ಧರ್ಮಕ್ಕೂ ಪಟಾಕಿ ಸಿಡಿಸುವುದಕ್ಕೂ ಏನು ಸಂಬಂಧ?: ದೆಹಲಿ ವಾಯುಮಾಲಿನ್ಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮಹತ್ವದ ಪ್ರಶ್ನೆ

ಹಬ್ಬಗಳ ಸಂದರ್ಭದಲ್ಲಿ ಪಟಾಕಿ ಸಿಡಿಸುವುದಕ್ಕೂ ಧರ್ಮಕ್ಕೂ ಏನು ಸಂಬಂಧ ಎಂದು ಸೋಮವಾರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮಹತ್ವದ ಪ್ರಶ್ನೆ ಎತ್ತಿದೆ. ದೆಹಲಿ-ಎನ್‌ಸಿಆರ್ (Delhi-NCR) ವ್ಯಾಪ್ತಿಯಲ್ಲಿ ಹಬ್ಬಗಳ ಋತುವಿನಲ್ಲಿ ಹೆಚ್ಚಾಗುವ ತೀವ್ರ ವಾಯುಮಾಲಿನ್ಯದ ಕುರಿತು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠವು, ಧಾರ್ಮಿಕ ನಂಬಿಕೆಗಳು ಹಾಗೂ ಪರಿಸರ ಸಂರಕ್ಷಣೆ ಎರಡನ್ನೂ ಪರಿಗಣಿಸಿ ಸಮತೋಲಿತ ದೃಷ್ಟಿಕೋನದಿಂದ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದೆ.

ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿ ಹಾಜರಾಗಿದ್ದ ಹಿರಿಯ ವಕೀಲೆ ಅಪರಾಜಿತಾ ಸಿಂಗ್ ವಾದ ಮಂಡಿಸಿ, “ಪ್ರತಿ ವರ್ಷ ಪಟಾಕಿ ಸಿಡಿಸುವ ಪ್ರವೃತ್ತಿ ಹೆಚ್ಚುತ್ತಲೇ ಸಾಗಿದೆ. ತಮ್ಮ ಹೆಸರಿನಲ್ಲಿ ಸಿಡಿಸುವ ಪಟಾಕಿ ಹೊಗೆಯಿಂದಾಗಿ ಪುಟ್ಟ ಮಕ್ಕಳು ಉಸಿರಾಟದ ತೊಂದರೆ ಅನುಭವಿಸಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂಬುದು ತಿಳಿದರೆ ಸಾಕ್ಷಾತ್ ದೇವರೇ ದಿಗ್ಭ್ರಮೆಗೊಳ್ಳಬಹುದು,” ಎಂದು ಕಳವಳ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್, “ನಾವು ಯಾವುದೇ ಧಾರ್ಮಿಕ ಆಚರಣೆಗಳಿಗೆ ಧಕ್ಕೆ ತರುವುದಿಲ್ಲ. ಕಾನೂನಿಗಿಂತಲೂ ಜನರು ಸ್ವಯಂ ಆತ್ಮಾವಲೋಕನ ಮಾಡಿಕೊಳ್ಳುವುದು ಅತ್ಯಂತ ಪರಿಣಾಮಕಾರಿ ವಿಧಾನ. ಹಬ್ಬಗಳನ್ನು ಪರಿಸರಕ್ಕೆ ಹಾನಿಯಾಗದಂತೆ ಜವಾಬ್ದಾರಿಯುತವಾಗಿ ಆಚರಿಸುವ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬಹುದು,” ಎಂದು ಪ್ರತಿಪಾದಿಸಿದರು. ಇದಕ್ಕೆ ಉತ್ತರಿಸಿದ ವಕೀಲರು, ದುರದೃಷ್ಟವಶಾತ್ ಪ್ರತಿ ವರ್ಷ ನ್ಯಾಯಾಲಯದಲ್ಲಿ ಇದೇ ವಾದಗಳು ಪುನರಾವರ್ತನೆಯಾಗುತ್ತಿವೆಯೇ ಹೊರತು ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನದಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು.

ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಅತ್ಯಂತ ಹಾನಿಕಾರಕ ಪಟಾಕಿಗಳ ಮಾರಾಟದ ಮೇಲೆ ಕಠಿಣ ನಿಯಂತ್ರಣ ಹೇರಲು ಮತ್ತು ನಿರ್ದಿಷ್ಟ ಸುರಕ್ಷಿತ ಪಟಾಕಿಗಳು ಮಾತ್ರ ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳುವಂತೆ ಪ್ರಸ್ತಾಪಿಸಿತು. ಅಲ್ಲದೆ, ನಿರ್ದಿಷ್ಟ ಅವಧಿಯಲ್ಲಿ ಪಟಾಕಿ ಸಿಡಿಸುವುದನ್ನು ಸೀಮಿತಗೊಳಿಸುವಂತೆ ಸಾರ್ವಜನಿಕರಿಗೆ ಕರಪತ್ರಗಳ ಮೂಲಕ ಜಾಗೃತಿ ಮೂಡಿಸಲು ಸಲಹೆ ನೀಡಿತು. ಈ ಎಲ್ಲಾ ಸಲಹೆಗಳನ್ನು ವಾಯು ಗುಣಮಟ್ಟ ನಿರ್ವಹಣಾ ಪ್ರಾಧಿಕಾರಕ್ಕೆ (CAQM) ಕಳುಹಿಸುವಂತೆ ನ್ಯಾಯಾಲಯ ಸೂಚಿಸಿತು.

Related Articles

ಇತ್ತೀಚಿನ ಸುದ್ದಿಗಳು