ಮಾನ್ಯ ಎಂಬ ಲಿಂಗಾಯಿತ ಸಮುದಾಯದ ಯುವತಿ ವಿವೇಕಾನಂದ ಎನ್ನುವ ದಲಿತ ಸಮುದಾಯದ ಯುವಕನನ್ನು ವಿವಾಹವಾಗಿದ್ದ ಕಾರಣಕ್ಕೆ, ಇದೇ ಡಿಸೆಂಬರ್ 21 ರಂದು ಆಕೆ ಗರ್ಭಿಣಿಯಿದ್ದಾಗಲೇ ಅವಳ ತಂದೆ ಹುಬ್ಬಳ್ಳಿಯಲ್ಲಿ ಬರ್ಬರವಾಗಿ ಕೊಲೆ ಮಾಡಿ, ಆಕೆಯ ಗಂಡ ಮತ್ತವನ ತಂದೆತಾಯಿಗಳ ಮೇಲೂ ದೈಹಿಕವಾಗಿ ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಕುಟುಂಬಕ್ಕೆ ನ್ಯಾಯಕ್ಕಾಗಿ ಆಗ್ರಹಿಸಿ ರಾಜ್ಯದ ನಾನಾ ಭಾಗಗಳ ಸಮಾನ ಮನಸ್ಕ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯ ಮಾಡಲು ನಿರ್ಧರಿಸಿವೆ. ಅದರಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಘಟನೆಗಳು ಈ ರೀತಿಯಾಗಿ ಆಗ್ರಹಿಸಿವೆ.
“….. ಜಾತಿಗಳು ರಾಷ್ಟ್ರ-ವಿರೋಧಿ ಆಗಿವೆ. ಏಕೆಂದರೆ ಮೊದಲನೆಯದಾಗಿ, ಅವುಗಳು ಸಾಮಾಜಿಕ ಬದುಕಿನಲ್ಲಿ ಪ್ರತ್ಯೇಕತೆಯನ್ನು ತರುತ್ತವೆ. ಅವು ರಾಷ್ಟ್ರವಿರೋಧಿಯೂ ಆಗಿವೆ ಏಕೆಂದರೆ, ಜಾತಿ ಜಾತಿಗಳ ನಡುವೆ ಅವುಗಳು ಅಸೂಯೆ ಮತ್ತು ವೈರತ್ವವನ್ನು ಸೃಷ್ಟಿಸುತ್ತವೆ. ಆದರೆ ವಾಸ್ತವದಲ್ಲಿ ನಾವೇನಾದರೂ ಒಂದೇ ರಾಷ್ಟ್ರವಾಗಬೇಕೆಂದು ಇಚ್ಛಿಸಿದಲ್ಲಿ, ಈ ಅಡೆತಡೆಗಳನ್ನೆಲ್ಲಾ ದಾಟಿ ಮುನ್ನಡೆಯಬೇಕು. ಏಕೆಂದರೆ ಒಂದು ರಾಷ್ಟ್ರವಿದ್ದಾಗ ಮಾತ್ರವೇ ಸಹೋದರತ್ವ ನಿಜವಾಗಲು ಸಾಧ್ಯ. ಸಹೋದರತ್ವ ಇಲ್ಲದೆಯೇ ಸಮಾನತೆ ಮತ್ತು ಸ್ವಾತಂತ್ರ್ಯಗಳು ಬಣ್ಣ ಬಳಿದಂತೆ ಮೇಲ್ಪದರದಲ್ಲಿ ಮಾತ್ರ ಉಳಿಯಲಿವೆ.”
ಡಾ. ಬಾಬಾಸಾಹೇಬ್ ಅಂಬೇಡ್ಕರ್
ಮಾನ್ಯ ಎಂಬ ಲಿಂಗಾಯಿತ ಸಮುದಾಯದ ಯುವತಿ ವಿವೇಕಾನಂದ ಎನ್ನುವ ದಲಿತ ಸಮುದಾಯದ ಯುವಕನನ್ನು ವಿವಾಹವಾಗಿದ್ದ ಕಾರಣಕ್ಕೆ, ಇದೇ ಡಿಸೆಂಬರ್ 21 ರಂದು ಆಕೆ ಗರ್ಭಿಣಿಯಿದ್ದಾಗಲೇ ಅವಳ ತಂದೆ ಹುಬ್ಬಳ್ಳಿಯಲ್ಲಿ ಬರ್ಬರವಾಗಿ ಕೊಲೆ ಮಾಡಿ, ಆಕೆಯ ಗಂಡ ಮತ್ತವನ ತಂದೆತಾಯಿಗಳ ಮೇಲೂ ದೈಹಿಕವಾಗಿ ದಾಳಿ ನಡೆಸಿದ್ದ. ಇದನ್ನು ವಿರೋಧಿಸಿ 2025 ಡಿಸೆಂಬರ್ 26 ರಂದು ಪ್ರಗತಿಪರ, ದಲಿತ, ಮಹಿಳಾ ಮತ್ತು ಎಡಪಂಥೀಯ ಸಂಘಟನೆಗಳು ಬೆಂಗಳೂರಿನ ಫ್ರೀಡಮ್ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದವು.
ನಮ್ಮ ದೇಶದಲ್ಲಿ ಇನ್ನೂ ಜಾತಿ ವ್ಯವಸ್ಥೆ ಹೇಗೆ ಜನರ ಬದುಕನ್ನು ನಿಯಂತ್ರಿಸುತ್ತ ನಿರ್ದೇಶಿಸುತ್ತಿದೆ ಎಂಬುದಕ್ಕೆ ಇದು ಕಠೋರ ಸಾಕ್ಷಿಯಾಗಿದೆ. “ಮರ್ಯಾದಾ ಹತ್ಯೆ” ಎಂದು ಕರೆಯಲಾಗುವ ಇವುಗಳಲ್ಲಿ ಯಾವ ಮರ್ಯಾದೆಯೂ ಇಲ್ಲ. ಬದಲಿಗೆ, ಇವು ಜಾತಿ ದೌರ್ಜನ್ಯದ ಭೀಕರ ಕೊಲೆಗಳೇ ಆಗಿದ್ದು, ಈ ಹತ್ಯೆಗಳು ಮಹಿಳೆಯರ ದೇಹಗಳನ್ನು ಮತ್ತು ನಿರ್ಧಾರಗಳನ್ನು ನಿಯಂತ್ರಿಸುವ ಗುರಿ ಹೊಂದಿದ ಪುರುಷಪ್ರಾಧಾನ್ಯದ ಅಸ್ತ್ರಗಳೂ ಆಗಿವೆ. ಈ ಮೂಲಕ ಸಮಾಜದಲ್ಲಿ ಭಯ ಭೀತಿ ಹುಟ್ಟಿಸುತ್ತ ಜಾತಿ ವ್ಯವಸ್ಥೆಯನ್ನು ಉಳಿಸಿಕೊಂಡು ಜಾತಿಯೊಳಗೇ ಮದುವೆಗಳನ್ನು ಹೇರಬೇಕೆಂಬ ಹುನ್ನಾರವೂ ಇದರಲ್ಲಿ ಅಡಗಿದೆ. ತನ್ನ ಮಗಳ ಜೀವವನ್ನೇ ತೆಗೆಯುವ ಮಟ್ಟಕ್ಕೆ ಒಬ್ಬ ತಂದೆ ಹೋಗುತ್ತಾನೆಂದರೆ, ಅದು ಜಾತಿ ವ್ಯವಸ್ಥೆಯಲ್ಲಿ ಅಂತರ್ಗತವಾದ ಬರ್ಬರತೆ ಮತ್ತು ಕ್ರೌರ್ಯಗಳ ವೈಪರೀತ್ಯವನ್ನು ತೆರೆದಿಡುತ್ತದೆ. ಇಂತಹ ದುಷ್ಕೃತ್ಯಗಳು ಸಂವಿಧಾನದ ಬುನಾದಿಯ ಮೇಲೇ ದಾಳಿಗೈಯುತ್ತ, ಅದರ ಅತ್ಯಂತ ಮೂಲಭೂತ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವ ಇವುಗಳನ್ನು ನೇರವಾಗಿ ಉಲ್ಲಂಘಿಸುತ್ತವೆ.
ಸರ್ವೋಚ್ಛ ನ್ಯಾಯಾಲಯವು “ಮರ್ಯಾದಾ ಹತ್ಯೆ”ಗಳು ಎಂದು ಕರೆಯಲ್ಪಡುವ ಕೊಲೆಗಳು ಕಠಿಣ ಶಿಕ್ಷೆಗೆ ಅರ್ಹವೆಂದು ಹೇಳುತ್ತ, ಅಂತರ್ಜಾತಿ ಮದುವೆಗಳು ಜಾತಿ ವಿಭಜನೆಯನ್ನು ತೊಡೆದುಹಾಕಿ ಐಕ್ಯತೆಯನ್ನು ಉತ್ತೇಜಿಸುವುದರಿಂದ ಅವು ರಾಷ್ಟ್ರದ ಹಿತಾಸಕ್ತಿಯನ್ನು ಕಾಪಾಡುತ್ತವೆ ಎಂದು ಉಚ್ಚರಿಸಿದೆ. ಇನ್ನೊಂದು ಪ್ರಕರಣದಲ್ಲಿ ಇದೇ ಸರ್ವೋಚ್ಚ ನ್ಯಾಯಾಲಯವು ಇಂತಹ ಹತ್ಯೆಗಳನ್ನು ತಡೆಯಲು, ಅವುಗಳ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿ, ಮರ್ಯಾದಾಗೇಡು ಹತ್ಯೆಗಳ ವಿರುದ್ಧ ಕಾನೂನನ್ನು ರೂಪಿಸುವಂತೆ ಸರ್ಕಾರಗಳಿಗೆ ಶಿಫಾರಸು ಮಾಡಿದೆ.
ಮದುವೆಯಾದ ನಂತರ ಮಾನ್ಯ ಮತ್ತು ವಿವೇಕಾನಂದ ದಂಪತಿ ಜೀವ ಬೆದರಿಕೆಯಿಂದ ಹಾವೇರಿಗೆ ಹೋಗಿ, ನಂತರ ಹುಬ್ಬಳ್ಳಿಯ ತಮ್ಮ ಗ್ರಾಮಕ್ಕೆ ಹಿಂದಿರುಗಿದ್ದರೆಂದು ವರದಿಯಾಗಿದೆ. ಆಗಲೇ ಈ ಅಮಾನವೀಯ ಘಟನೆ ನಡೆದಿರುವುದು. ಈ ಅವಧಿಯಲ್ಲಿ ಅವರಿಗೆ ರಕ್ಷಣೆ ಯಾಕೆ ಸಿಗಲಿಲ್ಲ ಎನ್ನುವುದು ನಮ್ಮನ್ನು ಕಾಡುವ ಪ್ರಶ್ನೆಯಾಗಿದೆ. ಹತ್ಯೆ ನಡೆದ ನಂತರವಷ್ಟೇ ವ್ಯವಸ್ಥೆ ಕಾರ್ಯರೂಪಕ್ಕೆ ಇಳಿಯುವುದಲ್ಲ, ಇಂತಹ ಅಪರಾಧಗಳನ್ನು ತಡೆಗಟ್ಟಲು ಮತ್ತು ಜಾತಿ ವಿನಾಶ ಮಾಡಲು ಅದು ತಕ್ಷಣ ಕ್ರಮ ಕೈಗೊಳ್ಳಬೇಕು.
*ನಮ್ಮ ಹಕ್ಕೊತ್ತಾಯಗಳು*
* ಮಾನ್ಯ-ವಿವೇಕಾನಂದ ದಂಪತಿಯ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಕೂಡಲೇ ನೀಡಬೇಕು.
* ವಿವೇಕಾನಂದ ಮತ್ತು ಅವರ ಕುಟುಂಬಕ್ಕೆ ಭದ್ರತೆ, ಸ್ವಾತಂತ್ರ್ಯ ಮತ್ತು ಘನತೆಯಿಂದ ಬದುಕುವ ಹಕ್ಕನ್ನು ಖಾತ್ರಿಪಡಿಸಲು ಸಾಕಷ್ಟು ರಕ್ಷಣೆ ಒದಗಿಸಬೇಕು.
* ವಿವೇಕಾನಂದ ಅವರಿಗೆ ಸರ್ಕಾರಿ ನೌಕರಿ ಒದಗಿಸಬೇಕು
* ಸರ್ಕಾರವು ನ್ಯಾಯಯುತವಾದ, ಪ್ರಾಮಾಣಿಕವಾದ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ನಡೆಸಬೇಕು, ಮತ್ತು ಈ ಅಪರಾಧವನ್ನು ಯೋಜಿಸಿದ, ಅದರಲ್ಲಿ ಭಾಗಿಯಾದ ಅಥವಾ ಅದಕ್ಕೆ ನೆರವಾದವರೂ ಸೇರಿದಂತೆ ಎಲ್ಲಾ ತಪ್ಪಿತಸ್ಥರಿಗೂ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು.
* ಮರ್ಯಾದಾಗೇಡು ಹತ್ಯೆಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರವು ಸಮಗ್ರ ಕಾಯಿದೆಯನ್ನು ರೂಪಿಸಲು, ಸಾರ್ವಜನಿಕ ಸಂವಾದಗಳು ಸೇರಿದಂತೆ ಸರ್ಕಾರ ತಕ್ಷಣವೇ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಕಾಯಿದೆಯು ಈ ಹತ್ಯೆಗಳನ್ನು ತಡೆದು, ಸಂತ್ರಸ್ತರನ್ನು ರಕ್ಷಣೆ ಮಾಡುತ್ತ, ಸಾಕ್ಷಿಗಳಿಗೆ ರಕ್ಷಣೆ ಕಲ್ಪಿಸುತ್ತ, ಸಂತ್ರಸ್ತರಿಗೆ ಪರಿಹಾರ ಒದಗಿಸಿ, ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕನ್ನು ಎತ್ತಿಹಿಡಿದು ಕಾಪಾಡುವಂತಿರಬೇಕು.
* ಸರ್ಕಾರವು ಶಕ್ತಿ ವಾಹಿನಿ v ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಮರ್ಯಾದಾಗೇಡು ಹತ್ಯೆಗಳನ್ನು ತಡೆಗಟ್ಟುವ, ಅವುಗಳ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಕ್ರಮಗಳನ್ನು ಕೈಗೊಳ್ಳಬೇಕು.
* ಜಾತಿ-ಆಧಾರಿತ ಹಿಂಸಾಚಾರ ಮತ್ತು ಪುರುಷಪ್ರಧಾನ ರೂಢಿಗತ ಮಾದರಿಗಳನ್ನು ತೊಡೆದುಹಾಕುವ ಕುರಿತು ಹಾಗೂ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವದ ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಸರ್ಕಾರಗಳು ಪೊಲೀಸರಿಗೆ, ಸ್ಥಳೀಯ ಅಧಿಕಾರಿಗಳಿಗೆ, ಮತ್ತು ಸಾರ್ವಜನಿಕರಿಗೆ ಸಂವೇದನೆ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಬೇಕು.
* ಸಮಸ್ತ ಜನರಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವದ ಸಾಂವಿಧಾನಿಕ ಭರವಸೆಯನ್ನು ಖಾತ್ರಿಪಡಿಸುವ ಸಲುವಾಗಿ ಸರ್ಕಾರವು ಸಂಪೂರ್ಣ ಜಾತಿ ವಿನಾಶದ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಬೇಕು.
*ಭಾಗವಹಿಸಿದ ಸಂಘಟನೆಗಳು*
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ), ದಸಂಸ ಒಕ್ಕೂಟ, ದಲಿತ ಸಂಘರ್ಷ ಸಮಿತಿ (ಸಂಯೋಜಕ), ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ, ತಮಟೆ ಮೀಡಿಯಾ, AISA, ಸ್ಲಂ ಜನಾಂದೋಲನ – ಕರ್ನಾಟಕ, ಸ್ಲಂ ಜನರ ಸಂಘಟನೆ – ಕರ್ನಾಟಕ, ಜನವಾದಿ ಮಹಿಳಾ ಸಂಘಟನೆ, ಬಯಲು ಬಳಗ, AICCTU, AIMSS, AIPWA, NFIW, All India Save Education Committee, ಬಹುತ್ವ ಕರ್ನಾಟಕ, ನಾವೆದ್ದು ನಿಲ್ಲದಿದ್ದರೆ, SFI, DHS, ಗಮನ ಮಹಿಳಾ ಸಮೂಹ, ಪಿ.ಯು.ಸಿ.ಎಲ್ – ಕರ್ನಾಟಕ , ಕರ್ನಾಟಕ ಜನಶಕ್ತಿ, ಕರ್ನಾಟಕ ವಿದ್ಯಾರ್ಥಿ ಸಂಘಟನೆ
ಹೆಚ್ಚಿನ ಮಾಹಿತಿಗೆ ಕರೆ ಮಾಡಿ – 9448059406, 9880595032, 9243190014, 8660096821, 9449040780
