ಎಸ್‌ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಪ್ರಕರಣ: ಯೂಟ್ಯೂಬರ್ ಅಜಿತ್ ಭಾರತಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ದೆಹಲಿ ಕೋರ್ಟ್

ದೆಹಲಿ: ಮೀಸಲಾತಿ ವಿರುದ್ಧ ಧ್ವನಿ ಎತ್ತುತ್ತಿರುವ ಯೂಟ್ಯೂಬರ್ ಮತ್ತು ನಿರೂಪಕ ಅಜಿತ್ ಭಾರತಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ (SC/ST Act) ದಾಖಲಾಗಿರುವ ಪ್ರಕರಣದಲ್ಲಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ದೆಹಲಿ ನ್ಯಾಯಾಲಯ ಸೋಮವಾರ ನಿರಾಕರಿಸಿದೆ.

ನಗೀನಾ ಕ್ಷೇತ್ರದ ಸಂಸದ ಚಂದ್ರಶೇಖರ್ ಆಜಾದ್ ನೇತೃತ್ವದ ಆಜಾದ್ ಸಮಾಜ್ ಪಾರ್ಟಿ (ಕಾನ್ಶಿ ರಾಮ್) ದೆಹಲಿ ಘಟಕದ ಅಧ್ಯಕ್ಷರು ನೀಡಿದ ದೂರಿನ ಮೇರೆಗೆ, ಆಗಸ್ಟ್ ತಿಂಗಳಲ್ಲಿ ದೆಹಲಿಯ ನಾರ್ತ್ ಅವೆನ್ಯೂ ಪೊಲೀಸ್ ಠಾಣೆಯಲ್ಲಿ ಅಜಿತ್ ಭಾರತಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಆಗಸ್ಟ್ 22ರಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದ ‘ಎಸ್‌ಬಿ79: ರಿಸರ್ವೇಷನ್ ಹಟಾವೋ ಆಂದೋಲನ್ ನೌಟಂಕಿ & ಮೋರ್’ ಎಂಬ ವಿಡಿಯೋ ಕಾರ್ಯಕ್ರಮದಲ್ಲಿ ಜಾತಿ ನಿಂದನೆ, ಅಶ್ಲೀಲ ಹಾಗೂ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂಬುದು ಅವರ ಮೇಲಿರುವ ಆರೋಪವಾಗಿದೆ.

ಆದರೆ ಈ ಆರೋಪಗಳನ್ನು ನಿರಾಕರಿಸಿದ್ದ ಅಜಿತ್ ಭಾರತಿ, ತಾವು ಚಂದ್ರಶೇಖರ್ ಆಜಾದ್ ವಿರುದ್ಧ ಯಾವುದೇ ಜಾತಿ ನಿಂದನೆಯ ಪದಗಳನ್ನು ಬಳಸಿರಲಿಲ್ಲ; ರಾಜಕೀಯ ಒತ್ತಡದಿಂದ ಈ ಎಫ್‌ಐಆರ್ ದಾಖಲಿಸಲಾಗಿದ್ದು, ನ್ಯಾಯಾಲಯದಲ್ಲಿ ಎರಡು ನಿಮಿಷವೂ ಈ ಕೇಸ್ ನಿಲ್ಲುವುದಿಲ್ಲ ಎಂದು ಹೇಳಿಕೊಂಡಿದ್ದರು. ಅತ್ತ ವಿಚಾರಣೆ ವೇಳೆ ದೆಹಲಿ ಪೊಲೀಸರು, ಕೇವಲ ಎಫ್‌ಐಆರ್ ದಾಖಲಾದ ಮಾತ್ರಕ್ಕೆ ಆರೋಪಿಯನ್ನು ತಕ್ಷಣವೇ ಬಂಧಿಸಲಾಗುವುದು ಎಂದರ್ಥವಲ್ಲ ಎಂದು ಕೋರ್ಟ್‌ಗೆ ತಿಳಿಸಿದ್ದರು.ಆದಾಗ್ಯೂ, ಅರ್ಜಿ ವಿಚಾರಣೆ ನಡೆಸಿದ ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಭಾರತಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು