳ್ಳಲು ಸಂಪುಟ ನಿರ್ಧರಿಸಿದೆ.
- ಡಿಜಿಟಲ್ ಸಮೀಕ್ಷೆ: ಸಮೀಕ್ಷೆಯನ್ನು ಡಿಜಿಟಲ್ ಮಾದರಿಯಲ್ಲಿ ನಡೆಸಲಾಗುವುದು. ಇದಕ್ಕಾಗಿ ತಂತ್ರಾಂಶ ಅಭಿವೃದ್ಧಿ ಮತ್ತು ಉಸ್ತುವಾರಿಯನ್ನು ಇ-ಆಡಳಿತ ಇಲಾಖೆ ಕೈಗೊಳ್ಳಲಿದೆ.
- ಆಧಾರ್ ದೃಢೀಕರಣ: ಸಮೀಕ್ಷೆಯಲ್ಲಿ ನಮೂದಿಸಲಾಗುವ 6 ವರ್ಷ ಮೇಲ್ಪಟ್ಟ ಪ್ರತಿ ವ್ಯಕ್ತಿಯ ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಲಾಗಿದೆ.
- ಮತದಾರರ ಪಟ್ಟಿ ಬಳಕೆ: ನ್ಯಾ. ನಾಗಮೋಹನ್‌ದಾಸ್ ವರದಿಗೆ ಚುನಾವಣಾ ಮತದಾರರ ಪಟ್ಟಿಯನ್ನು ಬಳಸಿದಂತೆ, ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಗೂ ಸಾರ್ವಜನಿಕವಾಗಿ ಲಭ್ಯವಿರುವ ಚುನಾವಣಾ ಮತದಾರರ ಪಟ್ಟಿಯನ್ನು ಬಳಸಲಾಗುವುದು. ಸಮೀಕ್ಷಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಆಯೋಗದ ಮೇಲುಸ್ತುವಾರಿಯಲ್ಲಿ ಅಧಿಕಾರಿಗಳು, ಶಿಕ್ಷಕರು ಹಾಗೂ ಇತರೆ ಸಿಬ್ಬಂದಿಗಳು ಕೆಲಸ ಮಾಡಲಿದ್ದಾರೆ.
ಇತರ ಸಂಪುಟ ನಿರ್ಧಾರಗಳು
2021-22ನೇ ಸಾಲಿನ RIDF ಟ್ರಾಂಚ್-27ರಡಿ ನಬಾರ್ಡ್‌ನಿಂದ ಅನುಮೋದನೆಗೊಂಡ ಕೃಷಿ ಇಲಾಖೆಯ 13 ಶೀತಲ ಘಟಕಗಳ ನಿರ್ಮಾಣ ಕಾಮಗಾರಿಗಳ ₹171.91 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಹೆಚ್ಚುವರಿ ಮೊತ್ತ ₹47.81 ಕೋಟಿಗಳನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕದಿಂದ ಭರಿಸಲು ಸಂಪುಟ ನಿರ್ಧರಿಸಿದೆ.
ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಸೌಲಭ್ಯ
ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲು ನಿಬಂಧನೆ ಮತ್ತು ಷರತ್ತುಗಳು) (ಕಾಲೇಜು ಶಿಕ್ಷಣ) (ತಿದ್ದುಪಡಿ) ನಿಯಮಗಳಿಗೆ ತಿದ್ದುಪಡಿ ಮೂಲಕ ಮುಸ್ಲಿಂಯೇತರ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಆಯಾ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳ ಸಂಖ್ಯೆ ಶೇ.50 ರಷ್ಟು ಕಡ್ಡಾಯವಾಗಿ ಹೊಂದಿರಬೇಕೆಂಬ ನಿಯಮವನ್ನು ತೆಗೆದುಹಾಕಲು ಸಚಿವ ಸಂಪುಟ ನಿರ್ಣಯಿಸಿದೆ
ಕಾರ್ಮಿಕ ರಾಜ್ಯ ವಿಮಾ ಸೊಸೈಟಿ ಸ್ಥಾಪನೆ
ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳು ಇಲಾಖೆಯನ್ನು ESI ಮಾರ್ಗಸೂಚಿಗಳನ್ವಯ “ಸೊಸೈಟಿ ನೋಂದಣಿ ಕಾಯ್ದೆ 1860” ಅಡಿಯಲ್ಲಿ ನೋಂದಾಯಿಸಿ “ಕರ್ನಾಟಕ ಕಾರ್ಮಿಕರ ರಾಜ್ಯ ವಿಮಾ ಸೊಸೈಟಿ” ಯನ್ನಾಗಿ ರೂಪಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ವರದಾ ನದಿಗೆ ನೀರು ತುಂಬಿಸುವ ಯೋಜನೆ
ಹಾವೇರಿ ಜಿಲ್ಲೆ, ಹಾನಗಲ್ಲ ತಾಲ್ಲೂಕಿನ ವರದಾ ನದಿಯಿಂದ ನೆರೆಗಲ್ ಹಾಗೂ ಕುಸನೂರ ಏತ ನೀರಾವರಿ ಮುಖಾಂತರ 111 ಕೆರೆಗಳನ್ನು ತುಂಬಿಸುವ ಯೋಜನೆಯನ್ನು ರೂ.220.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ.