ದೆಹಲಿಯಲ್ಲಿ ಮಾಧ್ಯಮಗಳ ಮೇಲೂ ಪೊಲೀಸರ ದೌರ್ಜನ್ಯ: ‘ನ್ಯೂಸ್‌ಲಾಂಡ್ರಿ’, ‘ನವಭಾರತ್ ಟೈಮ್ಸ್’, ‘ದಿ ವೈರ್’ ಪತ್ರಕರ್ತರು ಬಂಧನದಲ್ಲಿ!

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಹಮ್ಮಿಕೊಂಡಿರುವ ‘ಜಂತರ್ ಮಂತರ್ 2.0’ ಪ್ರತಿಭಟನೆಯ ಸುದ್ದಿ ಪ್ರಸಾರ ಮಾಡುತ್ತಿದ್ದ ಪತ್ರಕರ್ತರು ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್‌ಗಳನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಹಾಗೂ ವರದಿ ಮಾಡದಂತೆ ತಡೆದಿದ್ದಾರೆ.

ಪ್ರೆಸ್ ಐಡಿ ಕಾರ್ಡ್ ಪ್ರದರ್ಶಿಸುತ್ತಿದ್ದರೂ ಲೆಕ್ಕಿಸದೆ ಪತ್ರಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದು ಮಾಧ್ಯಮ ಸ್ವಾತಂತ್ರ್ಯದ ಕತ್ತು ಹಿಸುಕುವ ಯತ್ನವೆಂದು ವ್ಯಾಪಕ ಟೀಕೆಗೆ ಗುರಿಯಾಗಿದೆ. ವಶಕ್ಕೆ ಒಳಗಾದವರಲ್ಲಿ ‘ನವಭಾರತ್ ಟೈಮ್ಸ್’ ಪತ್ರಕರ್ತರಾದ ಹೃತಿಕ್ ಜೋಶಿ, ರಾಹುಲ್ ಚರಸ್, ‘ನ್ಯೂಸ್‌ಲಾಂಡ್ರಿ’ಯ ಮೂವರು ವರದಿಗಾರರು, ಪಂಜಾಬಿ ಪತ್ರಕರ್ತರು ಹಾಗೂ ‘ಕೆಕೆ ಕ್ರಿಯೇಟ್’ ಖ್ಯಾತಿಯ ಸ್ವತಂತ್ರ ಪತ್ರಕರ್ತೆ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಕಾವ್ಯಾ ಕರ್ನಾಟಕ್ ಮತ್ತು ಅವರ ಸಿಬ್ಬಂದಿ ಸೇರಿದ್ದಾರೆ.

ಮೊಬೈಲ್ ಫೋನ್, ಕ್ಯಾಮೆರಾ ಕಸಿದುಕೊಂಡ ಪೊಲೀಸರು:

‘ನ್ಯೂಸ್‌ಲಾಂಡ್ರಿ’ ತನ್ನ ವರದಿಗಾರರಾದ ಅಶ್ವಿನಿ ಸಿಂಗ್, ಸವ್ಯಸಾಚಿ ಆಸ್ಥಾ ಮತ್ತು ಅನ್ಮೋಲ್ ಪ್ರೀತಮ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ದೃಢಪಡಿಸಿದೆ. ವರದಿಗಾರಿಕೆಗಾಗಿ ಬಳಸುತ್ತಿದ್ದ ಅಧಿಕೃತ ಮೊಬೈಲ್ ಫೋನ್‌ಗಳನ್ನು ಇನ್‌ಸ್ಪೆಕ್ಟರ್ ಧನ್ ಸಿಂಗ್ ಮಲಿಕ್ ಬಲವಂತವಾಗಿ ಕಸಿದುಕೊಂಡಿದ್ದಾರೆ ಎಂದು ಸಂಸ್ಥೆ ಗಂಭೀರವಾಗಿ ಆರೋಪಿಸಿದೆ. ವರದಿಗಾರರು ತಮ್ಮ ಗುರುತಿನ ಚೀಟಿ ತೋರಿಸಿದರೂ, ಪೊಲೀಸರು “ಇಲ್ಲಿ ಯಾವ ಮೀಡಿಯಾನೂ ಇಲ್ಲ” (ಕೋಯಿ ಮೀಡಿಯಾ ನಹೀಂ ಹೈ) ಎಂದು ಏಕವಚನದಲ್ಲಿ ನಿಂದಿಸಿ, ಸುಮಾರು 30 ಪ್ರತಿಭಟನಾಕಾರರ ಜತೆ ಒಂದೇ ಬಸ್‌ನಲ್ಲಿ ಕೂಡಿಹಾಕಿದ್ದಾರೆ ಎನ್ನಲಾಗಿದೆ. “ಪತ್ರಕರ್ತರು ಬಂದಿರುವುದು ವರದಿ ಮಾಡಲು, ಧರಣಿ ನಡೆಸಲಲ್ಲ” ಎಂದು ನ್ಯೂಸ್‌ಲಾಂಡ್ರಿ ಪೊಲೀಸರ ಕ್ರಮವನ್ನು ಪ್ರಶ್ನಿಸಿದೆ.

ಇನ್ನೊಂದೆಡೆ, ವಿಡಿಯೋ ಚಿತ್ರೀಕರಿಸುತ್ತಿದ್ದ ನವಭಾರತ್ ಟೈಮ್ಸ್‌ನ ಹೃತಿಕ್ ಜೋಶಿ ಮತ್ತು ರಾಹುಲ್ ಚರಸ್ ಅವರನ್ನು ವಶಕ್ಕೆ ಪಡೆದು ದರಿಯಾಗಂಜ್ ಕಡೆಗೆ ಕರೆದೊಯ್ಯಲಾಗಿದೆ. ಬಾಬಾ ಖಡಕ್ ಸಿಂಗ್ ಮಾರ್ಗದಲ್ಲಿ ಪಂಜಾಬಿ ಪತ್ರಕರ್ತರಾದ ರಾಜ್‌ವಿಂದರ್ ಸಿಂಗ್, ಲಖ್‌ವಿಂದರ್ ಸಿಂಗ್ ಮತ್ತು ಜೋಗಿಂದರ್ ಸಿಂಗ್ ಅವರನ್ನು ತಡೆಹಿಡಿಯಲಾಗಿದೆ. ಮಫ್ತಿ ಪೊಲೀಸರು ಸಾರ್ವಜನಿಕರನ್ನು ವಶಕ್ಕೆ ಪಡೆಯುತ್ತಿದ್ದ ದೃಶ್ಯಗಳನ್ನು ರೆಕಾರ್ಡ್ ಮಾಡುತ್ತಿದ್ದ ಮಾಧ್ಯಮದವರಿಂದ ಕ್ಯಾಮೆರಾಗಳನ್ನು ಕಿತ್ತುಕೊಳ್ಳಲಾಗಿದೆ ಎಂದು ಪತ್ರಕರ್ತ ಸಂದೀಪ್ ಸಿಂಗ್ ಆರೋಪಿಸಿದ್ದಾರೆ.

ಅಲ್ಲದೆ, ‘ದಿ ವೈರ್’ ಪತ್ರಕರ್ತ ಅಂಕಿತ್ ರಾಜ್ ಅವರನ್ನು ಲೋಧಿ ರಸ್ತೆಯಲ್ಲಿ ವರದಿ ಮಾಡದಂತೆ ಪೊಲೀಸರು ನಿರ್ಬಂಧಿಸಿದ್ದರೆ, ಸಂಸ್ಥೆಯ ಶ್ರಾವಸ್ತಿ ದಾಸ್‌ಗುಪ್ತಾ ಮತ್ತು ಸಹೋದ್ಯೋಗಿಗಳನ್ನು ವಶಕ್ಕೆ ಪಡೆಯಲು ಯತ್ನಿಸಲಾಗಿದ್ದು, ಇತರ ಪತ್ರಕರ್ತರು ಒಗ್ಗೂಡಿದ ನಂತರವಷ್ಟೇ ಬಿಡಲಾಯಿತು ಎಂದು ತಿಳಿದುಬಂದಿದೆ.

Related Articles

ಇತ್ತೀಚಿನ ಸುದ್ದಿಗಳು