ವಾಷಿಂಗ್ಟನ್: ಅಮೆರಿಕಾದ ಹೋಟೆಲೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅಪಘಾತದಲ್ಲಿ, ಅಲ್ಲಿಯೇ ಕೆಲಸ ಮಾಡಿಕೊಂಡಿದ್ದ ಗುಜರಾತ್ ಮೂಲದ ದಂಪತಿ ಹಾಗೂ ಅವರ ಮಗಳು ಸಾವನ್ನಪ್ಪಿದ್ದಾರೆ.
ಈ ದುಃಖದ ಸುದ್ದಿ ತಿಳಿಯುತ್ತಿದ್ದಂತೆ ಗುಜರಾತ್‌ನಲ್ಲಿರುವ ಅವರ ಕುಟುಂಬಸ್ಥರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಗುಜರಾತ್‌ನ ಖೇಡಾ ಜಿಲ್ಲೆಯ ನಾಡಿಯಾಡ್ ಮೂಲದ ಹಿತೇಶ್‌ಭಾಯ್ ಸುತಾರ್, ಅವರ ಪತ್ನಿ ಹಿನಾಬೆನ್ ಮತ್ತು 20 ವರ್ಷದ ಮಗಳು ಇಶಾನಿ ಎರಡು ವರ್ಷಗಳ ಹಿಂದೆಯಷ್ಟೇ ಅಮೆರಿಕಾದಲ್ಲಿ ನೆಲೆಸಿದ್ದರು. ಓಹಿಯೋದಲ್ಲಿರುವ ‘ಎಕಾನೋ ಲಾಡ್ಜ್’ (Econo Lodge) ನಲ್ಲಿ ಹಿತೇಶ್‌ಭಾಯ್ ಕೆಲಸ ಮಾಡುತ್ತಿದ್ದರಿಂದ ಈ ಕುಟುಂಬವು ಅಲ್ಲಿಯೇ ವಾಸವಾಗಿತ್ತು.
ಗುರುವಾರ ಮುಂಜಾನೆ ಈ ಹೋಟೆಲ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿಯೇ ಇದ್ದ ಹಿತೇಶ್‌ಭಾಯ್ ಕುಟುಂಬಸ್ಥರು ಬೆಂಕಿಯ ಜ್ವಾಲೆಯನ್ನು ಕಂಡು ತೀವ್ರ ಆತಂಕಗೊಂಡಿದ್ದಾರೆ. ತಕ್ಷಣವೇ ಸಹಾಯಕ್ಕಾಗಿ ಲಾಡ್ಜ್‌ನ ಫ್ರಂಟ್ ಡೆಸ್ಕ್‌ಗೆ ಫೋನ್ ಮಾಡಿ, ತಮ್ಮನ್ನು ಬದುಕಿಸುವಂತೆ ವಿನಂತಿಸಿದ್ದಾರೆ. ಹಿತೇಶ್‌ಭಾಯ್ ಅವರೊಂದಿಗೆ ಮಾತನಾಡಿದ ಸಿಬ್ಬಂದಿ, ಸುರಕ್ಷತೆಗಾಗಿ ಬಾತ್‌ರೂಮ್ ಒಳಗೆ ಇರುವಂತೆ ಹಾಗೂ ನೀರಿನ ನಳವನ್ನು ಆನ್ ಮಾಡಿ ಇಡುವಂತೆ ಸಲಹೆ ನೀಡಿದ್ದಾನೆ. ತದನಂತರ ಆತ ತುರ್ತು ಸೇವೆಗಳ ನಂಬರ್‌ಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ.
ಮತ್ತೊಂದೆಡೆ, ಅಗ್ನಿಶಾಮಕ ದಳದ ಸಿಬ್ಬಂದಿ ಹೋಟೆಲ್ ಸ್ಥಳಕ್ಕೆ ಧಾವಿಸಿ, ಹಲವು ಗಂಟೆಗಳ ಕಾಲ ಶ್ರಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಬಾತ್‌ರೂಮ್ ಒಳಗಿದ್ದ ಹಿತೇಶ್‌ಭಾಯ್ ಕುಟುಂಬವನ್ನು ರಕ್ಷಿಸಲು ಪ್ರಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಬಾತ್‌ರೂಮ್‌ನಲ್ಲಿ ದಟ್ಟವಾಗಿ ಕಾವಳದಂತೆ ಕವಿದಿದ್ದ ಹೊಗೆಯಿಂದಾಗಿ ಉಸಿರುಗಟ್ಟಿ ಮೂವರೂ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವುದಾಗಿ ತಿಳಿಸಿರುವ ಅಧಿಕಾರಿಗಳು, ಹಿತೇಶ್‌ಭಾಯ್, ಅವರ ಪತ್ನಿ ಮತ್ತು ಮಗಳ ಸಾವಿನ ಸುದ್ದಿಯನ್ನು ಗುಜರಾತ್‌ನಲ್ಲಿರುವ ಅವರ ಸಂಬಂಧಿಕರಿಗೆ ತಲುಪಿಸಿದ್ದಾರೆ.
