ಆಕಾಶವಾಣಿ ಭವನಕ್ಕೆ ಅಕ್ರಮ ಪ್ರವೇಶ ಆರೋಪ: ರಾಹುಲ್ ಗಾಂಧಿ, ಪ್ರಿಯಾಂಕಾ ಸೇರಿ ಇಂಡಿಯಾ ನಾಯಕರ ವಿರುದ್ಧ ದೆಹಲಿ ಪೊಲೀಸರಿಂದ ಎಫ್‌ಐಆರ್

ಚುನಾವಣಾ ಆಯೋಗದ ವಿರುದ್ಧ ಮಂಗಳವಾರ ‘ಇಂಡಿಯಾ’ (INDIA) ಒಕ್ಕೂಟ ನಡೆಸಿದ ಪ್ರತಿಭಟನೆಯ ವೇಳೆ ಆಕಾಶವಾಣಿ ಭವನದ ಆವರಣಕ್ಕೆ ಬಲವಂತವಾಗಿ ನುಗ್ಗಿದ ಆರೋಪದ ಮೇಲೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಪ್ರಮುಖ ವಿಪಕ್ಷ ಮುಖಂಡರ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಆಕಾಶವಾಣಿ ಭವನದ ಸಿಬ್ಬಂದಿ ನೀಡಿದ ಅಧಿಕೃತ ದೂರಿನ ಮೇರೆಗೆ ಅಪರಾಧ ಉದ್ದೇಶದ ಅಕ್ರಮ ಪ್ರವೇಶ (ಕ್ರಿಮಿನಲ್ ಟ್ರೆಸ್‌ಪಾಸ್) ಆರೋಪದಡಿ ಈ ಪ್ರಕರಣ ದಾಖಲಾಗಿದ್ದು, ಕನಿಷ್ಠ 10 ಸಂಸದರ ಹೆಸರುಗಳನ್ನು ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ.

ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಸಂಸತ್ ಭವನದಿಂದ ಭಾರತೀಯ ಚುನಾವಣಾ ಆಯೋಗದ (ECI) ಕಚೇರಿಯತ್ತ ವಿಪಕ್ಷ ನಾಯಕರು ಮಂಗಳವಾರ ಪಾದಯಾತ್ರೆ ಆರಂಭಿಸಿದ್ದರು.

ಹೊಸದೆಹಲಿ ವ್ಯಾಪ್ತಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಹಾಗೂ ಪ್ರತಿಭಟನೆಗೆ ಡಿಸಿಪಿಯಿಂದ ಯಾವುದೇ ಪೂರ್ವಾನುಮತಿ ಪಡೆಯದ ಕಾರಣ ಪೊಲೀಸರು ಬ್ಯಾರಿಕೇಡ್ ಹಾಕಿ ಜಾಥಾವನ್ನು ತಡೆದಿದ್ದರು.

ಆದರೆ, ಬ್ಯಾರಿಕೇಡ್‌ಗಳನ್ನು ದಾಟಿದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಇತರ ನಾಯಕರು ಆಕಾಶವಾಣಿ ಭವನದೊಳಗೆ ಪ್ರವೇಶಿಸಿ ಸುಮಾರು ಒಂಬತ್ತು ಗಂಟೆಗಳ ಕಾಲ ಧರಣಿ ಮುಂದುವರಿಸಿದ್ದರು. ಅಂತಿಮವಾಗಿ 10 ಸಂಸದರು ಸೇರಿದಂತೆ ಸುಮಾರು 260 ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಆದರೆ ಈ ಆರೋಪಗಳನ್ನು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ತಳ್ಳಿಹಾಕಿದ್ದಾರೆ. “ರಾಹುಲ್ ಗಾಂಧಿ ಯಾವುದೇ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿಲ್ಲ, ಅವರೊಂದಿಗೆ ಹತ್ತಾರು ಸಂಸದರಿದ್ದರು. ಆಕಾಶವಾಣಿ ಈ ದೇಶದ ಆಸ್ತಿಯೇ ಹೊರತು ಯಾವುದೇ ಒಂದು ರಾಜಕೀಯ ಪಕ್ಷದ ಸ್ವತ್ತಲ್ಲ. ಅಧಿಕಾರಿಗಳು ವಿಪಕ್ಷ ನಾಯಕರ ಭೇಟಿಗೂ ಅವಕಾಶ ನಿರಾಕರಿಸುತ್ತಿದ್ದಾರೆ. ಇಂತಹ ರಾಜಕೀಯ ಪ್ರೇರಿತ ಎಫ್‌ಐಆರ್‌ಗಳಿಗೆ ವಿರೋಧ ಪಕ್ಷಗಳು ಯಾವುದೇ ಕಾರಣಕ್ಕೂ ಹೆದರುವುದಿಲ್ಲ” ಎಂದು ತಿರುಗೇಟು ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು