ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ 15 ವರ್ಷಗಳ ಆಡಳಿತವು ಬೃಹತ್ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ನಡುವೆ ಪತನಗೊಂಡು 18 ತಿಂಗಳು ಕಳೆದಿರುವ ಹಿನ್ನೆಲೆ, ಬಾಂಗ್ಲಾದೇಶದಲ್ಲಿ ಇಂದು ಮಹತ್ವದ ಸಂಸದೀಯ ಚುನಾವಣೆ ನಡೆಯುತ್ತಿದೆ.
ಶೇಖ್ ಹಸೀನಾ ಸರ್ಕಾರ ಪತನಗೊಂಡ ನಂತರ ದೇಶದಲ್ಲಿ ಮಧ್ಯಂತರ ಸರ್ಕಾರ ಅಧಿಕಾರ ವಹಿಸಿಕೊಂಡಿತ್ತು. ಈ ಅವಧಿಯಲ್ಲಿ ನಿರಂತರ ಪ್ರತಿಭಟನೆಗಳು, ಕಠಿಣ ಇಸ್ಲಾಮಿಕ್ ಗುಂಪುಗಳ ದಂಗೆ, ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಮತ್ತು ವಿದೇಶಾಂಗ ನೀತಿಯಲ್ಲಿನ ಪ್ರಮುಖ ಬದಲಾವಣೆಗಳು ನಡೆದಿವೆ. ಬಾಂಗ್ಲಾದೇಶವು ಈ ಅವಧಿಯಲ್ಲಿ ಭಾರತದಿಂದ ದೂರ ಸರಿದು, ಪಾಕಿಸ್ತಾನ ಮತ್ತು ಚೀನಾಕ್ಕೆ ಹೆಚ್ಚು ಸಮೀಪವಾಗಿದೆ ಎಂಬ ವಿಶ್ಲೇಷಣೆಗಳು ವ್ಯಕ್ತವಾಗಿವೆ.
ಈಗ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಇದರಿಂದ ದೇಶದ ರಾಜಕೀಯ ಮತ್ತು ವಿದೇಶಾಂಗ ನೀತಿಯಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸುವ ನಿರೀಕ್ಷೆಯಿದೆ. ಬಹುತೇಕ ವೀಕ್ಷಕರು ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ (ಬಿಎನ್‌ಪಿ) ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚು ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಿಎನ್‌ಪಿ ಸ್ಥಾಪಕಿ ಖಲೀದಾ ಜಿಯಾ ಅವರ ಇತ್ತೀಚಿನ ನಿಧನದ ನಂತರ, ಪಕ್ಷದ ನೇತೃತ್ವವನ್ನು ಅವರ ಪುತ್ರ ತಾರಿಕ್ ರೆಹಮಾನ್ ವಹಿಸಿಕೊಂಡಿದ್ದು, ಅವರು ಪ್ರಧಾನಿ ಹುದ್ದೆಗೆ ಪ್ರಮುಖ ಮುಂಚೂಣಿ ಅಭ್ಯರ್ಥಿಯಾಗಿದ್ದಾರೆ.
ಬಿಎನ್‌ಪಿಗೆ ಪ್ರಮುಖ ಸವಾಲಾಗಿ ಬಾಂಗ್ಲಾದೇಶ ಜಮಾತ್-ಎ-ಇಸ್ಲಾಮಿ ಪಕ್ಷ ಹೊರಹೊಮ್ಮಿದ್ದು, ಇದು ಹಿಂದೆ ಬಿಎನ್‌ಪಿಯ ಮಿತ್ರ ಪಕ್ಷವಾಗಿತ್ತು. ವೀಕ್ಷಕರ ಪ್ರಕಾರ ಬಿಎನ್‌ಪಿ ಗೆಲುವು ಸಾಧ್ಯವಾಗಿದ್ದರೂ, ಈ ಚುನಾವಣೆಯಲ್ಲಿ ಜಮಾತ್ ತನ್ನ ಇತಿಹಾಸದಲ್ಲೇ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ.
ಇದನ್ನೆಲ್ಲದೆ, ಕಳೆದ ವರ್ಷ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ, ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರು ಅವಾಮಿ ಲೀಗ್ ಪಕ್ಷವನ್ನು ವಿಸರ್ಜಿಸಿ, ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಿದ್ದಾರೆ.
