ಬೆಂಗಳೂರು: ʼಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡುವ ಮೂಲಕ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಮತದಾರರ ಮಾಹಿತಿ ಕಳುವಿಗೆ ಕಾರಣವಾಗಿರುವ ಬೆಂಗಳೂರು ನಗರದ ಉಸ್ತುವಾರಿ ಹೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರ ವಿರುದ್ಧ ಎಫ್ಐಆರ್ ದಾಖಲಾಗಿ, ಅವರ ಬಂಧನವಾಗಬೇಕು. ಈ ಮತದಾರರ ಮಾಹಿತಿ ಕಳವು ಪ್ರಕರಣದ ಬಗ್ಗೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕುʼಎಂದು ರಾಜ್ಯ ಕಾಂಗ್ರೆಸ್ ಆಗ್ರಹಿಸಿದೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗುರುವಾರ ಜಂಟಿ ಮಾಧ್ಯಮಗೋಷ್ಠಿ ನಡೆಸಿ ಮತದಾರರ ಮಾಹಿತಿ ಕಳವು ಬಗ್ಗೆ ಎಳೆ, ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಮೂವರು ನಾಯಕರ ನೀಡಿರುವ ಮಾಹಿತಿ ಪ್ರಕಾರ, ʼಚಿಲುಮೆ ಎಜುಕೇಶನ್ ಇನ್ಸ್ ಟಿಟ್ಯೂಟ್ ಎಂಬ ಖಾಸಗಿ ಸಂಸ್ಥೆ ಮತದಾರರ ಜಾಗೃತಿ ಹಾಗೂ ಮತದಾರರ ಪಟ್ಟಿಯನ್ನು ಉಚಿತವಾಗಿ ಪರಿಷ್ಕರಣೆ ಮಾಡುತ್ತೇವೆ ಎಂದು ಆಗಸ್ಟ್ 19, 2022 ರಂದು ಸರಕಾರಕ್ಕೆ ಅರ್ಜಿ ಹಾಕಿದ್ದರು. ನಂತರ ಆಗಸ್ಟ್ 20 ರಂದು ಯಾವುದೇ ಜಾಹೀರಾತು ನೀಡದೆ ಖಾಸಗಿ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ಅನುಮತಿ ನೀಡಲಾಯಿತು. ಈ ಸಂಸ್ಥೆಯವರಿಗೆ ಯಾವುದೇ ಅನುಭವ ಇಲ್ಲದಿದ್ದರೂ ಅನುಮತಿ ನೀಡಲಾಗಿದೆ. ಜನರ ಮಾಹಿತಿ ಪಡೆಯಲು ತಮ್ಮ ಸಿಬ್ಬಂದಿಗೆ ಬೂತ್ ಮಟ್ಟದ ಅಧಿಕಾರಿ ಎಂಬ ಗುರುತಿನ ಚೀಟಿ ನೀಡಿದ್ದಾರೆ. ಕಾನೂನಿನ ಪ್ರಕಾರ ಸರ್ಕಾರಿ, ಅರೆ ಸರ್ಕಾರಿ ಸಿಬ್ಬಂದಿ ಹೊರತಾಗಿ ಬೇರೆಯವರು ಬಿಎಲ್ಒ ಆಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಈ ಖಾಸಗಿ ಸಂಸ್ಥೆಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಯಾವುದೇ ಅನುಭವ ಇಲ್ಲದಿದ್ದರೂ ಉಚಿತವಾಗಿ ಜಾಗೃತಿ ಮೂಡಿಸುವುದಾಗಿ ತಿಳಿಸಿದೆ. ಇದರ ಜತೆಗೆ ಇನ್ನೆರಡು ಸಂಸ್ಥೆಗಳಾದ ಚಿಲುಮೆ ಎಂಟರ್ ಪ್ರೈಸಸ್ ಪ್ರೈ.ಲಿ ಹಾಗೂ ಡಿಎಪಿ ಹೊಂಬಾಳೆ ಪ್ರೈ.ಲಿ ಕೂಡ ಭಾಗಿಯಾಗಿದ್ದು, ಈ ಎರಡು ಸಂಸ್ಥೆಗಳಿಗೆ ಕೃಷ್ಣಪ್ಪ ರವಿಕುಮಾರ್ ಎಂಬುವವರು ನಿರ್ದೇಶಕರಾಗಿದ್ದಾರೆ. ಈ ಎರಡು ಸಂಸ್ಥೆಗಳು ಜನರ ಬಳಿ ಹೋಗಿ ನಾವು ಚುನಾವಣಾ ನಿರ್ವಹಣೆ ಕಂಪನಿಯಾಗಿದ್ದು, ನಾವು ಪಕ್ಷಗಳಿಗೆ ಇವಿಎಂ ತಯಾರಿ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ. ನಾವು ಇದುವರೆಗೂ ಇವಿಎಂ ಅನ್ನು ಸರ್ಕಾರ ಮಾಡಲಿದೆ ಎಂದು ಕೇಳಿದ್ದೆವು. ಆದರೆ ಇವಿಎಂ ಅನ್ನು ರಾಜಕೀಯ ಪಕ್ಷಗಳಿಗೆ ಮಾಡಲಾಗುತ್ತದೆ ಎಂದು ಯಾವತ್ತೂ ಕೇಳಿರಲಿಲ್ಲ ಎಂದಿದ್ದಾರೆ.
ಈ ಸಂಸ್ಥೆಗಳು ಸರ್ಕಾರದ ಎಲ್ಲಾ ವಿಭಾಗಗಳಿಂದಲೂ ತಾತ್ಕಾಲಿಕ ಮತಗಟ್ಟೆ ವ್ಯಕ್ತಿಯನ್ನು ಒದಗಿಸುವುದಾಗಿ ತಿಳಿಸಿವೆ. ಇದೇ ಸಂಸ್ಥೆ ಡಿಜಿಟಲ್ ಸಮೀಕ್ಷಾ ಎಂಬ ಮತದಾರರ ಆಪ್ ಅನ್ನು ಹೊಂದಿದೆ. ಈ ಆಪ್ ಮೂಲಕ ಜನಪ್ರತಿನಿಧಿಗಳಿಗೆ ಸೇವೆ ಒದಗಿಸಲಾಗುವುದು ಎಂದೂ ತಿಳಿಸಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ಎಲ್ಲ ಮತದಾರರ ಮಾಹಿತಿ ಪಡೆದ ನಂತರ ಈ ಸಂಸ್ಥೆ ಬೂತ್ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಿದೆ. ಚುನಾವಣಾ ಆಯೋಗ ನಿಯೋಜಿಸಬೇಕಿದ್ದ ಬೂತ್ ಮಟ್ಟದ ಅಧಿಕಾರಿಗಳನ್ನು ಈ ಸಂಸ್ಥೆ ನಿಯೋಜಿಸಿ ಅಕ್ರಮ ಎಸಗಿದೆ. ಇವರನ್ನು ಸರ್ಕಾರದ ಅಧಿಕಾರಿಗಳೆಂದು ಬಿಂಬಿಸಿ ಮನೆ, ಮನೆಗೂ ಹೋಗಿ ಪ್ರತಿ ಮತದಾರನ ಜಾತಿ, ಲಿಂಗ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಸೇರಿದಂತೆ ಅನೇಕ ಮಾಹಿತಿ ಕಲೆಹಾಕಲಾಗಿದೆ. ಹೀಗೆ ಕಲೆ ಹಾಕಿದ ಮಾಹಿತಿಯನ್ನು ಚುನಾವಣಾ ಆಯೋಗದ ಗರುಡ ಆಪ್ ನಲ್ಲಿ ಆಪ್ ಲೋಡ್ ಮಾಡದೇ, ಖಾಸಗಿ ಸಂಸ್ಥೆಯ ಆಪ್ ಆದ ಡಿಜಿಟಲ್ ಸಮೀಕ್ಷಾದಲ್ಲಿ ಅಪ್ ಲೋಡ್ ಮಾಡಲಾಗಿದೆ.
ಆ ಮೂಲಕ ಎಂಪಿ, ಶಾಸಕರು, ಪಾಲಿಕೆ ಸದಸ್ಯರಿಗೆ ಸೇವೆ ಒದಗಿಸಿ ವ್ಯಾಪಾರ ಮಾಡಲು ಮುಂದಾಗಿದೆ. ಮೊದಲಿಗೆ ತಮ್ಮನ್ನು ಸರ್ಕಾರದ ಅಧಿಕಾರಿಗಳೆಂದು ಬಿಂಬಿಸಿಕೊಂಡರು. ಎರಡನೇಯದಾಗಿ ತಮ್ಮವರಿಗೆ ನಕಲಿ ಗುರುತಿನ ಚೀಟಿ ನೀಡಿದರು. ಮೂರನೆಯದಾಗಿ ಅಕ್ರಮವಾಗಿ ಮತದಾರರಿಂದ ಮಾಹಿತಿ ಕಲೆ ಹಾಕಿದ್ದಾರೆ. ನಾಲ್ಕನೆಯದಾಗಿ ಇದನ್ನು ಖಾಸಗಿ ಆಪ್ ನಲ್ಲಿ ಅಪ್ ಲೋಡ್ ಮಾಡಿ ಅದನ್ನು ವಾಣಿಜ್ಯ ಉದ್ದೇಶಕ್ಕೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಈ ಮಾಹಿತಿಯನ್ನು ಬೇರೆ ಸಂಸ್ಥೆಗಳಿಗೂ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕೃಷ್ಣಪ್ಪ ರವಿಕುಮಾರ್ ಎಂಬಾತ ಸರ್ಕಾರದ ಹಿರಿಯ ಸಚಿವರ ಆಪ್ತರಾಗಿದ್ದಾರೆ. ಈ ಎಲ್ಲ ಕಂಪನಿಗಳು ಆ ಸಚಿವರ ಮಲ್ಲೇಶ್ವರ ಕ್ಷೇತ್ರದಲ್ಲಿ ಸ್ಥಾಪನೆಯಾಗಿವೆ. ಇವು ಮತದಾರರ ಮಾಹಿತಿ ಕಳವು, ಮಾಹಿತಿ ದುರ್ಬಳಕೆ, ನಂಬಿಕೆ ದ್ರೋಹದ ಅಪರಾಧ, ಪಿತೂರಿ ಅಪರಾಧ ಎಸಗಿವೆ. ಕೃಷ್ಣಪ್ಪ ರವಿಕುಮಾರ್ ತಮ್ಮ ಖಾಸಗಿ ಸಂಸ್ಥೆ ಸಿಬ್ಬಂದಿಗೆ ಬಿಎಲ್ಒ ಗುರುತಿನ ಚೀಟಿ ನೀಡಿದ್ದಾರೆ. ಇದು ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಮಾಡಲಾಗಿರುವ ಅಪರಾಧ. ಇದು ಐಪಿಸಿ ಸೆಕ್ಷನ್ ಪ್ರಕಾರ ಶಿಕ್ಷಾರ್ಹ ಅಪರಾಧ. ಇದರಿಂದ ರಾಜ್ಯದ ಜನರಿಗೆ ಯಾವ ಸಂದೇಶ ಹೋಗುತ್ತದೆ. ಇದರ ಹಿಂದಿನ ಉದ್ದೇಶವೇನು? ಇದು ಸ್ಪಷ್ಟ ಮೋಸ, ವಂಚನೆಯಾಗಿದೆ ಎಂದು ದೂರಿದ್ದಾರೆ.
ನವೆಂಬರ್ 16, 2022ರಂದು ಈ ಸಂಸ್ಥೆಗೆ ನೀಡಲಾಗಿದ್ದ ಅನುಮತಿಯನ್ನು ರದ್ದುಗೊಳಿಸಲಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ ರದ್ದು ಮಾಡಲು ಕಾರಣ ಏನು ಎಂದು ತಿಳಿಸಿಲ್ಲ. ನೀವು ಷರತ್ತು ಉಲ್ಲಂಘನೆ ಮಾಡಿದ್ದು ಹೀಗಾಗಿ ಅನುಮತಿ ರದ್ದು ಮಾಡಲಾಗಿದೆ ಎಂದು ಹೇಳಲಾಗಿದೆ. ಇದರ ಹಿಂದೆ ಬಸವರಾಜ ಬೊಮ್ಮಾಯಿ ಅವರು ಇದ್ದಾರೆ. ಈ ಅಕ್ರಮಕ್ಕೆ ಬೊಮ್ಮಾಯಿ ಅವರೇ ನೇರ ಹೊಣೆ ಎಂದು ದೂಷಿಸಿದ್ದಾರೆ.
ನಾವು ರಾಜ್ಯದಲ್ಲಿ ಬಿಜೆಪಿ ಸರ್ಕಾರದ 40% ಭ್ರಷ್ಟಾಚಾರ, ಗುತ್ತಿಗೆ, ನೇಮಕಾತಿ, ವರ್ಗಾವಣೆಯಲ್ಲಿ ಅಕ್ರಮ ನೋಡಿದ್ದೆವು. ಈಗ ಅವರ ಅಕ್ರಮ ಚುನಾವಣೆ ಪ್ರಕ್ರಿಯೆಗೂ ವಿಸ್ತರಿಸಿದೆ. ಈ ಸಂಸ್ಥೆ ದಿನಕ್ಕೆ 1500 ರೂ. ದಿನಗೂಲಿ ನೀಡುವುದಾಗಿ ಜಾಹೀರಾತು ನೀಡಿ, ನಂತರ ಬಿಜೆಪಿ ಕಾರ್ಯಕರ್ತರನ್ನು ಆಯ್ಕೆ ಮಾಡಿಕೊಂಡಿದೆ. ಬೆಂಗಳೂರಿನಲ್ಲಿ 17-18 ಸಾವಿರ ಜನರನ್ನು ನೇಮಕ ಮಾಡಿಕೊಂಡು ಇವರೆಲ್ಲರಿಗೂ ಬಿಎಲ್ಒ ಎಂದು ಗುರುತಿನ ಚೀಟಿ ನೀಡಿದ್ದಾರೆ. ನಿನ್ನೆ ಕೂಡ ಅವರ ಕಚೇರಿ ಮುಂದೆ ಪರಿಶೀಲಿಸಿದಾಗ 2 ಸಾವಿರ ಸಿಬ್ಬಂದಿ ಇದ್ದರು. ಇವರು ಯಾವ ಕ್ಷೇತ್ರದಲ್ಲಿ ಯಾವ ಮನೆ ಖಾಲಿ ಇದೆ, ಯಾವ ಮತದಾರರು ಎಲ್ಲಿ ಇದ್ದಾರೆ ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸರ್ಕಾರಕ್ಕೆ ಉಚಿತವಾಗಿ ಸಮೀಕ್ಷೆ ಮಾಡಿಕೊಡುವುದಾಗಿ ಅರ್ಜಿಯಲ್ಲಿ ತಿಳಿಸಿದ್ದಾರೆ. ಇನ್ನು ಸಮೀಕ್ಷೆಗೆ ಆಯ್ಕೆ ಮಾಡಲಾದ ಸಾವಿರಾರು ಸಿಬ್ಬಂದಿಗೆ ದಿನಕ್ಕೆ 1500 ರು. ದಿನಗೂಲಿ ನೀಡುತ್ತಿದ್ದಾರೆ. ಇದಕ್ಕೆ ಹಣ ಎಲ್ಲಿಂದ ಬಂದಿದೆ? ಇದಕ್ಕೆ 40% ಕಮಿಷನ್ ಹಣ ಬಳಕೆಯಾಗುತ್ತಿದೆ. ಇದರ ಹಿಂದೆ ಯಾವ ಸಚಿವರು ಇದ್ದಾರೆ? ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರೇ ನಿಮಗೆ ಉಚಿತ ಸೇವೆ ಬೇಕಾದರೆ ನಮ್ಮ ಪಕ್ಷದ ಕಾರ್ಯಕರ್ತರಿಂದಲೇ ಮಾಡಿಸುತ್ತೇವೆ. ನಾವು ಮತದಾರರ ಮಾಹಿತಿಯನ್ನು ಯಾರಿಗೂ ಮಾರಿಕೊಳ್ಳುವುದಿಲ್ಲ ಎಂದು ಟೀಕಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿ ಕೆಲವು ವರ್ಗದ ಮತದಾರರನ್ನು ಕೈಬಿಡುವುದು ಒಂದೆಯಡೆಯಾದರೆ, ಖಾಲಿ ಇರುವ ಮನೆಗಳ ವಿಳಾಸದಲ್ಲಿ ಬೇರೆ ಕಡೆಯಿಂದ ಮತದಾರರನ್ನು ಕರೆತಂದು ಮತಹಾಕಿಸಲು ಸಿದ್ಧತೆ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ಆಪ್ ಇಟ್ಟುಕೊಂಡಿದ್ದಾರೆ. ವಾರ್ಡ್ ಮಟ್ಟದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿರುವವರಿಂದ ಕೋಟ್ಯಂತರ ರೂಪಾಯಿ ವ್ಯವಹಾರ ಮಾಡುತ್ತಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತರು ಬೊಮ್ಮಾಯಿ ಹಾಗೂ ಸಚಿವರ ಮಾತು ಕೇಳಿಕೊಂಡು ಇಂತಹ ನೀಚ ಕೆಲಸಕ್ಕೆ ಕೈಹಾಕಿದ್ದಾರೆ. ಆ ಮೂಲಕ ಕಾರ್ಯಾಂಗ ವ್ಯವಸ್ಥೆಗೆ ಕಳಂಕ ತಂದಿದ್ದಾರೆ. ಈ ಸಂಚು ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ, ಬೇರೆ ಕಡೆಗಳಲ್ಲೂ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ನವೆಂಬರ್ 16 ರಂದು ಸರ್ಕಾರ ಈ ಆದೇಶವನ್ನು ಹಿಂಪಡೆದಿದ್ದು, ಇದಕ್ಕೆ ಯಾವುದೇ ಸ್ಪಷ್ಟ ಕಾರಣ ನೀಡಿಲ್ಲ. ಬದಲಿಗೆ, ಈ ಸಂಸ್ಥೆ ವಿಶ್ವಾಸಾರ್ಹತೆ ಉಳಿಸಿಕೊಳ್ಳಲು ವಿಫಲವಾಗಿದ್ದು, ಯಾರೂ ಕೂಡ ಈ ಸಂಸ್ಥೆಗೆ ತಮ್ಮ ಮಾಹಿತಿ ಹಂಚಿಕೊಳ್ಳಬಾರದು ಎಂದು ಈಗ ತುಷಾರ್ ಗಿರಿನಾಥ್ ಅವರು ಹೇಳಿಕೆ ನೀಡಿದ್ದಾರೆ. ಈಗಾಗಲೇ ಸಾವಿರಾರು ಸಿಬ್ಬಂದಿ ಮೂಲಕ ಮತದಾರರ ಮಾಹಿತಿ ಸಂಗ್ರಹಿಸಲಾಗಿದೆ. ಈ ಬಗ್ಗೆ ಭಾರತೀಯ ಚುನಾವಣಾ ಆಯೋಗ, ಕೇಂದ್ರ ಗೃಹ ಇಲಾಖೆಗೆ ಮಾಹಿತಿ ನೀಡಲಾಗಿದೆಯೇ?
ಇದೆಲ್ಲವೂ ಮತದಾನದ ಅಕ್ರಮದ ಹಿಂದಿನ ಷಡ್ಯಂತ್ರ. ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪಂಗಡದವರು, ಹಿಂದುಳಿದ ವರ್ಗದ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಈ ಸಂಚು ನಡೆದಿದೆ. ಆ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇದು ರಾಷ್ಟ್ರಮಟ್ಟದ ಅಕ್ರಮ. ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿರುವ ವಿಚಾರ.
ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಸರ್ಕಾರ ಬಿಬಿಎಂಪಿ ಚುನಾವಣೆಯನ್ನು ಮುಂದೂಡುತ್ತಿದೆ. ಕೋರ್ಟ್ ಡಿ.31ರ ಒಳಗೆ ಚುನಾವಣೆ ಮಾಡಬೇಕು ಎಂದು ಗಡವು ನೀಡಿದ ನಂತರ ಮುಖ್ಯಮಂತ್ರಿಗಳೇ ಇಂತಹ ಮೋಸ ಕೆಲಸಕ್ಕೆ ಕೈಹಾಕಿದ್ದೀರಾ? ಈ ಚುನಾವಣಾ ಪ್ರಕ್ರಿಯೆ ಬಗ್ಗೆ ಕೇಂದ್ರ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗವು ರಾಜ್ಯ ಮುಖ್ಯ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು. ಬಿಎಲ್ಒ ಎಂಬ ನಕಲಿ ಗುರುತಿನ ಚೀಟಿ ಇಟ್ಟುಕೊಂಡಿರುವವರ ವಿರುದ್ಧ ಎಫ್ಐಆರ್ ದಾಖಲಿಸಿ, ಅವರನ್ನು ಬಂಧಿಸಬೇಕು. ಇದರ ಹಿಂದಿರುವ ಎಲ್ಲ ಅದಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಬೇಕು. ಈಗಾಗಲೇ ಕಳುವಾಗಿರುವ ಮತದಾರರ ಮಾಹಿತಿಯನ್ನು ಹಿಂಪಡೆದು ಅವುಗಳ ಬಳಕೆ ತಡೆಯಬೇಕು. ಇದು ಕೇವಲ ಬಿಬಿಎಂಪಿ, ರಾಜ್ಯದ ವಿಚಾರವಲ್ಲ. ದೇಶದಾದ್ಯಂತ ಪ್ರಜಾಪ್ರಭುತ್ವದ ಹಕ್ಕು ಕಸಿಯುವ ಪ್ರಯತ್ನ ಎಂದು
ಈ ಸಮಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದು,
ಚಿಲುಮೆ ಎಂಬ ಖಾಸಗಿ ಸಂಸ್ಥೆಗೆ ಸರ್ಕಾರ ಹಾಗೂ ಬಿಬಿಎಂಪಿ ಬದಲಿಗೆ ಕೆಲಸ ಮಾಡಲು ಅನುಮತಿ ನೀಡಿದ್ದು ಯಾರು? ಯಾವ ಆಧಾರದ ಮೇಲೆ ಈ ಖಾಸಗಿ ಸಂಸ್ಥೆಗಳಿಗೆ ಒಂದೇ ದಿನದಲ್ಲಿ ಅನುಮತಿ ನೀಡಲಾಯಿತು?. ಬೆಂಗಳೂರಿನ ಉಸ್ತುವಾರಿ ಸಚಿವರಾಗಿರುವ ನೀವಾಗಲಿ, ಬಿಬಿಎಂಪಿ ಆಗಲಿ, ಚುನಾವಣಾ ಉಸ್ತುವಾರಿ ಅಧಿಕಾರಿಗಳಾಗಲಿ ಚುನಾವಣೆ ಕೆಲಸವನ್ನು ಖಾಸಗಿ ಸಂಸ್ಥೆಗೆ ನೀಡುವ ಮುನ್ನ ಯಾಕೆ ಜಾಹೀರಾತು ಪ್ರಕಟಿಸಲಿಲ್ಲ?, ರಾಜ್ಯದಲ್ಲಿ ಸಾವಿರಾರು ಎನ್ ಜಿಒಗಳಿದ್ದು, ಅವುಗಳ ಪೈಕಿ ಈ ಖಾಸಗಿ ಸಂಸ್ಥೆಗೆ ಅನುಮತಿ ನೀಡಲು ಶಿಫಾರಸ್ಸು ಮಾಡಿದ್ದು ಯಾರು?, ಬಿಬಿಎಂಪಿ, ಜಿಲ್ಲಾ ಉಸ್ತುವಾರಿಗಳು, ಚುನಾವಣಾ ಅಧಿಕಾರಿಗಳು ಈ ಸಂಸ್ಥೆಯ ಅನುಭವದ ಬಗ್ಗೆ ಪರಿಶೀಲನೆ ನಡೆಸಲಿಲ್ಲ ಏಕೆ?, ಇಡೀ ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಎಲ್ಲ ಮನೆಗಳ ಸಮೀಕ್ಷೆಯನ್ನು ಉಚಿತವಾಗಿ ಮಾಡುತ್ತೇವೆ ಎಂದಾಗಲೇ ಸರ್ಕಾರಕ್ಕೆ ಅನುಮಾನ ಯಾಕೆ ಬರಲಿಲ್ಲ?, ಬೆಂಗಳೂರು ಉಸ್ತುವಾರಿ ಹೊತ್ತಿರುವ ಮುಖ್ಯಮಂತ್ರಿಗಳು, ಬಿಬಿಎಂಪಿ ಮುಕ್ತ ಆಯುಕ್ತರು, ಚುನಾವಣಾ ಅಧಿಕಾರಿಗಳೆಲ್ಲರೂ ಈ ಮತದಾರರ ಮಾಹಿತಿ ಕಳುವಿನಲ್ಲಿ ಭಾಗಿಯಾಗಿದ್ದಾರೆ ಎಂದು ಸಾಬೀತಾಗುವುದಿಲ್ಲವೇ?, ಖಾಸಗಿ ಸಂಸ್ಥೆಯೊಂದು ಬೆಂಗಳೂರಿನ ಪ್ರತಿಯೊಬ್ಬ ಮತದಾರರ ಪಟ್ಟಿಯನ್ನು ಕಲೆ ಹಾಕಲು ಹೇಗ ಸಾಧ್ಯ? ಇದು ಕಳ್ಳತನಕ್ಕೆ ಸಾಕ್ಷಿಯಲ್ಲವೇ? ಇದು ಖಾಸಗಿ ಹಕ್ಕಿನ ತ್ಯುಚಿಯಲ್ಲವೇ?, ಜನ ಪ್ರತಿನಿಧಿ ಕಾಯ್ದೆ ಸೆಕ್ಷನ್ 13 ಬಿ ಪ್ರಕಾರ ಸರ್ಕಾರಿ ಸಿಬ್ಬಂದಿ, ಅರೆ ಸರ್ಕಾರಿ ಅಥವಾ ಸ್ಥಳಿಯ ಪಾಲಿಕೆ ಅಧಿಕಾರಿಗಳು ಮಾತ್ರ ಬೂತ್ ಮಟ್ಟದ ಅಧಿಕಾರಿಗಳಾಗಬಹುದು. ಹಾಗಿದ್ದರೆ ಖಾಸಗಿ ಸಂಸ್ಥೆಯ ಸಿಬ್ಬಂದಿಗಳನ್ನು ಸರ್ಕಾರದ ಅಧಿಕಾರಿಗಳೆಂದು ಹೇಳಿ ಬೂತ್ ಮಟ್ಟದ ಆಧಿಕಾರಿಗಳೆಂದು ಗುರುತಿನ ಚೀಟಿ ನೀಡಿದ್ದು ಹೇಗೆ?, ಮತದಾರರ ಖಾಸಗಿ ಮಾಹಿತಿಯನ್ನು ಈಗ ಖಾಸಗಿ ಹಕ್ಕಿನ ಆಧಾರದ ಮೇಲೆ ರಕ್ಷಣೆ ಮಾಡಲಾಗುತ್ತಿದ್ದು, ಇದನ್ನು ವಾಣಿಜ್ಯ ಉದ್ದೇಶದ ಡಿಜಿಟಲ್ ಸಮೀಕ್ಷಾ ಎಂಬ ಆಪ್ ಗೆ ಅಪ್ ಲೋಡ್ ಮಾಡಿದ್ದು ಹೇಗೆ? ಇದು ಚುನಾವಣೆ ಪ್ರಕ್ರಿಯೆ ಅಕ್ರಮಕ್ಕೆ ಸಾಕ್ಷಿಯಲ್ಲವೇ?, ಈ ಮೂರು ಸಂಸ್ಥೆಗಳಿಗೂ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಸಚಿವ ಅಶ್ವತ್ಥ್ ನಾರಾಯಣ ಅವರಿಗೂ ಇರುವ ಸಂಬಂಧವೇನು? ಎಂದು ಪ್ರಶ್ನೆಗಳ ಸರಮಾಲೆ ಹಾಕಿದ್ದಾರೆ.
ಅಕ್ರಮದ ಮೂಲಕ ಮತದಾರರ ಮತದಾನದ ಹಕ್ಕು ಕಸಿಯುವ ಪ್ರಯತ್ನವಾಗಿದ್ದು, ಇದರ ಜವಾಬ್ದಾರಿ ಬೆಂಗಳೂರು ಉಸ್ತುವಾರಿ ಸಚಿವರಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲಿದ್ದು, ಅವರು ಕೂಡಲೇ ರಾಜೀನಾಮೆ ನೀಡಬೇಕು. ಇವರ ಜತೆಗೆ ಬಿಬಿಎಂಪಿ ಮುಖ್ಯ ಆಯುಕ್ತರು, ಚುನಾವಣಾ ಅದಿಕಾರಿಗಳು ಜವಾಬ್ದಾರಿ ಹೊರಬೇಕು. ಕೂಡಲೇ ಬೊಮ್ಮಾಯಿ ಅವರ ವಿರುದ್ಧ ಎಫ್ಐಆರ್ ದಾಖಲಿಸಿ, ಅವರನ್ನು ಬಂಧಿಸಬೇಕು. ಬೇರೆಯವರು ಇಂತಹ ಅಪರಾಧ ಮಾಡಿದ್ದರೆ ಇಷ್ಟು ಹೊತ್ತಿಗೆ ಬಂಧನವಾಗಿ ಜಾಮೀನು ಕೂಡ ಸಿಗುತ್ತಿರಲಿಲ್ಲ. ಮುಖ್ಯಮಂತ್ರಿಗಳ ಬಂಧನವಾಗಿ ಅವರ ವಿರುದ್ಧ ಉನ್ನತ ಮಟ್ಟದ ತನಿಖೆ ಆಗಬೇಕು. ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ನೇತೃತ್ವದಲ್ಲಿ 30 ದಿನಗಳ ಒಳಗಾಗಿ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಈ ಅಕ್ರಮದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು, ಬಿಬಿಎಂಪಿ ಆಯುಕ್ತರು, ಸೇರಿದಂತೆ ಈ ಖಾಸಗಿ ಸಂಸ್ಥೆಗಳ ಮಾಲೀಕರ ವರೆಗೆ ಎಲ್ಲರ ವಿರುದ್ಧ ದೂರು ನೀಡಲಾಗುವುದು. ಈ ವಿಚಾರವಾಗಿ 3 ತಿಂಗಳಿಂದ ತನಿಖಾ ವರದಿ ಮಾಡಿರುವ ನ್ಯೂಸ್ ಮಿನಿಟ್ ಹಾಗೂ ಪ್ರತಿಧ್ವನಿ ಮಾಧ್ಯಮ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದರು.
ಬಿಜೆಪಿಗೆ ಇದೇನು ಹೊಸದಲ್ಲ:
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ ಅವರು, ‘ಈ ರೀತಿ ಅಕ್ರಮ ಮಾಡುವುದು ಬಿಜೆಪಿಯವರಿಗೆ ಹೊಸತೇನಲ್ಲ. ಈ ಹಿಂದೆ ವಾರ್ಡ್ ಮರುವಿಂಗಡಣೆಯನ್ನು ರೆವೆನ್ಯೂ ಆಫಿಸರ್ ಗಳ ಮೂಲಕ ಮಾಡಬೇಕಿತ್ತು. ಆದರೆ ಈ ಬಾರಿ ವಾರ್ಡ್ ಮರುವಿಂಗಡಣೆಯನ್ನು ಕೇಶವಕೃಪ, ಬಿಜೆಪಿ ಶಾಸಕರ, ಸಂಸದರ ಕಚೇರಿಯಲ್ಲಿ ಮಾಡಲಾಗಿದೆ. ಅದೇ ರೀತಿ ಇಲ್ಲಿ ಈ ರೀತಿ ಅಕ್ರಮ ಮಾಡಲಾಗಿದೆ’ಎಂದರು.