ಸಂಸದ ಚಂದ್ರಶೇಖರ್ ಆಜಾದ್ ವಿರುದ್ಧ ಜಾತಿ ನಿಂದನೆ: ಯೂಟ್ಯೂಬರ್ ಅಜೀತ್ ಭಾರತಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ

ನಗೀನಾ ಕ್ಷೇತ್ರದ ಲೋಕಸಭಾ ಸಂಸದ ಹಾಗೂ ದಲಿತ ಮುಖಂಡ ಚಂದ್ರಶೇಖರ್ ಆಜಾದ್ ವಿರುದ್ಧ ಜಾತಿ ನಿಂದನೆ ಮತ್ತು ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ, ಯೂಟ್ಯೂಬರ್ ಅಜೀತ್ ಭಾರತಿಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಭಾರತೀಯ ಸಮಾಜದಲ್ಲಿ ಜಾತಿ ಶ್ರೇಣೀಕರಣ, ಜಾತಿ ಆಧಾರಿತ ಪಾವಿತ್ರ್ಯತೆ ಮತ್ತು ವಿವಾಹ ವಿಚಾರದಲ್ಲಿ ಮೇಲ್ಜಾತಿಯ ಶ್ರೇಷ್ಠತೆಯ ಕಲ್ಪನೆಗಳನ್ನು ಅವರ ಹೇಳಿಕೆಗಳು ಮೇಲ್ನೋಟಕ್ಕೆ ಎತ್ತಿಹಿಡಿದಿರುವುದು ಕಂಡುಬಂದಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ವಿಶೇಷ ನ್ಯಾಯಾಧೀಶ (ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ) ಸೌರಭ್ ಪ್ರತಾಪ್ ಸಿಂಗ್ ಲಾಲೆರ್ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಯೂಟ್ಯೂಬ್ ಲೈವ್‌ಸ್ಟ್ರೀಮ್ ಕಾರ್ಯಕ್ರಮವೊಂದರಲ್ಲಿ ವೀಕ್ಷಕನೊಬ್ಬ, “ನಿಮ್ಮ ಸಹೋದರಿಯನ್ನು ಸಂಸದ ಚಂದ್ರಶೇಖರ್ ಆಜಾದ್ ಅವರಿಗೆ ವಿವಾಹ ಮಾಡಿಕೊಟ್ಟರೆ ಜಾತಿ ಆಧಾರಿತ ಮೀಸಲಾತಿ ಕೊನೆಗೊಳ್ಳುತ್ತದೆ” ಎಂದು ಕಮೆಂಟ್ ಮಾಡಿದ್ದಕ್ಕೆ ಅಜೀತ್ ಭಾರತಿ ಪ್ರತಿಕ್ರಿಯಿಸಿದ್ದರು.

ಈ ವೇಳೆ ಅವರು ಜಾತಿ ಸೂಚಕ ಪದಗಳನ್ನು ಬಳಸಿ, ಸಂಸದ ಆಜಾದ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೆ, ಮೇಲ್ಜಾತಿಯ ಮಹಿಳೆಯನ್ನು ವಿವಾಹವಾಗಲು ಆಜಾದ್ ಮೊದಲು “ಯೋಗ್ಯತೆ” (ಅರ್ಹತೆ) ಗಳಿಸಬೇಕು ಎಂದು ಹೇಳಿಕೆ ನೀಡಿದ್ದರು ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ಈ ಹೇಳಿಕೆಯನ್ನು ತೀವ್ರವಾಗಿ ಪರಿಗಣಿಸಿದ ನ್ಯಾಯಾಲಯ, “ಎಸ್‌ಸಿ ಅಥವಾ ಎಸ್‌ಟಿ ಸಮುದಾಯದಲ್ಲಿ ವಿವಾಹವಾಗಲು ಅರ್ಹನಾಗಿರುವ ವ್ಯಕ್ತಿಯೊಬ್ಬ ಮೇಲ್ಜಾತಿಯ ಮಹಿಳೆಯನ್ನು ವಿವಾಹವಾಗಲು ‘ಹೆಚ್ಚುವರಿ ಅರ್ಹತೆ’ ಅಥವಾ ‘ಯೋಗ್ಯತೆ’ ಹೊಂದಿರಬೇಕು ಎಂದು ಹೇಳುವುದು ನೇರವಾಗಿ ಆತನ ಜಾತಿ ಗುರುತಿಗೆ ಸಂಬಂಧಿಸಿದ್ದಾಗಿದ್ದು, ಅಪಮಾನಕರವಾಗಿದೆ” ಎಂದು ಅಭಿಪ್ರಾಯಪಟ್ಟಿತು. ಹೀಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(1)(r) ಅಡಿಯಲ್ಲಿನ ಅಪರಾಧದ ಅಂಶಗಳು ಮೇಲ್ನೋಟಕ್ಕೆ ಸಾಬೀತಾಗುತ್ತವೆ ಎಂದು ನ್ಯಾಯಾಲಯ ಹೇಳಿದೆ.

ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 18 ರ ಪ್ರಕಾರ, ಕಾಯ್ದೆಯಡಿ ಅಪರಾಧವು ಮೇಲ್ನೋಟಕ್ಕೆ ಕಂಡುಬಂದಲ್ಲಿ ನಿರೀಕ್ಷಣಾ ಜಾಮೀನು ನೀಡಲು ಶಾಸನಬದ್ಧ ನಿರ್ಬಂಧವಿದೆ. ಭಾರತಿ ಪರ ವಕೀಲ ಜೈ ಅನಂತ್ ದೇಹದ್ರಾಯಿ ಅವರು, ಈ ಹೇಳಿಕೆಯು ತೀವ್ರ ಪ್ರಚೋದನೆಗೆ ನೀಡಿದ ಸಹಜ ಪ್ರತಿಕ್ರಿಯೆಯಷ್ಟೇ ಹಾಗೂ ಯಾರನ್ನೂ ಸಾರ್ವಜನಿಕವಾಗಿ ನಿಂದಿಸಿಲ್ಲ ಎಂದು ವಾದಿಸಿದರೂ, ಜಾತಿ ನಿಂದನೆಯ ಕಾರಣದಿಂದಾಗಿ ನ್ಯಾಯಾಲಯವು ಜಾಮೀನು ಅರ್ಜಿಯನ್ನು ವಜಾಗೊಳಿಸಿತು.

ಆದಾಗ್ಯೂ, ಈ ಪ್ರಕರಣದಲ್ಲಿ ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಅಗತ್ಯವಿಲ್ಲ ಮತ್ತು ಕೇವಲ ಎಸ್‌ಸಿ/ಎಸ್‌ಟಿ ಕಾಯ್ದೆಯ ಶಾಸನಬದ್ಧ ನಿಬಂಧನೆಗಳ ಕಾರಣದಿಂದಾಗಿಯೇ ಜಾಮೀನು ನಿರಾಕರಿಸಲಾಗಿದೆ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಇದು ಕೇವಲ ಜಾಮೀನು ಅರ್ಜಿಯ ತೀರ್ಮಾನವಾಗಿದ್ದು, ಭಾರತಿ ತಪ್ಪಿತಸ್ಥರೇ ಅಥವಾ ನಿರಪರಾಧಿಯೇ ಎಂಬುದಕ್ಕೆ ಅಂತಿಮ ತೀರ್ಪಲ್ಲ ಎಂದೂ ನ್ಯಾಯಾಲಯ ಉಲ್ಲೇಖಿಸಿದೆ. ಆಜಾದ್ ಸಮಾಜ ಪಾರ್ಟಿಯ ದೆಹಲಿ ಘಟಕದ ಅಧ್ಯಕ್ಷ ಬಾಲಕರಾಮ್ ಬೌದ್ಧ್ ನೀಡಿದ ದೂರಿನ ಮೇರೆಗೆ ದೆಹಲಿಯ ನಾರ್ತ್ ಅವೆನ್ಯೂ ಪೊಲೀಸ್ ಠಾಣೆಯಲ್ಲಿ ಈ ಎಫ್‌ಐಆರ್ ದಾಖಲಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು