ರಾಜೌರಿ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಪಾಕಿಸ್ತಾನಿ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಸಾವಿಗೀಡಾಗಿದ್ದು, ಇಬ್ಬರು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ. “ರಾಜೌರಿಯಿಂದ ಒಂದು ಭಯಾನಕ ಸುದ್ದಿ ಬಂದಿದೆ. ನಾವು ಜಮ್ಮು ಮತ್ತು ಕಾಶ್ಮೀರ ಆಡಳಿತ ಸೇವೆಗಳಿಗೆ ಸಮರ್ಪಿತಗೊಂಡಿದ್ದ ಅಧಿಕಾರಿಯನ್ನು ಕಳೆದುಕೊಂಡಿದ್ದೇವೆ” ಎಂದು ಅವರು ಹೇಳಿದ್ದಾರೆ.

“ಈ ಭೀಕರ ಜೀವಹಾನಿಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ.. ರಾಜ್ ಕುಮಾರ್ ತಪ್ಪಾ ಅವರ ಹಠಾತ್ ನಿಧನಕ್ಕೆ ನಾನು ಸಂತಾಪ ಸೂಚಿಸುತ್ತೇನೆ..” ಎಂದು ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.
ರಾಜೌರಿ ಪಟ್ಟಣದಲ್ಲಿರುವ ಹೆಚ್ಚುವರಿ ಉಪ ಆಯುಕ್ತ (ಎಡಿಸಿ) ರಾಜ್ ಕುಮಾರ್ ಥಾಪಾ ಅವರ ನಿವಾಸಕ್ಕೆ ಬಾಂಬ್ ಶೆಲ್ ಬಡಿದು ಅವರು ಸಾವಿಗೀಡಾದರು ಮತ್ತು ಅವರ ಇಬ್ಬರು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡರು.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗುವುದು ಎಂದು ಹೇಳಲಾಗಿದೆ.