ದಶಕಗಳಿಂದ ಆಡಳಿತ ನಡೆಸುವ ಪ್ರಭುತ್ವಕ್ಕೆ ಜನಸಾಮಾನ್ಯರ ಧ್ವನಿ ಮತ್ತು ಅಳಲನ್ನು ಮುಟ್ಟಿಸುವ ಪ್ರಮುಖ ವೇದಿಕೆಯಾಗಿದ್ದ ಸೆಂಟ್ರಲ್ ದೆಹಲಿಯ ‘ಜಂತರ್ ಮಂತರ್’ ಇದೀಗ ಸರ್ಕಾರದ ಕಠಿಣ ನಿರ್ಬಂಧಗಳ ನಡುವೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಚಳವಳಿ, ನಿರ್ಭಯಾ ಸಾಮೂಹಿಕ ಅತ್ಯಾಚಾರ ಘಟನೆಯ ನಂತರದ ಜನಾಕ್ರೋಶ, ರೈತರ ಧರಣಿಗಳಿಂದ ಹಿಡಿದು ಇತ್ತೀಚಿನ ನೀಟ್ (NEET) ಪರೀಕ್ಷಾ ಅಕ್ರಮಗಳವರೆಗಿನ ಅನೇಕ ರಾಷ್ಟ್ರೀಯ ಮಟ್ಟದ ಸಾರ್ವಜನಿಕ ಹೋರಾಟಗಳಿಗೆ ಈ ತಾಣವು ನೇರ ಸಾಕ್ಷಿಯಾಗಿ ನಿಂತಿದೆ.
ಆದರೆ, ದೆಹಲಿ ಪೊಲೀಸರು ಈ ಸ್ಥಳವನ್ನು ಅಧಿಕೃತ ‘ಪ್ರತಿಭಟನಾ ತಾಣಗಳ’ ಪಟ್ಟಿಯಿಂದ ಕೈಬಿಟ್ಟಿರುವುದರಿಂದ, ಸಂವಿಧಾನ ನೀಡಿರುವ ಶಾಂತಿಯುತ ಪ್ರತಿಭಟನೆಯ ಹಕ್ಕಿನ ಭವಿಷ್ಯದ ಕುರಿತು ಪ್ರಜಾಪ್ರಭುತ್ವವಾದಿಗಳು ಹಾಗೂ ನಾಗರಿಕ ಹಕ್ಕುಗಳ ಹೋರಾಟಗಾರರಲ್ಲಿ ತೀವ್ರ ಕಳವಳ ವ್ಯಕ್ತವಾಗಿದೆ.
ರಾಜಧಾನಿಯ ಹೃದಯಭಾಗದಲ್ಲಿರುವ ಜಂತರ್ ಮಂತರ್ ಭ್ರಷ್ಟಾಚಾರ, ಸಾಮಾಜಿಕ ಅನ್ಯಾಯ, ಮಹಿಳಾ ಸುರಕ್ಷತೆ, ರೈತರ ಕಷ್ಟಗಳು ಹಾಗೂ ಸರ್ಕಾರಿ ಪರೀಕ್ಷೆಗಳ ಅಕ್ರಮಗಳಂತಹ ನಾನಾ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ವಿವಿಧ ಸ್ತರದ ಜನರನ್ನು ಒಗ್ಗೂಡಿಸುತ್ತಿತ್ತು. ಸರ್ಕಾರದ ಆರ್ಥಿಕ ನೀತಿಗಳು ಮತ್ತು ಕೋಮುವಾದದ ವಿರುದ್ಧ 1993ರಲ್ಲಿ 33 ಸಂಘಟನೆಗಳು ಒಟ್ಟಾಗಿ ನಡೆಸಿದ ‘ಜೈಲ್ ಭರೋ’ ಚಳವಳಿಯು ಇಲ್ಲಿ ನಡೆದ ಪ್ರಮುಖ ಆರಂಭಿಕ ಬೃಹತ್ ಪ್ರತಿಭಟನೆಗಳಲ್ಲಿ ಒಂದಾಗಿದೆ.
ಆ ಸಮಯದಲ್ಲಿ ಸುಮಾರು 25,000 ಜನರು ಭಾಗವಹಿಸಿದ್ದರು ಎಂಬ ವಿಚಾರವು ಸಂಸತ್ತಿನಲ್ಲೂ ಚರ್ಚೆಗೆ ಬಂದಿತ್ತು. ಆ ಬಳಿಕ 2011ರ ಏಪ್ರಿಲ್ನಲ್ಲಿ ಲೋಕಪಾಲ ಮಸೂದೆಗಾಗಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಕೈಗೊಂಡ ಐದು ದಿನಗಳ ಉಪವಾಸ ಸತ್ಯಾಗ್ರಹವು ಜಂತರ್ ಮಂತರ್ ಅನ್ನು ದೇಶವ್ಯಾಪಿ ಸಾರ್ವಜನಿಕ ಆಂದೋಲನದ ಪ್ರಮುಖ ಕೇಂದ್ರವನ್ನಾಗಿ ರೂಪಿಸಿತು.
2012ರ ನಿರ್ಭಯಾ ಪ್ರಕರಣ ಮತ್ತು 2014ರಲ್ಲಿ ಆಗ್ನೇಯ ದೆಹಲಿಯಲ್ಲಿ ಹಲ್ಲೆಗೊಳಗಾಗಿ ಮೃತಪಟ್ಟ ಅರುಣಾಚಲ ಪ್ರದೇಶದ ವಿದ್ಯಾರ್ಥಿ ನಿಡೋ ತಾನಿಯಾ ಸಾವಿನ ಬಳಿಕವೂ ನ್ಯಾಯಕ್ಕಾಗಿ ಸಾವಿರಾರು ಜನರು ಧರಣಿ ಕುಳಿತಿದ್ದು ಇದೇ ತಾಣದಲ್ಲಿ.
ಕೇವಲ ಸಾಮಾಜಿಕ ಸಮಸ್ಯೆಗಳಷ್ಟೇ ಅಲ್ಲದೆ, ರೈತರು ಮತ್ತು ಕ್ರೀಡಾಪಟುಗಳ ಹಕ್ಕುಗಳ ಹೋರಾಟಕ್ಕೂ ಇದು ಪ್ರಮುಖ ನೆಲೆಯಾಗಿ ಉಳಿದುಕೊಂಡಿತ್ತು. 2017ರಲ್ಲಿ ಕೃಷಿ ಬಿಕ್ಕಟ್ಟು, ಸಾಲದ ಹೊರೆ ಮತ್ತು ಬರಗಾಲದ ನಷ್ಟಗಳನ್ನು ಎತ್ತಿಹಿಡಿದು ತಮಿಳುನಾಡು ರೈತರು ಬರೋಬ್ಬರಿ 41 ದಿನಗಳ ಕಾಲ ವಿಶಿಷ್ಟ ರೀತಿಯ ಪ್ರತಿಭಟನೆ ನಡೆಸಿದ್ದರು.
2023ರಲ್ಲಿ ಒಲಿಂಪಿಕ್ ಪದಕ ವಿಜೇತರು ಸೇರಿದಂತೆ ಪ್ರಮುಖ ಕುಸ್ತಿಪಟುಗಳು ಅಂದಿನ ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ, ಕ್ರಮಕ್ಕೆ ಒತ್ತಾಯಿಸಿ ಧರಣಿ ಕುಳಿತಿದ್ದರು. ಅದೇ ರೀತಿ 2024 ಮತ್ತು 2026ರ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ವಿವಾದಗಳ ವಿರುದ್ಧದ ದೇಶವ್ಯಾಪಿ ವಿದ್ಯಾರ್ಥಿ ಆಕ್ರೋಶಕ್ಕೂ ಜಂತರ್ ಮಂತರ್ ಸಾಕ್ಷಿಯಾಯಿತು.
ಇತ್ತೀಚೆಗೆ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ಜಂತರ್ ಮಂತರ್ನಲ್ಲಿ ಕರೆಯಲಾಗಿದ್ದ ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದಲ್ಲದೆ, ಇಡೀ ದೆಹಲಿಯನ್ನು ಅಘೋಷಿತ ದಿಗ್ಬಂಧನದಲ್ಲಿಟ್ಟಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಡುವೆ, ಜಂತರ್ ಮಂತರ್ ಅನ್ನು ಅಧಿಕೃತ ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದಲೇ ಹೊರಗಿಡುವ ಮೂಲಕ ಪ್ರಭುತ್ವವು ಜನರ ಅಸಮ್ಮತಿಯ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ಮತ್ತು ನಾಗರಿಕ ಸಮಾಜದ ಮುಖಂಡರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
