Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಬಿಜೆಪಿ ನಾಯಕರಿಬ್ಬರ ಪ್ರತಿಷ್ಠೆಯ ಕಣವಾದ ಗುಂಬಜ್ ಗುದ್ದಾಟ ; ನಿಲ್ದಾಣ ತೆರವಿಗೆ ಪ್ರತಾಪ್ ಕೊಟ್ಟ ಗಡುವು...

ಬಿಜೆಪಿ ನಾಯಕರಿಬ್ಬರ ಪ್ರತಿಷ್ಠೆಯ ಕಣವಾದ ಗುಂಬಜ್ ಗುದ್ದಾಟ ; ನಿಲ್ದಾಣ ತೆರವಿಗೆ ಪ್ರತಾಪ್ ಕೊಟ್ಟ ಗಡುವು ಇಂದು ಅಂತ್ಯ

0

ಕಳೆದ ಮೂರು ದಿನಗಳಿಂದ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಬಸ್ ನಿಲ್ದಾಣ ಕಟ್ಟಡದ ಮಾದರಿ ಇಡೀ ರಾಜ್ಯದ ಗಮನ ಸೆಳೆದಿದೆ. ಈ ವಿವಾದ ಬಿಜೆಪಿ ಪಕ್ಷದ ನಾಯಕರಿಬ್ಬರ ಪ್ರತಿಷ್ಠೆಗೆ ಕಾರಣವಾಗುವತ್ತ ಸಾಗಿ ಪ್ರತಾಪ್ ಸಿಂಹ v/s ರಾಮದಾಸ್ ಎಂಬಲ್ಲಿಗೆ ಬಂದು ನಿಂತಿದೆ. ಅಂದಹಾಗೆ ಬಸ್ ನಿಲ್ದಾಣ ತೆರವಿಗೆ ಪ್ರತಾಪ್ ಸಿಂಹ ಕೊಟ್ಟ ಗಡುವು ಇಂದು ಅಂತ್ಯವಾಗಲಿದೆ. ಪ್ರತಾಪ್ ಸಿಂಹ ಗಡುವಿನಂತೆ ಇಂದು ಬಸ್ ನಿಲ್ದಾಣವನ್ನು ತೆರವುಗೊಳಿಸುವರೇ ಎಂಬುದು ಸಧ್ಯದ ಕುತೂಹಲವಾಗಿದೆ.

ಕಳೆದ ಮೂರು ದಿನಗಳ ಹಿಂದೆ ಮೈಸೂರಿನ ಬಸ್ ನಿಲ್ದಾಣವನ್ನು ಗುಂಬಜ್ ಮಾದರಿಯಲ್ಲಿದೆ ಎಂದು ಪ್ರತಾಪ್ ಸಿಂಹ ಆರೋಪಿಸಿ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಹೀಗೇ ಬಿಟ್ಟರೆ ಕರ್ನಾಟಕವನ್ನು ಪಾಕಿಸ್ತಾನ ಮಾಡಬಹುದು ಎಂಬ ರೀತಿಯಲ್ಲಿ ಪ್ರತಾಪ್ ಸಿಂಹ ಮಾಧ್ಯಮಗಳ ಎದುರು ಪರೋಕ್ಷವಾಗಿ ಸ್ಥಳೀಯ ಬಿಜೆಪಿ ಶಾಸಕ ರಾಮದಾಸ್ ಮೇಲೆ ಗುಡುಗಿದ್ದರು.

ಇದರ ನಡುವೆ “ಬಸ್ ನಿಲ್ದಾಣದ ಗುತ್ತಿಗೆಯನ್ನು ಮುಸ್ಲಿಂ ಒಬ್ಬರಿಗೆ ನೀಡಲಾಗಿದೆ. ಹಾಗಾಗಿ ಬಸ್ ನಿಲ್ದಾಣವನ್ನು ಗುಂಬಜ್ ಮಾದರಿಯಲ್ಲಿ ಕಟ್ಟಲಾಗಿದೆ, ಮೈಸೂರಿನ ಉಳಿದ ಬಸ್ ನಿಲ್ದಾಣವನ್ನು ಹೀಗೆ ಕಟ್ಟಲು ನಾವು ಬಿಡುವುದಿಲ್ಲ” ಎನ್ನುವ ಮೂಲಕ ಆಕ್ರೋಶ ಕೂಡಾ ವ್ಯಕ್ತವಾಗಿತ್ತು. ಆದರೆ ಸ್ಥಳೀಯ ಬಿಜೆಪಿ ಶಾಸಕ ರಾಮದಾಸ್ ಈ ಎಲ್ಲಾ ವಿವಾದಕ್ಕೆ ತೆರೆ ಎಳೆಯುವಂತೆ ಉತ್ತರಿಸಿದ್ದರು.

ಅದರಂತೆ “ಯಾವ ಮುಸ್ಲಿಮರಿಗೂ ಬಸ್ ನಿಲ್ದಾಣದ ಕಾಮಗಾರಿ ಗುತ್ತಿಗೆ ನೀಡಿಲ್ಲ. ಬಸ್ ನಿಲ್ದಾಣದ ಗುತ್ತಿಗೆದಾರನ ಹೆಸರು ಮಹಾದೇವ ಎಂದು. ಜೊತೆಗೆ ಬಸ್ ನಿಲ್ದಾಣವನ್ನು ಅರಮನೆ ಮಾದರಿಯಲ್ಲಿ ಕಟ್ಟಲಾಗಿದೆ” ಎಂದು ಶಾಸಕ ರಾಮದಾಸ್ ಅವರು ಸಂಸದ ಪ್ರತಾಪ್ ಸಿಂಹರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಈ ನಡುವೆ ಇದನ್ನು ಕೋಮು ಪ್ರಚೋದನೆಗೆ ಎಳೆಯುವ ಹಾದಿಗೆ ಶಾಸಕ ರಾಮದಾಸ್ ಬ್ರೇಕ್ ಹಾಕಿದ್ದಾರೆ.

ಇನ್ನು ಈ ವಿವಾದದಲ್ಲಿ ಮೈಸೂರು ಭಾಗದ ಬಹುತೇಕ ಹಿಂದೂಪರ ಮುಖಂಡರು ಶಾಸಕ ರಾಮದಾಸ್ ಬೆನ್ನಿಗೆ ನಿಂತಿದ್ದಾರೆ. ಎಲ್ಲಾ ವಿಚಾರದಲ್ಲೂ ನಾವು ಧರ್ಮವನ್ನು ಮುಂದೆ ತಂದರೆ ಜನರ ಕೆಂಗಣ್ಣಿಗೆ ಗುರಿಯಿಗುವ ಸಾಧ್ಯತೆ ಇದೆ. ಹಾಗಾಗಿ ಈ ವಿವಾದದಲ್ಲಿ ಪ್ರತಾಪ್ ಸಿಂಹ ಬೆನ್ನಿಗೆ ನಿಲ್ಲದಿರುವುದೇ ವಾಸಿ ಎಂದು ತೀರ್ಮಾನಿಸಿದ್ದಾರೆ. ಹಾಗಾಗಿ ಮೈಸೂರು ಭಾಗದ ಧಾರ್ಮಿಕ ಮತ್ತು ಸಂಘಟನೆ ಹಿನ್ನೆಲೆಯವರು ರಾಮದಾಸ್ ವಾದಕ್ಕೆ ಜೊತೆಯಾಗಿದ್ದಾರೆ.

ಈ ನಡುವೆ ಬಸ್ ನಿಲ್ದಾಣ ತೆರವಿಗೆ ಪ್ರತಾಪ್ ಸಿಂಹ ಕೊಟ್ಟಿರುವ ಗಡುವು ಮುಗಿಯುವುದರಿಂದ ಕಟ್ಟಡವನ್ನು ತೆರವುಗೊಳಿಸಲಿದ್ದಾರಾ ಅಥವಾ ಅದೇ ನಿಲ್ದಾಣವೇ ಮುಂದುವರೆಯಲಿದೆಯೇ ಎಂಬುದು ಕುತೂಹಲಕಾರಿ ವಿಚಾರವಾಗಿದೆ. ಈ ನಡುವೆ ಕಟ್ಟಡ ತೆರವುಗೊಳಿಸಲು ಪ್ರತಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿದ್ದು ಇದು ಸರ್ಕಾರದ ಹಣ, ಅಂದರೆ ಸಾರ್ವಜನಿಕರ ಹಣ. ನೀವು ಬೇಕೆಂದಾಗ ಕಟ್ಟೋಕೆ ಬೇಡವೆಂದಾಗ ಬಿಡೋಕೆ ಇದು ನಿಮ್ಮ ಜೇಬಿನಿಂದ ಕೊಟ್ಟಿದ್ದಲ್ಲ’ ಎಂದು ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಈಗಾಗಲೇ ರಾಜ್ಯದಾದ್ಯಂತ ಸುದ್ದಿಯಲ್ಲಿರುವ 40% ಕಮೀಷನ್ ಆರೋಪದ ಹಿನ್ನೆಲೆಯಲ್ಲಿ ಇದೊಂದು ಕಮೀಷನ್ ಗೊಂದಲ ಎಂದೂ ಸಹ ವಿರೋಧಿ ಗುಂಪು ಮಾತಾಡಿಕೊಳ್ಳುತ್ತಿದೆ. ಮುಖಂಡರಿಗೆ ಸಲ್ಲಬೇಕಾದ ಕಮೀಷನ್ ತಲುಪದ ಹಿನ್ನೆಲೆಯಲ್ಲಿ ಈ ರೀತಿ ಮಾಡಲಾಗುತ್ತಿದೆ ಎಂದೂ ಸಹ ಸ್ಥಳೀಯರು ಆರೋಪಿಸಿದ್ದಾರೆ.

You cannot copy content of this page

Exit mobile version