ಪಂಜಾಬ್ ನ ಬಟಿಂಡಾ ಜಿಲ್ಲೆಯ ಜಿಯೋಂಡ್ ಪ್ರದೇಶದಲ್ಲಿ ರೈತರು ನಡೆಸಿದ ಪ್ರತಿಭಟನೆ ಮಂಗಳವಾರ ಉದ್ವಿಗ್ನತೆಯ ನಡುವೆ ಹಿಂಸಾಚಾರಕ್ಕೆ ತಿರುಗಿದ ಘಟನೆ ವರದಿಯಾಗಿದೆ. ಜಿಲ್ಲಾ ಆಡಳಿತ ಸಂಕೀರ್ಣ (DCA) ಕಚೇರಿಯತ್ತ ಮೆರವಣಿಗೆ ನಡೆಸಲು ಯತ್ನಿಸಿದ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತೀವ್ರ ಘರ್ಷಣೆ ಸಂಭವಿಸಿದೆ.
ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದು, ಈ ವೇಳೆ ಹಲವು ರೈತರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಶ್ರುವಾಯು ಪ್ರಯೋಗಕ್ಕೂ ಮುನ್ನಾ ಎರಡೂ ಕಡೆಯವರು ಪರಸ್ಪರ ಕಲ್ಲು ಹಾಗೂ ಇಟ್ಟಿಗೆಗಳನ್ನು ತೂರಿಕೊಂಡಿದ್ದಾರೆ ಎನ್ನಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ನಗರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ನಾಕಾಬಂಧಿ ಹೇರಲಾಗಿತ್ತು. ಮಂಗಳವಾರ ರಾತ್ರಿ ಆರಂಭವಾದ ಕಾರ್ಯಾಚರಣೆಯಲ್ಲಿ ಹಲವಾರು ರೈತ ಮುಖಂಡರನ್ನು ಬಂಧಿಸಲಾಗಿದ್ದು, ಕೆಲವರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಹಿಳೆಯರು ಸೇರಿದಂತೆ ಕೆಲವು ರೈತರನ್ನು ಜಿಯೋಂಡ್ ಗ್ರಾಮದಿಂದ ವಶಕ್ಕೆ ಪಡೆಯಲಾಗಿದೆ.
ಬಟಿಂಡಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜ್ಯೋತಿ ಯಾದವ್ ಪ್ರತಿಕ್ರಿಯಿಸಿ, ಉದ್ರಿಕ್ತ ಗುಂಪು ಮನೆಗಳ ಮೇಲ್ಛಾವಣಿಗಳಿಂದ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದೆ. ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅಶ್ರುವಾಯು ಪ್ರಯೋಗಿಸುವ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಯಾಗಿ ಪ್ರತಿಭಟನಾಕಾರರು, ತಮ್ಮ ಹೋರಾಟ ಪ್ರಜಾಸತ್ತಾತ್ಮಕ ಹಕ್ಕಿನ ಭಾಗವಾಗಿದ್ದು, ಪ್ರತಿಭಟನೆಗೂ ಮುನ್ನವೇ ಪೊಲೀಸರು ರೈತ ಮುಖಂಡರ ನಿವಾಸಗಳ ಮೇಲೆ ದಾಳಿ ನಡೆಸಿ ಬಂಧಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ (Ekta Ugrahan) ತನ್ನ ಇಬ್ಬರು ಕಾರ್ಯಕರ್ತರಾದ ಶಗನ್‌ದೀಪ್ ಸಿಂಗ್ ಜಿಯೋಂಡ್ ಹಾಗೂ ಬಲದೇವ್ ಸಿಂಗ್ ಚೌಕೆ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ DCA ಕಚೇರಿ ಹೊರಗೆ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಕರೆ ನೀಡಿತ್ತು. ಕಳೆದ ವರ್ಷ ನಡೆದ ಪ್ರತಿಭಟನೆಯ ವೇಳೆ ಇವರಿಬ್ಬರನ್ನು ಬಂಧಿಸಲಾಗಿದ್ದು, ಏಪ್ರಿಲ್‌ನಿಂದ ಬಟಿಂಡಾ ಜೈಲಿನಲ್ಲಿ ಇರಿಸಲಾಗಿತ್ತು.
ಭಾರೀ ಪೊಲೀಸ್ ನಿಯೋಜನೆಯ ನಡುವೆಯೂ ಫರೀದ್‌ಕೋಟ್ ಜಿಲ್ಲೆಯ ಜೈತೋ ಬ್ಲಾಕ್‌ನಿಂದ ಕೆಲ ರೈತರು ಮಧ್ಯಾಹ್ನ DAC ಕಚೇರಿಯತ್ತ ತಲುಪಿದರೂ, ಅವರನ್ನು ತಕ್ಷಣವೇ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಈ ನಡುವೆ, ಶಗನ್‌ದೀಪ್ ಸಿಂಗ್ ಹಾಗೂ ಬಲದೇವ್ ಸಿಂಗ್ ಅವರಿಗೆ ಬುಧವಾರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.
