ನಿಯಮಿತ ಆದಾಯದ ಮೂಲ ಇಲ್ಲ ಎಂಬ ನೆಪವನ್ನು ಒಡ್ಡಿ ಯಾವುದೇ ಪತಿ ತನ್ನ ಪತ್ನಿ ಮತ್ತು ಮಕ್ಕಳ ನಿರ್ವಹಣಾ ವೆಚ್ಚವನ್ನು ಪಾವತಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ತನ್ನ ಪತ್ನಿ ಮತ್ತು ಇಬ್ಬರು ಪುತ್ರಿಯರಿಗೆ ತಿಂಗಳಿಗೆ ಒಟ್ಟು 11,000 ರೂಪಾಯಿಗಳ ಭರಣವನ್ನು ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಸವಾಲು ಮಾಡಿ ಪತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ ಅವರ ಪೀಠವು ವಜಾಗೊಳಿಸಿದೆ.
ತಾವು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವುದರಿಂದ ತಮಗೆ ಯಾವುದೇ ಸ್ಥಿರ ಆದಾಯವಿಲ್ಲ ಎಂದು ಅರ್ಜಿದಾರರು ಕೋರ್ಟ್ ಮುಂದೆ ವಾದಿಸಿದ್ದರು. ಅಷ್ಟೇ ಅಲ್ಲದೆ, ತಾವು ಕ್ಷಯರೋಗ (ಟಿಬಿ) ಮತ್ತು ಹೃದಯ ರೋಗದಿಂದ ಬಳಲುತ್ತಿದ್ದು, ವಯಸ್ಸಾದ ತಾಯಿಯನ್ನು ನೋಡಿಕೊಳ್ಳಬೇಕಾಗಿದೆ ಹಾಗೂ ಪ್ರತಿ ತಿಂಗಳು ಸಾಲದ ಕಂತುಗಳನ್ನು ಪಾವತಿಸಬೇಕಾಗಿದೆ ಎಂದು ತಮ್ಮ ಸಂಕಷ್ಟಗಳನ್ನು ವಿವರಿಸಿದ್ದರು.
ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿರುವ ತಮ್ಮ ಪತ್ನಿ ಉದ್ಯೋಗ ಮಾಡುವ ಸಾಮರ್ಥ್ಯ ಹೊಂದಿದ್ದು, ಸ್ವಂತ ಖರ್ಚುಗಳನ್ನು ನಿಭಾಯಿಸಿಕೊಳ್ಳಬಲ್ಲರು ಎಂದೂ ಪತಿ ವಾದ ಮಂಡಿಸಿದ್ದರು. ಆದರೆ ಈ ಎಲ್ಲಾ ವಾದಗಳನ್ನು ತಳ್ಳಿಹಾಕಿರುವ ಹೈಕೋರ್ಟ್, ಪತಿಯಾದವನು ಕೋಟ್ಯಧಿಪತಿಯೇ ಆಗಿರಲಿ ಅಥವಾ ದಿನಗೂಲಿ ಕಾರ್ಮಿಕನೇ ಆಗಿರಲಿ, ತನ್ನ ಪತ್ನಿ ಮತ್ತು ಮಕ್ಕಳನ್ನು ಸಲಹುವ ಹಾಗೂ ಅವರಿಗೆ ಜೀವನಾಂಶ ನೀಡುವ ಮೂಲಭೂತ ಜವಾಬ್ದಾರಿಯಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
