ಹೊಸದಿಲ್ಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಗೆ ಸಲ್ಲಿಸಲಾಗಿದ್ದ ಒಟ್ಟು 2.585 ನಾಮಪತ್ರಗಳಲ್ಲಿ, ಸುಮಾರು 1,100 ನಾಮಪತ್ರಗಳನ್ನು ಇಲ್ಲಿನ ರಾಜ್ಯ ಚುನಾವಣಾ ಆಯೋಗ (ಡಿಎಸ್ಇಸಿ) ತಿರಸ್ಕರಿಸಿದೆ ಎಂದು ಮೂಲಗಳು ತಿಳಿಸಿವೆ.
ನವೆಂಬರ್ 14 ರವರೆಗೆ 15 ರಾಜಕೀಯ ಪಕ್ಷಗಳು ಮತ್ತು ಮಹಾನಗರ ಪಾಲಿಕೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಗಳಿಂದ ಒಟ್ಟು 2,585 ನಾಮಪತ್ರಗಳು ಸಲ್ಲಿಕೆಯಾಗಿದ್ದವು, ಈ ಕಾರಣ ಬುಧವಾರ ರಾತ್ರಿ 10 ಗಂಟೆಯವರೆಗೆ ಪರಿಶೀಲನೆ ನಡೆಸಿ, ನಾಮಪತ್ರಗಳನ್ನು ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.
ಮಾಹಿತಿ ಪ್ರಕಾರ, ಒಟ್ಟು ನಾಮಪತ್ರಗಳ ಪೈಕಿ 1,389 ನಾಮಪತ್ರಗಳನ್ನು ಮಾನ್ಯ ಮಾಡಲಾಗಿದ್ದು, ಸಂಜೆಯವರೆಗೂ ಯಾವುದೇ ಅರ್ಜಿಯನ್ನು ಹಿಂಪಡೆಯಲಾಗಿಲ್ಲ. ಒಟ್ಟು 2,585 ನಾಮಪತ್ರಗಳ ಪೈಕಿ 65 ನಾಮಪತ್ರಗಳು ಪರಿಶೀಲನೆಗೆ ಬಾಕಿ ಉಳಿದಿದ್ದು, ಉಳಿದಿರುವ ಅರ್ಜಿಗಳ ಪರಿಶೀಲನೆಯನ್ನು ಗುರುವಾರ ಚುನಾವಣಾಧಿಕಾರಿಗಳು ಕೈಗೆತ್ತಿಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.
ಮಾಹಿತಿಯ ಹೊಂದಾಣಿಕೆ ಇಲ್ಲದಿರುವುದು ಮತ್ತು ಅಗತ್ಯ ದಾಖಲೆಗಳ ಕೊರತೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. “ಅಪೂರ್ಣ ನಾಮಪತ್ರಗಳು, ಕಾಣೆಯಾದ ಅಫಿಡವಿಟ್ಗಳು, ಸರಿಯಾಗಿ ಜಾತಿ ಪ್ರಮಾಣಪತ್ರಗಳನ್ನು ಸಲ್ಲಿಸದಿರುವುದು ಮತ್ತು ಇತರ ಅನರ್ಹ ನಮೂನೆಗಳನ್ನು ಸಲ್ಲಿಸದಿರುವುದು ನಾಮಪತ್ರಗಳನ್ನು ತಿರಸ್ಕರಿಸಲು ಕಾರಣಗಳಾಗಿವೆ” ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಡಿಎಸ್ಇಸಿಯ ಅಂಕಿಅಂಶಗಳ ಪ್ರಕಾರ, ಇಲ್ಲಿಯವರೆಗೆ, ಬಿಜೆಪಿ ಅಭ್ಯರ್ಥಿಗಳು ಸಲ್ಲಿಸಿದ ಒಟ್ಟು 654 ನಾಮಪತ್ರಗಳಲ್ಲಿ, 394 ನಾಮಪತ್ರಗಳು ತಿರಸ್ಕೃತಗೊಂಡಿವೆ. ಎಎಪಿ ಅಭ್ಯರ್ಥಿಗಳ 728 ನಾಮಪತ್ರಗಳ ಪೈಕಿ 466 ನಾಮಪತ್ರಗಳು ತಿರಸ್ಕೃತಗೊಂಡಿವೆ. ಕಾಂಗ್ರೆಸ್‌ನಲ್ಲಿ 405 ನಾಮಪತ್ರಗಳು ಸಲ್ಲಿಕೆಯಾಗಿದ್ದು, 149 ನಾಮಪತ್ರಗಳು ತಿರಸ್ಕೃತಗೊಂಡಿವೆ. ಬಿಎಸ್ಪಿಯಲ್ಲಿ 152 ನಾಮಪತ್ರಗಳು ಸಲ್ಲಿಕೆಯಾಗಿದ್ದು, 12 ನಾಮಪತ್ರಗಳು ತಿರಸ್ಕೃತಗೊಂಡಿವೆ. 523 ಪಕ್ಷೇತರ ಅಭ್ಯರ್ಥಿಗಳ ಪೈಕಿ 80 ನಾಮಪತ್ರಗಳು ತಿರಸ್ಕೃತಗೊಂಡಿವೆ.
ಒಟ್ಟು ಅಭ್ಯರ್ಥಿಗಳ ಪೈಕಿ, ಪಕ್ಷೇತರರು 507, ಎಎಪಿ 492 ಅಭ್ಯರ್ಥಿಗಳೊಂದಿಗೆ ಗರಿಷ್ಠ ಪಾಲನ್ನು ಹೊಂದಿದೆ. ಇತರ ಪಕ್ಷಗಳ ಪೈಕಿ, ನವೆಂಬರ್ 14 ರವರೆಗೆ ಬಿಜೆಪಿಯಿಂದ 423, ಕಾಂಗ್ರೆಸ್ನಿಂದ 334, ಬಹುಜನ ಸಮಾಜ ಪಕ್ಷದಿಂದ 149, ಜೆಡಿಯುನಿಂದ 31, ಎಐಎಂಐಎಂನಿಂದ 20 ಮತ್ತು ಸಿಪಿಐ(ಎಂ) ನಿಂದ 9 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.