ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾಡಳಿತ ಹೊರಡಿಸಿದ್ದ ಗಡಿಪಾರು ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ರಾಯಚೂರಿನ ಮಾನ್ವಿಗೆ ಅವರನ್ನು ಗಡಿಪಾರು ಮಾಡುವ ಆದೇಶವನ್ನು ಪ್ರಶ್ನಿಸಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಸ್ವೀಕರಿಸಿ ತೀರ್ಪು ನೀಡಿದೆ.
ಹೈಕೋರ್ಟ್ ನೀಡಿದ ತೀರ್ಪಿನಂತೆ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಉಪವಿಭಾಗಾಧಿಕಾರಿಗೆ 15 ದಿನಗಳೊಳಗೆ ಸೂಕ್ತ ಕಾರಣ ಹಾಗೂ ಸಂಬಂಧಿತ ಕಾನೂನು ಸೆಕ್ಷನ್‍ಗಳೊಂದಿಗೆ ವಿಚಾರಣೆ ನಡೆಸಿ ಹೊಸ ಆದೇಶ ಹೊರಡಿಸಲು ಸೂಚಿಸಲಾಗಿದೆ.
ಧರ್ಮಸ್ಥಳದ ತಲೆಬುರುಡೆ ಪ್ರಕರಣ ಹಾಗೂ ಸೌಜನ್ಯ ಪ್ರಕರಣಗಳಲ್ಲಿ ಹೋರಾಟ ನಡೆಸುತ್ತಿದ್ದ ತಿಮರೋಡಿ ಅವರನ್ನು ಪುತ್ತೂರು ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಸೆಪ್ಟೆಂಬರ್ 20ರಂದು ಒಂದು ವರ್ಷಗಳ ಕಾಲ ಮಾನ್ವಿಗೆ ಗಡಿಪಾರು ಮಾಡುವ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ತಿಮರೋಡಿ ಹೈಕೋರ್ಟ್ ಮೊರೆ ಹೋಗಿದ್ದರು.
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಸುಮಾರು 32 ಪ್ರಕರಣಗಳು ದಾಖಲಾಗಿದ್ದವು ಎಂಬ ಕಾರಣದಿಂದಲೇ ಜಿಲ್ಲಾಡಳಿತ ಗಡಿಪಾರು ಕ್ರಮಕ್ಕೆ ಮುಂದಾಗಿತ್ತು. ಆದರೆ ಹೈಕೋರ್ಟ್ ಈ ಗಡಿಪಾರು ಆದೇಶದಲ್ಲಿ ಕಾನೂನು ಪ್ರಕ್ರಿಯೆಯ ತೊಂದರೆಯನ್ನು ಗುರುತಿಸಿ ಅದನ್ನು ರದ್ದುಪಡಿಸಿದೆ.
