ಹೊಸದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಲುಷಿತಗೊಂಡಿರುವ ಯಮುನಾ ನದಿಯಲ್ಲಿ ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ ಸ್ನಾನ ಮಾಡಿದರು.
2025ರ ವೇಳೆಗೆ ನದಿ ಸ್ವಚ್ಛಗೊಳಿಸುವ ಭರವಸೆ ನೀಡಿದ್ದ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ವೈಫಲ್ಯವನ್ನು ಟೀಕಿಸಿದರು. ಎಎಪಿ ಸರ್ಕಾರ ನದಿ ಶುದ್ಧೀಕರಣಕ್ಕೆ ಮೀಸಲಿಟ್ಟ ಹಣವನ್ನು ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ ನಡೆಸುತ್ತಿದೆ ಎಂದು ವೀರೇಂದ್ರ ಸಚ್‌ದೇವ ಆರೋಪಿಸಿದ್ದಾರೆ. ಇದಕ್ಕೆ ಕ್ಷಮೆಯಾಚಿಸುವಂತೆ ಗುರುವಾರ ಐಟಿಒ ಬಳಿಯ ಯಮುನಾ ಘಾಟ್‌ನಲ್ಲಿ ಮುಳುಗಿ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಕಲುಷಿತ ಯಮುನಾ ನದಿಯಲ್ಲಿ ಸ್ನಾನ ಮಾಡಿ ವೀರೇಂದ್ರ ಸಚ್‌ದೇವ ಅಸ್ವಸ್ಥರಾದರು. ತೀವ್ರ ತುರಿಕೆ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷಿಸಿದ ವೈದ್ಯರು ವೀರೇಂದ್ರ ಸಚ್‌ದೇವ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಮತ್ತೊಂದೆಡೆ, ಇದೆಲ್ಲವೂ ಬಿಜೆಪಿಯ ನಾಟಕ ಎಂದು ದೆಹಲಿ ಪರಿಸರ ಸಚಿವ ಮತ್ತು ಹಿರಿಯ ಎಎಪಿ ನಾಯಕ ಗೋಪಾಲ್ ರಾಯ್ ಟೀಕಿಸಿದ್ದಾರೆ. ಉತ್ತರ ಪ್ರದೇಶ ಮತ್ತು ಹರಿಯಾಣದ ಬಿಜೆಪಿ ಸರ್ಕಾರಗಳು ಯಮುನಾ ನದಿಯನ್ನು ಸಂಸ್ಕರಿಸದ ಕೈಗಾರಿಕಾ ತ್ಯಾಜ್ಯ ನೀರಿನಿಂದ ಕಲುಷಿತಗೊಳಿಸಿವೆ ಎಂದು ಅವರು ಆರೋಪಿಸಿದ್ದಾರೆ.