ದೆಹಲಿ ಗಲಭೆ ಪ್ರಕರಣ: ಸೋದರಸಂಬಂಧಿಗಳ ಮದುವೆಯಲ್ಲಿ ಭಾಗವಹಿಸಲು ಶರ್ಜಿಲ್ ಇಮಾಮ್‌ಗೆ ಏಳು ದಿನಗಳ ಮಧ್ಯಂತರ ಜಾಮೀನು ನೀಡಿದ ದೆಹಲಿ ನ್ಯಾಯಾಲಯ

ದೆಹಲಿ: 2020ರ ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದ ಬೃಹತ್ ಸಂಚು ಪ್ರಕರಣದಲ್ಲಿ ಬಂಧನದಲ್ಲಿರುವ ಕಾರ್ಯಕರ್ತ ಶರ್ಜಿಲ್ ಇಮಾಮ್‌ಗೆ ದೆಹಲಿ ಮತ್ತು ಬಿಹಾರದಲ್ಲಿ ನಡೆಯಲಿರುವ ಇಬ್ಬರು ಸೋದರಸಂಬಂಧಿಗಳ ವಿವಾಹ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ದೆಹಲಿ ನ್ಯಾಯಾಲಯವು ಮಂಗಳವಾರ ಏಳು ದಿನಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಕರ್ಕಾರ್‌ಡೂಮಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜಪೇಯಿ ಅವರು ಅಕ್ಟೋಬರ್ 4 ರಿಂದ ಅಕ್ಟೋಬರ್ 10 ರವರೆಗೆ ಇಮಾಮ್‌ಗೆ ಮಧ್ಯಂತರ ಜಾಮೀನಿನಲ್ಲಿ ಹೊರಗಿರಲು ಅನುಮತಿ ನೀಡಿದ್ದಾರೆ. ಅಕ್ಟೋಬರ್ 10 ರ ಸಂಜೆ ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ಆದೇಶಿಸಲಾಗಿದೆ. 50,000 ರೂಪಾಯಿಗಳ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಒಬ್ಬರ ಭದ್ರತಾ ಖಾತರಿ ಒದಗಿಸುವ ಷರತ್ತಿಗೆ ಒಳಪಟ್ಟು ಈ ಪರಿಹಾರ ನೀಡಲಾಗಿದೆ.

ಮಧ್ಯಂತರ ಬಿಡುಗಡೆಯ ಅವಧಿಯಲ್ಲಿ ನ್ಯಾಯಾಲಯವು ಹಲವು ಕಠಿಣ ನಿರ್ಬಂಧಗಳನ್ನು ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿ ಅಥವಾ ಸಾಕ್ಷಿಗಳನ್ನು ಸಂಪರ್ಕಿಸಬಾರದು, ಸಾಮಾಜಿಕ ಜಾಲತಾಣಗಳನ್ನು ಬಳಸಬಾರದು ಮತ್ತು ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಇತರ ಯಾರನ್ನೂ ಭೇಟಿಯಾಗಬಾರದು ಎಂದು ಷರತ್ತು ವಿಧಿಸಲಾಗಿದೆ. ಇದು ಮಧ್ಯಂತರ ಜಾಮೀನಿಗಾಗಿ ಇಮಾಮ್ ಸಲ್ಲಿಸಿರುವ ಎರಡನೇ ಅರ್ಜಿಯಾಗಿದ್ದು, ನಿಕಟ ಸಂಬಂಧಿಗಳ ಮದುವೆಗೆ ಹಾಜರಾಗಲು ಅನುಮತಿ ಕೋರಿದ್ದಾರೆ ಎಂಬುದನ್ನು ನ್ಯಾಯಾಲಯ ಪರಿಗಣಿಸಿದೆ.

ವಕೀಲರಾದ ಅಹ್ಮದ್ ಇಬ್ರಾಹಿಂ ಮತ್ತು ಆಯೇಶಾ ಜೈದಿ ಅವರ ಮೂಲಕ ಅರ್ಜಿ ಸಲ್ಲಿಸಿದ್ದ ಶರ್ಜಿಲ್ ಇಮಾಮ್, ಡ್ಯಾನಿಶ್ ಇಮಾಮ್ ಮತ್ತು ಫಹಾದ್ ಇಮಾಮ್ ಅವರ ವಿವಾಹ ಸಮಾರಂಭಗಳಲ್ಲಿ ಭಾಗವಹಿಸಲು ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 13 ರವರೆಗೆ ಎರಡು ವಾರಗಳ ಕಾಲ ಮಧ್ಯಂತರ ಜಾಮೀನು ಕೋರಿದ್ದರು. ಅರ್ಜಿಯ ಪ್ರಕಾರ ಒಂದು ಮದುವೆ ಅಕ್ಟೋಬರ್ 4 ರಂದು ದೆಹಲಿಯಲ್ಲಿ ಹಾಗೂ ಎರಡನೇ ಮದುವೆ ಅಕ್ಟೋಬರ್ 7 ರಂದು ಬಿಹಾರದ ಸಸಾರಾಮ್‌ನಲ್ಲಿ ನಡೆಯಲಿದೆ. ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಮದುವೆಯ ವಿವರಗಳನ್ನು ದೃಢಪಡಿಸಿದ್ದರು.

ವಿಶೇಷ ಸಾರ್ವಜನಿಕ ಅಭಿಯೋಜಕ ಅನಿರುದ್ಧ ಮಿಶ್ರಾ ಅವರು ಈ ಜಾಮೀನು ಅರ್ಜಿಯನ್ನು ಬಲವಾಗಿ ವಿರೋಧಿಸಿದರು. ಇಮಾಮ್ ಮೇಲಿರುವ ಆರೋಪಗಳ ಗಂಭೀರತೆ ಮತ್ತು ಈ ಹಿಂದೆ ಅವರ ನಿಯಮಿತ ಜಾಮೀನು ಅರ್ಜಿಗಳು ತಿರಸ್ಕೃತಗೊಂಡಿರುವುದನ್ನು ಉಲ್ಲೇಖಿಸಿದ ಪ್ರಾಸಿಕ್ಯೂಷನ್, ಮದುವೆಗೆ ಇವರ ಉಪಸ್ಥಿತಿ ಅಥವಾ ಆರ್ಥಿಕ ನೆರವು ಅನಿವಾರ್ಯವಲ್ಲ ಎಂದು ವಾದಿಸಿತು.

2020ರ ಫೆಬ್ರವರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲಿ ಭುಗಿಲೆದ್ದು 50ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ ಈಶಾನ್ಯ ದೆಹಲಿ ಗಲಭೆಯ ಹಿಂದಿನ ಸಂಚಿನ ಆರೋಪವನ್ನು ಶರ್ಜಿಲ್ ಇಮಾಮ್ ಎದುರಿಸುತ್ತಿದ್ದಾರೆ. ಇವರ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ನಿಯಮಿತ ಜಾಮೀನು ಅರ್ಜಿ ಪ್ರಸ್ತುತ ದೆಹಲಿ ಹೈಕೋರ್ಟ್‌ನಲ್ಲಿದೆ.

Related Articles

ಇತ್ತೀಚಿನ ಸುದ್ದಿಗಳು